Advertisement

Tragic Love Story: ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ; ಆಘಾತದಿಂದ ನೇಣಿಗೆ ಶರಣಾದ ಪ್ರಿಯತಮೆ

03:34 PM Oct 04, 2023 | Team Udayavani |

ಹೈದರಾಬಾದ್: ಪ್ರಿಯಕರನ ಸಾವಿನಿಂದ ನೊಂದಿದ್ದ ಪ್ರಿಯತಮೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Advertisement

ಪಂಜಾಬ್‌ ಮೂಲದ ನೇಹಾ (19) ಮೃತ ಯುವತಿ.

ಏನಿದು ಪ್ರಕರಣ?: ನೇಹಾ ಪಂಜಾಬ್ ಮೂಲದವರಾಗಿದ್ದು, ಹೈದರಾಬಾದ್ ನಲ್ಲಿ ಹಾಸ್ಟೆಲ್‌ನಲ್ಲಿ ವಾಸವಿದ್ದಳು. ಕಳೆದ 8 ತಿಂಗಳಿನಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್‌ ಎನ್ನುವ ಯುವಕನೊಬ್ಬನ ಜೊತೆ ನೇಹಾಳಿಗೆ ಪ್ರೀತಿ ಆಗಿದೆ.

ಆದರೆ ಇಬ್ಬರ ನಡುವಿನ ಪ್ರೀತಿಯ ವಿಚಾರ ಅಂಗಡಿಯ ಮಾಲೀಕರಿಗೆ ಗೊತ್ತಾಗಿದ್ದು, ಈ ಕಾರಣದಿಂದ ಸಲ್ಮಾನ್‌ ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದಲ್ಲದೆ ಸಲ್ಮಾನ್‌ ಮನೆಯವರಿಗೆ ನೇಹಾಳೊಂದಿಗಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ಮನನೊಂದಿದ್ದ ಸಲ್ಮಾನ್‌ ಅಕ್ಟೋಬರ್‌ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.

ಪ್ರಿಯಕರ ಸಲ್ಮಾನ್‌ ಆತ್ಮಹತ್ಯೆ ಮಾಡಿಕೊಂಡ ವಿಚಾರದಿಂದ ಹತಾಶರಾಗಿ, ಖಿನ್ನತೆ ರೀತಿಯಿದ್ದ ನೇಹಾ ಮಂಗಳವಾರ (ಅ. 3ರಂದು) ಹಾಸ್ಟೆಲ್‌ ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

Advertisement

ಸ್ವಚ್ಛತಾ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಲು ಬಂದಾಗ ಬಾಗಿಲು ತಟ್ಟಿದರೂ ನೇಹಾ ಸ್ಪಂದಿಸಲಿಲ್ಲ. ಹಾಸ್ಟೆಲ್ ಸಿಬ್ಬಂದಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ನೇಹಾ ಕೋಣೆಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಈ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಿಯಕರನ ಆತ್ಮಹತ್ಯೆಯ ಸುದ್ದಿಯನ್ನು ಸಹಿಸಲಾಗದೆ ಆಕೆ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next