Advertisement

ಕಮಲಾಪುರದಲ್ಲಿಂದು ಕಮಲ ಕಹಳೆ

09:52 AM Dec 04, 2017 | Team Udayavani |

ಕಲಬುರಗಿ: ಮುಂಬರುವ 201ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ತೀವ್ರ ಗಮನ ಸೆಳೆಯುವ ಕ್ಷೇತ್ರವೆಂದೇ ಖ್ಯಾತಿ ಪಡೆಯುತ್ತಿರುವ ಕಲಬುರಗಿ ಗ್ರಾಮೀಣ ಕ್ಷೇತ್ರದ ಕಮಲಾಪುರ ಪಟ್ಟಣದಲ್ಲಿ ಡಿ. 4ರಂದು ಕಮಲ ಕಹಳೆ ಮೊಳಗಲಿದೆ.

Advertisement

ಕಾಂಗ್ರೆಸ್‌ ಮುಕ್ತ ಕರ್ನಾಟಕ, ನವ ಕರ್ನಾಟಕ ನಿರ್ಮಾಣ ಧ್ಯೇಯದೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಂಡಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಬಹಿರಂಗ ಸಭೆ ಸೋಮವಾರ ಬೆಳಗ್ಗೆ 11ಕ್ಕೆ ಕಮಲಾಪುರದಲ್ಲಿ ನಡೆಯಲಿದೆ.

ಯಾತ್ರೆಯಲ್ಲಿ ಸಾವಿರಾರು ಜನರನ್ನು ಸೇರಿಸುವ ನಿಟ್ಟಿನಲ್ಲಿ ಕಳೆದ 15 ದಿನಗಳಿಂದ ಸಿದ್ಧತೆಗಳು ನಡೆದಿವೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ, ಶರಣು ಸಲಗರ, ಟಿಕೆಟ್‌ ಆಕಾಂಕ್ಷಿಗಳಾಗಿರುವ ಬಸವರಾಜ ಮತ್ತಿಮೂಡ ಅಲ್ಲದೇ ಮಾಜಿ ಸಚಿವರಾದ ಬಾಬುರಾವ ಚವ್ಹಾಣ, ರೇವು ನಾಯಕ ಬೆಳಮಗಿ ಹಾಗೂ ಇತರರು ಹೆಚ್ಚಿನ ಜನ ಸೇರಿಸಿ ಪಕ್ಷದ ವರಿಷ್ಠರ ಗಮನ ಸೆಳೆಯಲು ತೀವ್ರ ಕಸರತ್ತು ನಡೆಸಿದ್ದಾರೆ.

ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರವಾಗಿದ್ದು, ಈ ಹಿಂದೆ ಸತತವಾಗಿ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಆದರೆ ಕಳೆದ 2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮತಗಳ ವಿಭಜನೆಯಿಂದ ಬಿಜೆಪಿಗೆ ಸೋಲುಂಟಾಗಿ ಕಾಂಗ್ರೆಸ್‌ ಗೆದ್ದಿದೆ. ಈಗ ಎಲ್ಲರೂ ಒಗ್ಗಟ್ಟಾಗಿದ್ದರಿಂದ ಬಿಜೆಪಿ ಗೆಲ್ಲಲಿದೆ ಎಂಬುದಾಗಿ ಬಹುತೇಕರ ಲೆಕ್ಕಾಚಾರವಾಗಿದೆ. ಅನೇಕರು ಈ
ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಕೇಳುತ್ತಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆಗೂ ಮುನ್ನ ಇದ್ದ ಕಮಲಾಪುರ ಮೀಸಲು ಮತ್ತು ಶಹಾಬಾದ ಮೀಸಲು ಕ್ಷೇತ್ರಗಳು ಒಗ್ಗೂಡಿ
ಹೊಸದಾಗಿ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಈ ಹಿಂದೆ ಮಾಜಿ ಸಚಿವ ರೇವು ನಾಯಕ ಬೆಳಮಗಿ ಸತತವಾಗಿ ನಾಲ್ಕು ಸಲ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

Advertisement

ಆದರೆ ಕಳೆದ 2013ರಲ್ಲಿ ಪರಾಭವಗೊಂಡಿರುವುದು ಮುಳುವಾಗಿ ಪರಿಣಮಿಸಿದೆ. ಮಾಜಿ ಸಚಿವ ಬಾಬುರಾವ ಚವ್ಹಾಣ ಪ್ರಮುಖ ಟಿಕೆಟ್‌ ಆಕಾಂಕ್ಷಿ ಆಗಿದ್ದಾರೆ. ಒಟ್ಟಾರೆ ಪಕ್ಷದ ಹೈಕಮಾಂಡ್‌ ಮಾತ್ರ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಒತ್ತಡಕ್ಕೆ ಸಿಲುಕಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಹೆಚ್ಚಿನ ಜನ ಸೇರುವ ಸಾಧ್ಯತೆ ಪಕ್ಷದ ಸೂಚನೆ ಮೇರೆಗೆ ಕ್ಷೇತ್ರದಾದ್ಯಂತ ಹಳ್ಳಿ-ಹಳ್ಳಿಗೆ ಹೋಗಿ ಯಾತ್ರೆಗೆ ಬರುವಂತೆ ಮನವಿ ಮಾಡಲಾಗಿದೆ. ನಿರೀಕ್ಷೆಯಂತೆ ಹೆಚ್ಚಿನ ಜನ ಸೇರಲಿದ್ದಾರೆ. ಐತಿಹಾಸಿಕ ಎನ್ನುವಂತೆ ಯಾತ್ರೆಗೆ ಜನ ಸೇರಬೇಕೆಂಬುದು ತಮ್ಮ ಅಭಿಲಾಷೆ. ತಾವಂತು ಟಿಕೆಟ್‌ನ ಪ್ರಮುಖ ಆಕಾಂಕ್ಷಿಯಾಗಿದ್ದೇನೆ. ಮುಂದಿನ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು.
 ಬಸವರಾಜ ಮತ್ತಿಮೂಡ, ಜಿಲ್ಲಾ ಪಂಚಾಯತ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next