ಉಡುಪಿ/ಮಲ್ಪೆ: ಈ ಚುನಾವಣೆ ಭಾರತವನ್ನು ಗೆಲ್ಲಿಸುವ ಚುನಾವಣೆ. “ಲೋಟಸ್’ ಮತ್ತು “ಲೂಟ್ ಅಸ್’ ನಡುವೆ ನಡೆಯುತ್ತಿರುವ ಚುನಾವಣೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.
ಮಲ್ಪೆ ವಡಭಾಂಡೇಶ್ವರದಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ದೇಶವನ್ನು ಲೂಟಿ ಮಾಡಿದರು. ಪ್ರಧಾನಿ ಮೋದಿ ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಇತ್ತೀಚೆಗೆ, “ಮೋದಿ ಮನೆ ಹಾಳಾಗ’ ಎಂದು ಟೀಕಿಸಿದ್ದಾರೆ. ಮೋದಿಗೆ ದೇಶವೇ ಮನೆ. ಮೋದಿ ಮನೆ ಹಾಳಾಗ ಅಂದರೆ ದೇಶ ಹಾಳಾಗು ತ್ತದೆ ಎಂದು ಬಣ್ಣಿಸಿದರು.
ಇದು ಚೌಕಿದಾರ್ ಮತ್ತು ಚೋರರ ನಡುವಿನ ಚುನಾವಣೆಯೂ ಹೌದು. ಮೋದಿ ಚೌಕಿದಾರರ ನೇತೃತ್ವ ವಹಿಸಿದ್ದರೆ, ದೇಶ ಲೂಟಿ ಮಾಡಿದ ಚೋರರ ಗುಂಪಿನ ನೇತೃತ್ವವನ್ನು ರಾಹುಲ್ ವಹಿಸಿದ್ದಾರೆ. ನಾವು ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗಿದೆ ಎಂದರು.
ಹಾಲಿ ಸಂಸದೆ, ಭಾವೀ ಸಂಸದೆ!
ಶೋಭಾ ಕರಂದ್ಲಾಜೆಯವರನ್ನು ಸಂಬೋಧಿಸುವಾಗ ಶಾಸಕ ರಘುಪತಿ ಭಟ್ ಮತ್ತು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿಯವರು “ಹಾಲಿ ಸಂಸದರೂ ಭಾವೀ ಸಂಸದರೂ’ ಎಂದೇ ಉಲ್ಲೇಖೀಸಿದರು. ರ್ಯಾಲಿಯಲ್ಲಿ ಕೇಸರಿ ಪೇಟ ಧರಿಸಿದ ಚೌಕೀದಾರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.