ಮುಂಬಯಿ: ಯಾವುದೇ ತಾರತಮ್ಯ ಎಸಗದೇ ರಾಜ್ಯದಲ್ಲಿರುವ ಸಾವಿರಾರು ಅನಧಿಕೃತ ಲೌಡ್ ಸ್ಪೀಕರ್ ಗಳನ್ನು ತೆಗೆದು ಹಾಕಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಮಕ್ಕೆ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್)ದ ವರಿಷ್ಠ ರಾಜ್ ಠಾಕ್ರೆ ಬಹುಪರಾಕ್ ಹೇಳಿದ್ದಾರೆ.
ಇದನ್ನೂ ಓದಿ:“ಈ ದೇಶದಲ್ಲಿ” ಕೇವಲ ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ: ಒಮರ್ ಅಬ್ದುಲ್ಲಾ
ಮತ್ತೊಂದೆಡೆ ಲೌಡ್ ಸ್ಪೀಕರ್ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಳ್ಳದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ರಾಜ್ ಠಾಕ್ರೆ ಕಿಡಿಕಾರಿದ್ದು, ಮಹಾರಾಷ್ಟ್ರದಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿನ ಅನಧಿಕೃತ ಲೌಡ್ ಸ್ಪೀಕರ್ ತೆರವುಗೊಳಿಸುವ ಧೈರ್ಯ ಇಲ್ಲ ಎಂದು ಟೀಕಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳಲ್ಲಿನ ಲೌಡ್ ಸ್ಪೀಕರ್ ಗಳನ್ನು, ಅದರಲ್ಲೂ ಮುಖ್ಯವಾಗಿ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರಾಜ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.
“ದುರದೃಷ್ಟವಶಾತ್ ನಮ್ಮ ಮಹಾರಾಷ್ಟ್ರದಲ್ಲಿ ಯಾವುದೇ ಯೋಗಿಗಳು ಇಲ್ಲ, ನಮ್ಮಲ್ಲಿರುವುದು ಭೋಗಿಗಳು (ಚಲ್ಲಾಟವಾಡುವವರು). ಇಲ್ಲಿ ಭರವಸೆ ಮತ್ತು ಉತ್ತಮ ಪ್ರಾರ್ಥನೆಗಳು ಮೇಲುಗೈ ಸಾಧಿಸುತ್ತದೆ” ಎಂದು ರಾಜ್ ಠಾಕ್ರೆ ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಧಾರ್ಮಿಕ ಕ್ಷೇತ್ರಗಳಲ್ಲಿನ ಸುಮಾರು 11,000 ಅನಧಿಕೃತ ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸಿದೆ. ಸುಮಾರು 35,000 ಲೌಡ್ ಸ್ಪೀಕರ್ ಪರವಾನಿಗೆ ಹೊಂದಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ಉದ್ಧವ್ ವಿರುದ್ಧ ಟೀಕಾಪ್ರಹಾರ ನಡೆಸಿರುವುದಾಗಿ ವರದಿ ತಿಳಿಸಿದೆ.