Advertisement
ಖಾನಾಪುರ ವಿಧಾನಸಭೆ ಕ್ಷೇತ್ರ ಕೆನರಾ ಲೋಕಸಭೆ ವ್ಯಾಪ್ತಿಗೆ ಬರುತ್ತದೆ. ಬೆಳಗಾವಿಗೆ ಅತಿ ಸಮೀಪ ಜಿಲ್ಲೆಯಾಗಿದ್ದರೂ ಕೆನರಾ ವ್ಯಾಪ್ತಿಗೆ ಹೊಂದಿಕೊಂಡಿರುವ ಇಲ್ಲಿ ಜೆಡಿಎಸ್-ಬಿಜೆಪಿ ಮಧ್ಯೆ ಹೋರಾಟ ಎನ್ನುವುದಕ್ಕಿಂತ ಇಬ್ಬರ ಮಧ್ಯೆ ಹಣಾಹಣಿಯೇ ಇಲ್ಲದಂತಾಗಿದೆ. ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಈ ಭಾಗದ ಜನರಿಗೆ ಅಪರಿಚಿತರು. ಜತೆಗೆ ಜೆಡಿಎಸ್ ಎಂಬ ಚಿಹ್ನೆಯೇ ಇಲ್ಲಿಯವರಿಗೆ ಗೊತ್ತಿಲ್ಲ. ಆದರೂ ಕಾಂಗ್ರೆಸ್‌ನವರು ಅನಿವಾರ್ಯವಾಗಿ ಇದನ್ನು ಒಪ್ಪಿಕೊಂಡು ವೋಟ್ ಹಾಕಿಸಲು ಶತಾಯಗತಾಯ ಪ್ರಯತ್ನ ಪಟ್ಟಿದ್ದಾರೆ.
Related Articles
Advertisement
ಕೈ ಚಿಹ್ನೆ ಇಲ್ಲದ್ದಕ್ಕೆ ಬೇಸರ: ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದ್ದರೆ ಬಿಜೆಪಿಗೆ ಇಲ್ಲಿ ಭಾರೀ ಮುಖಭಂಗವಾಗುತ್ತಿತ್ತು. ಕಾಂಗ್ರೆಸ್ ಚಿಹ್ನೆಯ ಬಗ್ಗೆ ಬಹಳ ಅಭಿಮಾನವಿದೆ. ಈಗ ಕಣದಲ್ಲಿ ಜೆಡಿಎಸ್ ಚಿಹ್ನೆ ಬಂದಿರುವುದು ಇರುಸುಮುರುಸಾಗಿದೆ. ಕೈ ಬಿಟ್ಟು ತೆನೆ ಹೊತ್ತ ಮಹಿಳೆಗೆ ಮತ ಹಾಕಲು ಜನ ಹಿಂಜರಿದಿದ್ದಾರೆ. ಆದರೂ ಸಾಕಷ್ಟು ಪ್ರಚಾರ ನಡೆಸಿದ್ದೇವೆ. ಆರ್.ವಿ. ದೇಶಪಾಂಡೆ, ಅಂಜಲಿ ನಿಂಬಾಳಕರ, ಅಸ್ನೋಟಿಕರ ಅವರಿಂದ ಪ್ರಚಾರ ನಡೆಸಲಾಗಿದೆ. ಬಹಳ ಫೈಟ್ ಇದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
ಕಳೆದ ಚುನಾವಣೆಗಿಂತಲೂ ಈಗ ಅತಿ ಹೆಚ್ಚಿನ ಮತಗಳ ಅಂತರ ಬಿಜೆಪಿಗೆ ಸಿಗಲಿದೆ. 50 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಬಿಜೆಪಿ ಪಾಲಾಗಲಿದೆ. ಬಿಜೆಪಿ ವರ್ಷದಿಂದ ವರ್ಷಕ್ಕೆ ಭದ್ರವಾಗುತ್ತ ಹೊರಟಿದ್ದು, ಕಳೆದ ವಿಧಾನಸಭೆ ವೇಳೆ ಬಿಜೆಪಿಯ ಆಂತರಿಕ ಕಚ್ಚಾಟದಿಂದಾಗಿ ಮತಗಳು ವಿಭಜನೆಗೊಂಡು ಸೋಲು ಅನುಭವಿಸಬೇಕಾಯಿತು. ಖಾನಾಪುರ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಕಾಂಗ್ರೆಸ್ ಬೇಡವಾಗಿದೆ ಎನ್ನುತ್ತಾರೆ ಬಿಜೆಪಿಯವರು.
ಬಿಜೆಪಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಲೀಡ್ ಪಡೆಯಲಿದೆ. ಅನಂತಕುಮಾರ ಅವರ ಅಭಿವೃದ್ಧಿ ಕೆಲಸ ಹಾಗೂ ಮೋದಿಯ ಆಡಳಿತ ಮೆಚ್ಚಿ ಬಿಜೆಪಿಗೆ ಮತ ಹಾಕಿದ್ದಾರೆ. 50 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರ ನಮಗೆ ಸಿಗಲಿದೆ. ಕಾಂಗ್ರೆಸ್, ಎಂಇಎಸ್ ಹಾಗೂ ಜೆಡಿಎಸ್ ಈ ಭಾಗದಲ್ಲಿ ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿವೆ.
• ವಿಠ್ಠಲ ಪಾಟೀಲ, ಖಾನಾಪುರ ಬಿಜೆಪಿ ಬ್ಲಾಕ್ ಅಧ್ಯಕ್ಷರು
ಭೈರೋಬಾ ಕಾಂಬಳೆ
ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದ್ದರೆ ಈ ಭಾಗದಲ್ಲಿ ನಮ್ಮ ಹವಾ ಬೇರೇ ಆಗಿರುತ್ತಿತ್ತು. ಆದರೂ ಇಲ್ಲಿ 50:50 ಫೈಟ್ ಇದೆ. ಜೆಡಿಎಸ್ ಚಿಹ್ನೆ ಬಗ್ಗೆ ಜನರಿಗೆ ಗೊತ್ತಿಲ್ಲ. ಜೆಡಿಎಸ್ ಇಲ್ಲಿ ಅಸ್ತಿತ್ವ ಇಲ್ಲದಿದ್ದರೂ ಕಾಂಗ್ರೆಸ್ ಮನೆ ಮನೆಗೆ ಪ್ರಚಾರ ನಡೆಸಿ ವೋಟ್ ಹಾಕಿಸುವ ಮೂಲಕ ಮೈತ್ರಿ ಧರ್ಮ ಪಾಲಿಸಿದೆ. ಬಿಜೆಪಿಗೆ ಅಂತರ ಹೆಚ್ಚು ಆಗುವುದೇ ಇಲ್ಲ.
• ಮಹಾದೇವ ಕೋಳಿ, ಖಾನಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು