Advertisement
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಕೊನೆಗೂ ಬಿಜೆಪಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಇಲ್ಲಿ ಚಾಣಕ್ಯ ಅಮಿತ್ ಶಾ ಅವರ ಕಾರ್ಯತಂತ್ರದ ಮುಂದೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ಪಿ ನಾಯಕ ಅಖೀಲೇಶ್ ಯಾದವ್ ಅವರ ತಂತ್ರಗಾರಿಕೆ ಫಲಿಸಿಲ್ಲ. 10 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 9 ಅನ್ನು ತನ್ನ ಬುಟ್ಟಿಗೆ ಸೇರಿಸಿಕೊಳ್ಳುವಲ್ಲಿ ಕಮಲ ಪಕ್ಷ ಯಶಸ್ವಿಯಾಗಿದೆ. ದಿನವಿಡೀ ನಡೆದ ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೆ ಅತ್ಯಂತ ಪ್ರತಿಷ್ಠೆಯ ಒಂದು ಸೀಟು ಬಿಜೆಪಿ ಪಾಲಾಗಿದೆ. ಇತ್ತೀಚೆಗಿನ ಲೋಕಸಭೆ ಉಪಚುನಾವಣೆಯಲ್ಲಿ ಎಸ್‌ಪಿ ಪರವಾಗಿ ಬಿಎಸ್‌ಪಿ ಕೆಲಸ ಮಾಡಿದ್ದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಬಿಎಸ್‌ಪಿ ಅಭ್ಯರ್ಥಿ ಭೀಮರಾವ್ ಅಂಬೇಡ್ಕರ್‌ಗೆ ಸಮಾಜವಾದಿ ಪಕ್ಷ ಬೆಂಬಲ ನೀಡಿತ್ತಾದರೂ, ಕೊನೆಯ ಕ್ಷಣದಲ್ಲಿ ನಡೆದ ಅಡ್ಡ ಮತದಾನದಿಂದಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕನಸು ನನಸಾಗದಂತಾಗಿದೆ.
ಜಾರ್ಖಂಡ್‌ನಲ್ಲಿ ಎರಡೇ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನದ ಭಾರಿ ಆರೋಪ ಕೇಳಿಬಂದಿದೆ. ವಿರೋಧ ಪಕ್ಷ ಜಾರ್ಖಂಡ್ ವಿಕಾಸ್ ಮೋರ್ಚಾದ ಶಾಸಕ ಪ್ರಕಾಶ್ ರಾಮ್ ಪಕ್ಷದ ವಿಪ್ ಮೀರಿದ್ದು ಗಲಾಟೆಗೆ ಕಾರಣವಾಯಿತು. ಕಾಂಗ್ರೆಸ್ ಅಭ್ಯರ್ಥಿ ಧೀರಜ್ ಸಾಹು ಪರ ಮತ ಹಾಕಲು ಜೆವಿಎಂ ನಿರ್ಧರಿಸಿತ್ತಾದರೂ, ಪ್ರಕಾಶ್ ರಾಮ್ ಮತ ಚಲಾವಣೆ ನಂತರ ಮತ ಚೀಟಿಯನ್ನು ಕಾಂಗ್ರೆಸ್ ಏಜೆಂಟ್‌ಗೆ ತೋರಿಸಿಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೆ ಅವರ ಮತವನ್ನು ರದ್ದುಗೊಳಿಸಲು ಆಯೋಗ ಸಮ್ಮತಿಸಲಿಲ್ಲ. ಈ ಗಲಾಟೆಯಿಂದಾಗಿ ಸ್ವಲ್ಪ ಹೊತ್ತು ಮತದಾನ ಸ್ಥಗಿತಗೊಳಿಸಲಾಗಿತ್ತು. ನಂತರ ಶಾಸಕ ಪ್ರಕಾಶ್ ರಾಮ್‌ರನ್ನು ಜೆವಿಎಂ ಉಚ್ಛಾಟಿಸಿದೆ. ಕಾಂಗ್ರೆಸ್‌ನ ಧೀರಜ್ ಸಾಹುಗೆ ದಿದ್ದು, ಬಿಜೆಪಿಯ ಪ್ರದೀಪ್ ಕುಮಾರ್ ಸೊಂತಾಲಿಯಾ ಸೋಲು ಅನುಭವಿಸಿದ್ದಾರೆ.
Related Articles
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್‌ಜೆಡಿ ಸಖ್ಯ ತೊರೆದು ಬಿಜೆಪಿ ಜತೆ ಸೇರಿದ್ದಕ್ಕೆ ಮುನಿಸಿಕೊಂಡು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇರಳದ ಏಕೈಕ ಜೆಡಿಯು ಸದಸ್ಯ ಎಂ.ಪಿ.ವೀರೇಂದ್ರ ಕುಮಾರ್ ಪುನಃ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ತಾವೇ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಅವರು ಸ್ಪರ್ಧಿಸಿದ್ದರು.
Advertisement
ಮಹಾರಾಷ್ಟ್ರಮಹಾರಾಷ್ಟ್ರದಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿಯ ಮೂವರು, ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ತಲಾ ಒಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಳೆದ ವಾರ ಬಿಜೆಪಿ ಅಭ್ಯರ್ಥಿ ವಿಜಯ ರಾಹಟ್ಕರ್ ನಾಮಪತ್ರ ಹಿಂದೆ ಪಡೆದಾಗಲೇ ಸ್ಪರ್ಧಾಕಣದಲ್ಲಿ ಬಿಜೆಪಿ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳ ಗೆಲುವು ಖಚಿತವಾಗಿತ್ತು. ಗುಜರಾತ್
ಗುಜರಾತ್‌ನಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿಯ ಪುರುಷೋತ್ತಮ ರುಪಾಲ ಮತ್ತು ಮನಸುಖ್ ಮಾಂಡವಿಯ ಹಾಗೂ ಕಾಂಗ್ರೆಸ್‌ನ ನರನ್ ರಥಾÌ ಮತ್ತು ಅಮೀ ಯಾಜ್ನಿಕ್ ಆಯ್ಕೆಯಾಗಿದ್ದಾರೆ. ಬಿಹಾರ
ಬಿಹಾರದಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಆರ್‌ಜೆಡಿ (2), ಕಾಂಗ್ರೆಸ್ (1), ಜೆಡಿಯು (2) ಮತ್ತು ಬಿಜೆಪಿ (1) ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆರ್‌ಜೆಡಿಯ ಅಹಮದ್ ಅಶ್ಫಾಖ್ ಖಾನ್, ಮನೋಜ್ ಕುಮಾರ್ ಝಾ, ಕಾಂಗ್ರೆಸ್‌ನ ಅಖೀಲೇಶ್ ಪ್ರಸಾದ್ ಸಿಂಗ್, ಜೆಡಿಯು ವಶಿಷ್ಟ ನಾರಾಯಣ ಸಿಂಗ್ ಹಾಗೂ ಮಹೇಂದ್ರ ಪ್ರಸಾದ್, ಬಿಜೆಪಿಯಿಂದ ರವಿಶಂಕರ ಪ್ರಸಾದ್ ಆಯ್ಕೆಯಾಗಿದ್ದಾರೆ. ಪ.ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್‌ನ ಎಲ್ಲ ನಾಲ್ವರು ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾಲಿ ಸದಸ್ಯ ನದೀಮುಲ್ ಹಕ್, ಮೊದಲ ಬಾರಿಗೆ ಕಣಕ್ಕಿಳಿದಿದ್ದ ಸುಭಾಶಿಶ್ ಚಕ್ರವರ್ತಿ, ಅಬೀರ್ ಬಿಸ್ವಾಸ್ ಮತ್ತು ಶಂತನು ಸೇನ್ ವಿಜೇತರಾಗಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂ Ì ಆಯ್ಕೆಯಾಗಿದ್ದಾರೆ. ಐದನೇ ಅಭ್ಯರ್ಥಿಯಾದ ಸಿಂಗೆ ಟಿಎಂಸಿ ಶಾಸಕರು ಬೆಂಬಲಿಸಿದ್ದರು. ಇವರಿಗೆ ಪ್ರತಿಸ್ಪರ್ಧಿಯಾಗಿ ಸಿಪಿಎಂನ ರಾಬಿನ್ ದೇವ್ ಸ್ಪರ್ಧಿಸಿದ್ದರು. ಆಂಧ್ರಪ್ರದೇಶ
ಆಂಧ್ರದಲ್ಲಿ ಮೂರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಟಿಡಿಪಿಯ ಸಿಎಂ ರಮೇಶ್ ಹಾಗೂ ಕೆ. ರವೀಂದ್ರ ಕುಮಾರ್, ವೈಎಸ್‌ಆರ್ ಕಾಂಗ್ರೆಸ್‌ನ ವಿ ಪ್ರಭಾಕರ ರೆಡ್ಡಿಆಯ್ಕೆಯಾಗಿದ್ದಾರೆ. ಒಡಿಶಾ
ಒಡಿಶಾದಲ್ಲಿ ಬಿಜೆಡಿಯ ಅಚ್ಯುತ ಕುಮಾರ ಸಮಂತ, ಸೌಮ್ಯ ರಂಜನ್ ಪಟ್ನಾಯಕ್, ಪ್ರಶಾಂತ್ ನಂದ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶ
ಮಧ್ಯಪ್ರದೇಶದಲ್ಲಿ ಒಟ್ಟು 5 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿಯ ನಾಲ್ಕು ಮತ್ತು ಕಾಂಗ್ರೆಸ್‌ನ ಒಬ್ಬರು ಆಯ್ಕೆಯಾಗಿದ್ದಾರೆ. ಅಜಯ್ ಪ್ರತಾಪ್ ಸಿಂಗ್, ಕೈಲಾಶ್ ಸೋನಿ ಹಾಗೂ ಕೇಂದ್ರ ಸಚಿವರಾದ ತಾವರಚಂದ್ ಗೆಹೊಟ್, ಧರ್ಮೇಂದ್ರ ಪ್ರಧಾನ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ರಾಜಮಣಿ ಪಟೇಲ್ ಆಯ್ಕೆಯಾಗಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತಕ್ಕೆ ಸನಿಹ
2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದು ಎಂದಿಗೂ ಸಮಸ್ಯೆಯಾಗಿಯೇ ಉಳಿದಿತ್ತು. 245 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ 233 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. 12 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಈವರೆಗೆ ಬಿಜೆಪಿ 58 ಸದಸ್ಯರನ್ನು ಹೊಂದಿತ್ತು. ಇನ್ನು ಮಿತ್ರಪಕ್ಷಗಳ 17 ಸದಸ್ಯರನ್ನೂ ಸೇರಿಸಿದರೆ 75 ಸದಸ್ಯರು ಎನ್‌ಡಿಎ ಬೆಂಬಲಕ್ಕೆ ಇದ್ದಾರೆ. ಆದರೆ, ಯಾವುದೇ ಮಸೂದೆಯ ಅನುಮೋದನೆ ಪಡೆಯಲು ಬಹುಮತಕ್ಕೆ 126 ಸದಸ್ಯರು ಅಗತ್ಯ. ಈಗ ಬಿಜೆಪಿ ಹೆಚ್ಚುವರಿ 29-32 ಸದಸ್ಯರನ್ನು ಆರಿಸಿ ರಾಜ್ಯಸಭೆಗೆ ಕಳುಹಿಸಲಿದೆ. ಇನ್ನು ಮಿತ್ರಪಕ್ಷಗಳು ಹೆಚ್ಚುವರಿ 2-3 ಸದಸ್ಯರನ್ನು ಆಯ್ಕೆ ಮಾಡಲಿವೆ. ಇದರಿಂದ 110 ಸದಸ್ಯರ ಬಲವನ್ನು ರಾಜ್ಯಸಭೆಯಲ್ಲಿ ಬಿಜೆಪಿ ಪಡೆಯಲಿದೆ. ಪ.ಬಂಗಾಳ
04 ಟಿಎಂಸಿ 01 ಕಾಂಗ್ರೆಸ್ 05 ಒಟ್ಟು ತೆಲಂಗಾಣ
03 ಟಿಆರ್‌ಎಸ್ 00 ಕಾಂಗ್ರೆಸ್ 03 ಒಟ್ಟು ಜಾರ್ಖಂಡ್
01 ಬಿಜೆಪಿ 01 ಕಾಂಗ್ರೆಸ… 02 ಒಟ್ಟು ಛತ್ತೀಸ್‌ಗಡ
01 ಬಿಜೆಪಿ 00 ಕಾಂಗ್ರೆಸ್ 01 ಒಟ್ಟು ಕೇರಳ
01 ಎಲ್‌ಡಿಎಫ್ 00 ಯುಡಿಎಫ್ 01 ಒಟ್ಟು ಉತ್ತರ ಪ್ರದೇಶ
09 ಬಿಜೆಪಿ 01 ಎಸ್‌ಪಿ 00 ಬಿಎಸ್‌ಪಿ 10 ಒಟ್ಟು