Advertisement

ನೂತನ ಸಚಿವರ ಮೇಲೆ ಬೆಟ್ಟದಷ್ಟು ನಿರೀಕ್ಷೆ

04:43 PM Aug 21, 2019 | Team Udayavani |

ತುಮಕೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಯಾಗಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಶಾಸಕ ಜೆ.ಸಿ.ಮಾಧುಸ್ವಾಮಿ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯಂತೆ ಮಂಗಳವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.

Advertisement

ಮಂತ್ರಿಯಾಗುವ ಯೋಗ: ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಈವರೆಗೆ ಆಯ್ಕೆಯಾದ ಶಾಸಕರ ಪೈಕಿ ಎನ್‌. ಬಸವಯ್ಯ ಬಿಟ್ಟರೆ ಜೆ.ಸಿ. ಮಾಧುಸ್ವಾಮಿ ಸಚಿವರಾಗಿರುವುದು ಅಭಿ ಮಾನಿಗಳಲ್ಲಿ ಸಂಭ್ರಮ ಮಾಡಿದ್ದು, ಜಿಲ್ಲೆಯಲ್ಲಿಯೇ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಚಿಕ್ಕ ನಾಯಕನಹಳ್ಳಿ ತಾಲೂಕು ಒಂದು ಶಾಪಗ್ರಸ್ಧ ತಾಲೂಕು ಎಂಬ ತೆಗಳಿಕೆಗೆ ಒಳಗಾಗಿತ್ತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಯಾವುದೇ ಅಭಿವೃದ್ಧಿ ಕಾಣದ ತಾಲೂಕು ಗಣಿಗಾರಿಕೆಯಿಂದ ಹೆಸರು ಪಡೆದರೂ ಜನರು ಉದ್ಯೋಗವಿಲ್ಲದೇ ಕಷ್ಟಪಡುತ್ತಿದ್ದಾರೆ. ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂಬುದು ಈವರೆಗೆ ಪ್ರಚಲಿತದಲ್ಲಿದ್ದ ಮಾತಾಗಿತ್ತು. 1979ರಲ್ಲಿ ದಿ. ಡಿ.ದೇವರಾಜ ಅರಸು ಮುಖ್ಯಮಂತ್ರಿ ಯಾಗಿದ್ದಾಗ ಎನ್‌.ಬಸವಯ್ಯ ಭಾರೀ ಮತ್ತು ಮಧ್ಯಮ ನೀರಾವರಿ, ಮುಜರಾಯಿ ಖಾತೆ ಸಚಿವ ರಾಗಿದ್ದರು. ಆದರೆ ಅವರು ಹೆಚ್ಚು ದಿನ ಸಚಿವರಾಗಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಅದು ಬಿಟ್ಟರೆ ಈವರೆಗೆ ಈ ತಾಲೂಕಿನಲ್ಲಿ ಆಡಳಿತ ಪಕ್ಷದ ಶಾಸಕರು ಗೆದ್ದೇ ಇಲ್ಲ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾದರೂ ಅಧಿಕಾರ ಹಿಡಿಯಲಿಲ್ಲ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಮಾಧುಸ್ವಾಮಿಗೆ ಮಂತ್ರಿಯಾಗುವ ಯೋಗ ಬಂದಿದೆ.

ಅತೀ ಹಿಂದುಳಿದ ತಾಲೂಕಾಗಿರುವ ಚಿಕ್ಕನಾಯಕನ ಹಳ್ಳಿ ತಾಲೂಕು ಅಭಿವೃದ್ಧಿಗೆ ಹೆಚ್ಚು ಆಸಕ್ತಿ ತೋರಬೇಕಾಗಿದೆ. ಹೇಮಾವತಿ, ಅಪ್ಪರ್‌ ಭದ್ರ, ಎತ್ತಿನ ಹೊಳೆ ಯೋಜನೆ ಕಾಮಗಾರಿ ಚುರುಕಿಗೆ ಆದ್ಯತೆ ನೀಡಬೇಕಾಗಿದೆ. ಜಿಲ್ಲೆ ಸತತವಾಗಿ ಬರಗಾಲ ಪೀಡಿತ ಪ್ರದೇಶವಾಗಿದೆ. ತೆಂಗು ಬೆಳೆಗಾರರು ಸಂಕಷ್ಟ ಅನುಭ ವಿಸುತ್ತಿದ್ದಾರೆ. ಪಾವಗಡದಲ್ಲಿ ನೀರಾವರಿ ಯೋಜನೆ ಗಳಿಗೆ ಚಾಲನೆ ದೊರೆತ್ತಿಲ್ಲ. ಈ ಸಮಸ್ಯೆಗಳಿಗೆಲ್ಲ ಜೆ.ಸಿ. ಮಾಧುಸ್ವಾಮಿ ಪರಿಹಾರ ಕೊಡುತ್ತಾರೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.

 

● ಚಿ.ನಿ. ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next