Advertisement

ಪ್ರೇಮ ಪ್ರಸಂಗದ ಭಾವುಕತೆ…

11:22 AM Jul 07, 2018 | |

“ನನ್‌ ಹೆಂಡ್ತಿ ಪತಿವ್ರತೆ. ಅವಳು ತುಂಬಾ ಒಳ್ಳೇವ್ಳು. ಅವಳ ಬಗ್ಗೆ ಯಾರೂ ಮಾತಾಡ್ಬೇಡಿ…’ ಹೀಗೆ ನೋವು ತುಂಬಿದ ಮಾತುಗಳಲ್ಲಿ ಆ ತಿಮ್ಮ ಹೇಳುವ ಹೊತ್ತಿಗೆ, ಅವನ ನಿಷ್ಕಲ್ಮಷ ಹೃದಯ ಚೂರಾಗಿರುತ್ತೆ. ಮುಗ್ಧ ಮನಸ್ಸು ಭಾರವಾಗಿರುತ್ತೆ. ಕೊನೆಯಲ್ಲಿ ಆ ತಿಮ್ಮನ ಪರಿಸ್ಥಿತಿ ನೋಡುಗರಲ್ಲೂ ಮಮ್ಮಲ ಮರಗುವಂತೆ ಮಾಡುತ್ತೆ. ಇದು “ಪರಸಂಗ’ನ ಪ್ರೇಮ ಪ್ರಸಂಗದ ಭಾವನೋಟ. “ಪರಸಂಗ’ ಅಂದಾಕ್ಷಣ, ನೆನಪಾಗೋದೇ ಲೋಕೇಶ್‌ ಅವರ “ಪರಸಂಗದ ಗೆಂಡೆತಿಮ್ಮ’.

Advertisement

ಆದರೆ, ಆ ತಿಮ್ಮನಿಗೂ ಈ ತಿಮ್ಮನಿಗೂ ಸಂಬಂಧವಿಲ್ಲವಾದರೂ, ಒಂದಷ್ಟು ಸಾಮ್ಯತೆಯಂತೂ ಇದೆ. ಈ ತಿಮ್ಮನ ಬದುಕಲ್ಲೂ ಮಜಬೂತೆನಿಸುವ ಸನ್ನಿವೇಶಗಳಿವೆ, ಎದೆ ಭಾರವಾಗಿಸುವ ಸಂದರ್ಭಗಳೂ ಇವೆ. ಒಂದು ನೈಜ ಕಥೆ ಇಟ್ಟುಕೊಂಡು ಒಪ್ಪುವ ಮತ್ತು ಅಪ್ಪುವ ಚಿತ್ರ ಕಟ್ಟಿಕೊಡುವುದು ಸವಾಲಿನ ಕೆಲಸ. ಆದರೆ, ನಿರ್ದೇಶಕ ರಘು ಒಂದು ಅಪ್ಪಟ ಹಳ್ಳಿ ಸೊಗಡಿನ ಚಿತ್ರಣದ ಜೊತೆಗೆ ವಾಸ್ತವ ಬದುಕು, ಬವಣೆ ಮತ್ತು ಭಾವನಾತ್ಮಕ ಸಂಬಂಧಗಳ ಮೌಲ್ಯವನ್ನು ಕಟ್ಟಿಕೊಡುವ ತಕ್ಕಮಟ್ಟಿಗಿನ ಪ್ರಯತ್ನ ಮಾಡಿದ್ದಾರೆ.

ಕಿರಿಕಿರಿ ಇಲ್ಲದೆ ನೋಡಿಸಿಕೊಂಡು ಹೋಗುತ್ತೆ ಅನ್ನುವುದಾದರೆ, ಅದು ಇಲ್ಲಿರುವ ಕಥೆ, ಕಾಣಿಸಿಕೊಳ್ಳುವ ತರಹೇವಾರಿ ಪಾತ್ರಗಳು, ಗ್ರಾಮೀಣ ಭಾಷೆ, ಭಾವ ಮತ್ತು ಪರಿಸರ. ಈ ಎಲ್ಲದರ ತಾಕತ್ತಿನಿಂದ “ತಿಮ್ಮ’ ಒಂದಷ್ಟು ಆಪ್ತ ಎನಿಸುವುದು ನಿಜ. ಚಿತ್ರದ ಮೊದಲರ್ಧ ಮಾತಲ್ಲೇ ಸಾಗುತ್ತದೆ. ಅಷ್ಟೊಂದು ಡಬ್ಬಲ್‌ ಮೀನಿಂಗ್‌ ಮಾತುಗಳಿಗೆ ಒತ್ತು ಜಾಸ್ತಿಯಾಗಿದ್ದು, ಕೆಲವೆಡೆ ಅಂತಹ ಮಾತುಗಳಿಗೆ ಕತ್ತರಿ ಬಿದ್ದಿದ್ದರೆ, “ತಿಮ್ಮ’ ಇನ್ನಷ್ಟು ಆಪ್ತವೆನಿಸುತ್ತಿದ್ದ. ಆದರೂ, ಕೆಲ ತಪ್ಪುಗಳನ್ನು ಬದಿಗೊತ್ತಿ ನೋಡುವುದಾದರೆ, ದೊಡ್ಡ ಮೋಸವೇನೂ ಇಲ್ಲ.

ಮನರಂಜನೆಗೆ ಎಷ್ಟು ಜಾಗವಿದೆಯೋ ಅಷ್ಟೇ ಜಾಗ ಭಾವುಕತೆಗೂ ಇದೆ. ಇಲ್ಲಿ ಮುಗ್ಧತೆ, ಮೌಡ್ಯತೆ, ನಂಬಿಕೆ ಮತ್ತು ಅಪನಂಬಿಕೆಗಳೇ ಆವರಿಸಿಕೊಂಡಿವೆ. ಹಾಗಾಗಿ, ಯಾವುದೇ ಮರಸುತ್ತುವ ಹಾಡಾಗಲಿ, ಹೊಡಿ, ಬಡಿ, ಕಡಿ ಎಂಬ ಸದ್ದಾಗಲಿ ಇಲ್ಲ. ಕೆಲವೆಡೆ ಮಾತ್ರ ಕಾಡುವ ಗುಣಗಳನ್ನು ಹೊಂದಿರುವ ತಿಮ್ಮ, ಆಗಾಗ ಬೇಸರಿಸುವುದೂ ಉಂಟು. ನಲಿವು-ನೋವಿನ ಬೆಸುಗೆಯ ಸುಳಿಯಲ್ಲಿ ಸಿಲುಕುವ “ತಿಮ್ಮ’ನ ಬಗ್ಗೆ ಒಂದಿಷ್ಟಾದರೂ ಆಸಕ್ತಿ ಮೂಡಿದರೆ, ಪ್ರೇಮಸಂಗದ ನಂಟನ್ನು ನೋಡಿಬರಬಹುದು.

ತಿಮ್ಮ ಮುಗ್ಧ. ಅವನಿಗೊಬ್ಬ ಸುಂದರ ಹೆಂಡತಿ. ಅವನೊಂದು ರೀತಿ ಅಮ್ಮಾವ್ರ ಗಂಡ. ಆಕೆಯದ್ದು ಚಂಚಲ ಮನಸ್ಸು. ಅವನದು ಮುಗ್ಧ ಮನಸು. ಊರು ಏನೇ ಅಂದುಕೊಂಡರೂ ಅವನಿಗೆ ತನ್ನ ಹೆಂಡತಿ ಸರ್ವಸ್ವ. ಅವಳ ಬಗ್ಗೆ ಊರು ಜನ ನೂರೆಂಟು ಮಾತಾಡಿದರೂ ಅವನಿಗೆ ಆಕೆ ಪತಿವ್ರತೆ. ಅಂತಹ ಪತಿವ್ರತೆ “ಪರಸಂಗ’ ಮಾಡಿದಾಗ ಏನೆಲ್ಲಾ ಅವಘಡಗಳು ಎದುರಾಗುತ್ತವೆ, ಆ ಮುಗ್ಧ ತಿಮ್ಮನ ಬದುಕಲ್ಲಿ ಏನೆಲ್ಲಾ ಬದಲಾವಣೆಯಾಗುತ್ತವೆ,

Advertisement

ಆ ಪತಿವ್ರತೆಯ “ಸಂಗ’ ಬೆಳೆಸುವರ್ಯಾರು ಎಂಬ ಕುತೂಹಲವಿದ್ದರೆ ತಿಮ್ಮನ ಕಥೆ-ವ್ಯಥೆಯನ್ನೊಮ್ಮೆ ಕೇಳಿ, ನೋಡಿಬರಲ್ಲಡ್ಡಿಯಿಲ್ಲ. ತಿಮ್ಮನಾಗಿ ಮಿತ್ರ ಅವರ ನಟನೆ ಎಂದಿಗಿಂತಲೂ ಇಲ್ಲಿ ಗಮನಸೆಳೆಯುತ್ತದೆ. ಒಬ್ಬ ಮುಗ್ಧ ವ್ಯಕ್ತಿಯ ವ್ಯಕ್ತಿತ್ವ ಅನಾವರಣಗೊಳಿಸುವ ಮೂಲಕ ಗಮನಸೆಳೆಯುತ್ತಾರೆ. ಅಕ್ಷತಾ ಗ್ಲಾಮರ್‌ಗೆ ಸೀಮಿತವೆನಿಸಿದರೂ, ಸಿಕ್ಕ ಪಾತ್ರವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಮನೋಜ್‌ ಪುತ್ತೂರು ನಟನೆ ಕೂಡ ಇಷ್ಟವಾಗುತ್ತದೆ.

ಕನೆಕ್ಷನ್‌ ಪಾತ್ರದ ಮೂಲಕ ಕಚಗುಳಿ ಇಡುವ ಮಾತು ಮತ್ತು ನಟನೆ ಮೂಲಕ ಚಂದ್ರಪ್ರಭ ಪ್ರತಿಭೆ ಹೊರಹೊಮ್ಮಿದೆ. ಉಳಿದಂತೆ ತೆರೆ ಮೇಲೆ ಕಾಣುವ ಪಾತ್ರಗಳು ತಮ್ಮ ಕೆಲಸವನ್ನು ನಿರ್ವಹಿಸಿವೆ. ಹರ್ಷವರ್ಧನ್‌ ರಾಜ್‌ ಸಂಗೀತದ ಎರಡು ಹಾಡು ಗುನುಗುವಂತಿವೆ. ಹಿನ್ನೆಲೆ ಸಂಗೀತಕ್ಕಿನ್ನಷ್ಟು ಸ್ವಾದ ಬೇಕಿತ್ತು. ಸುಜಯ್‌ಕುಮಾರ್‌ ಛಾಯಾಗ್ರಹಣದಲ್ಲಿ ಹಳ್ಳಿ ಪರಿಸರ ಮತ್ತು ತಿಮ್ಮನ ಹಾಡು,ಕುಣಿತ ಮೇಳೈಸಿದೆ.

ಚಿತ್ರ: ಪರಸಂಗ
ನಿರ್ದೇಶನ: ಕೆ.ಎಂ. ರಘು
ನಿರ್ಮಾಣ: ಕುಮಾರ್‌, ಮಹಾದೇವ ಗೌಡ, ಲೋಕೇಶ್‌
ತಾರಾಗಣ: ಮಿತ್ರ, ಅಕ್ಷತಾ, ಮನೋಜ್‌, ಗೋವಿಂದೇಗೌಡ, ಚಂದ್ರಪ್ರಭ, ಸಂಜು ಬಸಯ್ಯ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next