Advertisement
ಮಂಗಳವಾರ ನೆಹರೂ ಮೈದಾನದಲ್ಲಿ ಸಮಾವೇಶ ಮುಗಿಸಿದ ರಾಹುಲ್ ಗಾಂಧಿ ಉಳ್ಳಾಲ ದರ್ಗಾಕ್ಕೆ ವಿಶೇಷ ವಾಹನದಲ್ಲಿ ತೆರಳುತ್ತಿದ್ದಾಗ ತೊಕ್ಕೊಟ್ಟು ಸಮೀಪದ ಕಲ್ಲಾಪು ಮತ್ತು ಉಳ್ಳಾಲ ದರ್ಗಾ ಬಳಿ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಆಗ ಜನರ ದಟ್ಟಣೆ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಇದನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದರು. ಘಟನೆ ಕುರಿತು ಸಚಿವ ಯು.ಟಿ. ಖಾದರ್ ಗಮನಕ್ಕೆ ತಂದಿದ್ದರು. ಸಚಿವರು ಈ ಬಗ್ಗೆ ಮುಖ್ಯಮಂತ್ರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಕಮಿಷನರ್‌ಗೆ ಆದೇಶಿಸಿದ್ದರು. ಸ್ಥಳಕ್ಕೆ ತೆರಳಿದ ಕಮಿಷನರ್ ಅವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ ಹಾಗೂ ಡಿಸಿಪಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು ಎಂಬುದಾಗಿ ವ್ಯಾಪಕ ಸುದ್ದಿಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ನಗರದ ಜ್ಯೋತಿ ಜಂಕ್ಷನ್‌ನಲ್ಲಿ ಮಂಗಳವಾರ ಸಂಜೆ ರೋಡ್ ಶೋ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಾಹನದ ಮೇಲೇರಿದ್ದು, ಕಾಂಗ್ರೆಸ್ ಧ್ವಜ ಹಿಡಿದು ಘೋಷಣೆ ಕೂಗಿ ಮೆರವಣಿಗೆಯಲ್ಲಿ ಸಾಗಿದ್ದರು. ವಾಹನದಲ್ಲಿದ್ದ ಪೊಲೀಸರು ನಿರಾಕರಿಸಿದರೂ ಅವರ ವಿನಂತಿಯನ್ನು ಪಾಲಿಸಿಲ್ಲ. ಈ ಬಗ್ಗೆ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ವಾಹನ ದುರ್ಬಳಕೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಜರಗಿಸುತ್ತಿಲ್ಲವೇಕೆ ಎಂದು ಅನೇಕ ಮಂದಿ ಪ್ರಶ್ನಿಸಿದ್ದಾರೆ. ಈ ವಿಚಾರವೂ ಗಮನಕ್ಕೆ ಬಂದಿದೆ; ಪೊಲೀಸ್ ವಾಹನದ ಸಿಬಂದಿಯನ್ನು ಪ್ರಶ್ನಿಸಿ ಅಗತ್ಯ ಬಿದ್ದರೆ ಕ್ರಮ ಜರಗಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕಮಿಷನರ್ ಟಿ.ಆರ್. ಸುರೇಶ್ ವಿವರಿಸಿದ್ದಾರೆ.