ಒಮ್ಮೊಮ್ಮೆ ಪ್ರೀತಿಯ ವಿರಾಟ ರೂಪ ನನ್ನ ನಿದ್ದೆಗೆಡಿಸುತ್ತದೆ. ಆ ಪ್ರೀತಿಗೆ ಮುಖಗಳೆಷ್ಟು? ಜಗದಗಲ ಹಬ್ಬಿ, ಕೋಟಿ ಕೋಟಿ ಜೀವದೊಳಗೆ ಅವಿತು, ಪರಿಮಳ ಬೀರುತ್ತಲೇ ಇದೆಯಲ್ಲ, ಅದರ ಮಾಯೆಯಾದರೂ ಎಂಥದ್ದು? ನನ್ನ ಅಂತರಂಗದಲ್ಲೂ ಅದೆಷ್ಟು ಪ್ರೀತಿಗಳು ಹೂ ಮೊಗ್ಗಾಗಿ, ನಗುಬೀರುತ್ತಿರಬಹುದು ಎನ್ನುವ ಕುತೂಹಲ ಒಮ್ಮೆ ಬಂತು. ಅಂತರಂಗದ ಕಿಟಕಿ ತೆರೆದು ನೋಡಿದೆ. ಅಲ್ಲಿ ಬಗೆ ಬಗೆಯ ಪ್ರೀತಿಯ ರೂಪಾಂತರಗಳಿದ್ದವು. ಅದೊಂದು ಉದ್ಯಾನದಂತೆ, ಧ್ಯಾನಕ್ಕೆ ಕುಳಿತ ಹೂವಿನಂತೆ ಆ ಪ್ರೀತಿಗಳು ಕಂಪನಡರುತ್ತಿದ್ದವು. ಒಂದೊಂದು ಬಣ್ಣದಲ್ಲಿ, ಒಂದೊಂದು ಅರ್ಥದಲ್ಲಿ ಅವು ಪ್ರೀತಿಯ ವ್ಯಾಖ್ಯಾನ ಹೊಮ್ಮಿಸುತ್ತಿದ್ದವು.
ಜೀವನದಲ್ಲಿ ಒಮ್ಮೆ ಮಾತ್ರ ಯಾರನ್ನಾದರೂ ಪ್ರೀತಿಸಲು ಸಾಧ್ಯ ಎನ್ನುವ ಲೋಕದ ಉಕ್ತಿಯನ್ನು ಭಕ್ತಿಯಿಂದ ನಂಬಿದ್ದ ನನಗೆ, ಕೊನೆ ಕೊನೆಗೆ ಈ ಕವಿಗಳೆಲ್ಲ ಹೇಳುವುದು ಸುಳ್ಳೇ ಸುಳ್ಳು ಅಂತನ್ನಿಸಿಬಿಟ್ಟಿತು. ಅವರೆಲ್ಲ ಪ್ರೀತಿಯನ್ನು ಹೆಣ್ಣು- ಗಂಡಿನ ನಡುವೆ ಜರುಗುವ ಕ್ರಿಯೆಯೆಂದು ನೋಡುತ್ತಾರೆ. ಗುಲಾಬಿಯನ್ನೋ, ಉಂಗುರವನ್ನೋ ಸಂಕೇತದಂತೆ ಪ್ರೇಮಕತೆಯೊಳಗೆ ತಂದು ನಿಲ್ಲಿಸುತ್ತಾರೆ. ಅವರ ಕಣ್ಸ್ನ್ನೆ, ತುಟಿಯಂಚಿನ ನಗು, ಮುಂಗುರಳ ವೈಯ್ನಾರ, ಪಿಸುಮಾತುಗಳಿಗೆಲ್ಲ ಬಣ್ಣ ಬಳಿದು, ಪ್ರೀತಿಯ ಮುನ್ಸೂಚನೆಯೆಂದು ಬಣ್ಣಿಸುತ್ತಾರೆ. ಅಂತಿಮದಲ್ಲಿ ಪ್ರೀತಿಯ ಎರಡು ತುದಿಗಳು ಹೆಣ್ಣು- ಗಂಡು ಎಂಬುದನ್ನು ಗಣಿತದ ಪ್ರಮೇಯದಂತೆ ಸಾಬೀತುಪಡಿಸಿ, ಕಾವ್ಯಸಾಹಸವನ್ನು ಮುಗಿಸುತ್ತಾರೆ.
ನನಗೂ ಇದೇ ನಿಜವೆಂದೆನ್ನಿಸಿತ್ತು. ಹಾಗಾದರೆ, ಮನೆಗೆ ಮಲ್ಲಿಗೆ ಹಾಕಲು ಬರುವ ಅಜ್ಜಿ ಮೇಲಿನ ನನ್ನ ಕಕ್ಕುಲಾತಿ; “ಮೂರ್ ವರ್ಷದಿಂದ ಟ್ರೈ ಮಾಡ್ತನೇ ಇದ್ದೀನಿ, ಇವತ್ ನಿಮ್ ಕಾಲ್ ಸಿಕ್ಕಿತು’ ಎನ್ನುವ, ಎಲ್ಲೋ ಪಾತ್ರೆ ತೊಳೆಯುತ್ತಾ, ಕಿವಿಗೆ ಇಯರ್ ಫೋನ್ ಹಾಕ್ಕೊಂಡು ಮಾತಾಡುವ ಗೃಹಿಣಿಯ ಸಂಯಮ ಸಾಗರದಾಳದ ಪ್ರೀತಿ; ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಆಚೆ ನೋಡಿದಾಗ, ಹಾಯ್ ಎಂದು ಕೊರಳುಬ್ಬಿಸಿ, ಕೈತೋರಿಸಿ ನನ್ನತ್ತ ಪುಟಿಯಲು ಹಂಬಲಿಸುವ ಪುಟಾಣಿಯ ಪ್ರೀತಿ; ನಾನು ಮನೆಯೊಳಗೆ ಕಾಲಿಟ್ಟೇ ಅಂದಾಕ್ಷಣ, ನನಗಿಂತ ಹೆಚ್ಚು ಮಾತಾಡುವ, ಚೀಂವ್‌ಚೀಂವ್ ಗುಡುವ ಬಣ್ಣದ ಗಿಳಿ; ಮುದ್ದುಮುದ್ದಾಗಿರುವ ಆ ಟೆಡ್ಡಿ ಮೇಲಿರುವ ನನ್ನ ಸೆಳೆತ… ಇವೆಲ್ಲವೂ ಪ್ರೀತಿಯ ಟಿಸಿಲುಗಳೇ ಅಲ್ಲವೇ?
ಅದಕ್ಕಾಗಿ ನಾನು ಪ್ರೀತಿಯ ಪ್ರಪಂಚ ದೊಡ್ಡದು ಎಂದೆ. ಅದರ ಬಣ್ಣಗಳನ್ನು ಎಣಿಸಲಾಗದೆ, ಸಿಹಿಸೋಲನ್ನು ಅನುಭವಿಸುತ್ತಲೇ ಇರುವೆ. ಈ ಪುಟ್ಟ ಪುಟ್ಟ ಪ್ರೀತಿಗಳೇ ನಮ್ಮ ಬದುಕಿನ ಓಟಕ್ಕೆ ಬಹುದೊಡ್ಡ ಕಾರಣ. ಅಂತರಂಗದಲ್ಲಿ ಆಕಾಶದಷ್ಟು ಪ್ರೀತಿಯನ್ನು ತುಂಬಿಕೊಂಡಾಗಲಷ್ಟೇ ಬದುಕು ಸಿಹಿಯಾಗಲು ಸಾಧ್ಯ. ನೀವೂ ಯತ್ನಿಸಿ.