ಗುಜರಾತ್: ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದಿದ್ದ ಪಾಟಿದಾರ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ (28ವರ್ಷ) ಜೂನ್ 2ರಂದು ಗುಜರಾತ್ ನ ಗಾಂಧಿನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತೀಯರು ಇಂದು ಸುರಕ್ಷಿತವಾಗಿದ್ದಾರೆಂದರೆ ಅದಕ್ಕೆ ಆರೆಸ್ಸೆಸ್ ಕಾರಣ: ಭೈರತಿ ಬಸವರಾಜ್
ಹಾರ್ದಿಕ್ ಪಟೇಲ್ ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಸಮ್ಮುಖದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ಯಾವುದೇ ಕೇಂದ್ರ ನಾಯಕರು ಭಾಗವಹಿಸುತ್ತಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಡೆಕ್ಕನ್ ಹೆರಾಲ್ಡ್ ಗೆ ಖಚಿತಪಡಿಸಿರುವುದಾಗಿ ವರದಿಯಾಗಿದೆ.
ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ನಿರ್ಲಕ್ಷ್ಯ ಧೋರಣೆ ಹೊಂದಿದೆ ಎಂದು ಪಟೇಲ್ ಆರೋಪಿಸಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಟೇಲ್ ಕಳುಹಿಸಿದ್ದ ರಾಜೀನಾಮೆ ಪತ್ರದಲ್ಲಿ, ದೇಶದಲ್ಲಿ ಗಂಭೀರ ಸಮಸ್ಯೆ ಎದುರಾದಾಗ, ಕಾಂಗ್ರೆಸ್ ನಾಯಕತ್ವದ ಪ್ರಶ್ನೆ ಎದ್ದ ಸಂದರ್ಭದಲ್ಲೆಲ್ಲಾ ಕಾಂಗ್ರೆಸ್ ನಾಯಕರು ವಿದೇಶದಲ್ಲಿರುತ್ತಾರೆ. ಕಾಂಗ್ರೆಸ್ ಹಿರಿಯ ಮುಖಂಡರು ಗುಜರಾತ್ ಮತ್ತು ಗುಜರಾತಿಗಳನ್ನು ದ್ವೇಷಿಸುವವರ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಅಸಮಧಾನವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವ ಬಗ್ಗೆ ಹಾರ್ದಿಕ್ ಪಟೇಲ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಪಾಟಿದಾರ್ ಸಮುದಾಯದ ಮೀಸಲಾತಿ ಹೋರಾಟದ ನಂತರ ಹಾರ್ದಿಕ್ ಪಟೇಲ್ ಹೆಚ್ಚು ಪ್ರಚಾರ ಪಡೆದಿದ್ದು, 2019ರಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.