Advertisement

ಬರವಿದ್ದರೂ ಸಂತ್ರಸ್ತರಿಗೆ ಸಹಾಯ ಭರಪೂರ

09:59 AM Aug 20, 2019 | Suhan S |

ಜಗಳೂರು: ಬರದನಾಡು ಎಂಬ ಹಣೆಪಟ್ಟಿ ಹೊಂದಿರುವ ಜಗಳೂರು ತಾಲೂಕಿನಲ್ಲಿ ಸಹಾಯ ಮಾಡುವುದಕ್ಕೆ ಬರವಿಲ್ಲ ಎಂಬುದನ್ನು ಜನತೆ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ಮೂಲಕ ತೋರಿಸಿಕೊಟ್ಟಿದ್ದು, ಈವರೆಗೆ ಸುಮಾರು 500 ಕುಟುಂಬಗಳಿಗೆ ಎರಡು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ, ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ತಮ್ಮದೇ ಆದ ಅಲ್ಪ ಕೊಡುಗೆಯನ್ನು ಜನತೆ ನೀಡಿದ್ದಾರೆ.

Advertisement

ಜಗಳೂರು ರಾಜ್ಯದಲ್ಲಿಯೇ ಅತಿ ಹಿಂದುಳಿದ ಹಾಗೂ ಬರಗಾಲ ಪ್ರದೇಶವಾಗಿದ್ದು, ನೂರು ವರ್ಷದಲ್ಲಿ ಸುಮಾರು 75 ವರ್ಷ ಬರಗಾಲಕ್ಕೆ ತುತ್ತಾಗಿದೆ. ಯಾವುದೇ ನದಿಮೂಲ ಇಲ್ಲದ ಈ ತಾಲೂಕಿನಲ್ಲಿ ಮಳೆಗಾಲದಲ್ಲಿ ಸಹ 80 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿಯೂ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಲು ಜನ ಮುಂದಾಗಿದ್ದಾರೆ.

ಒಗ್ಗೂಡಿ ದೇಣಿಗೆ ಸಂಗ್ರಹ: ಇಲ್ಲಿನ ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಿ ಎಲ್ಲರೂ ಒಗ್ಗೂಡಿ ನಿಧಿ ಸಂಗ್ರಹಿಸುವುದಕ್ಕೆ ಚಾಲನೆ ನೀಡಿದರು. ಸರಕಾರಿ ನೌಕರರ ಸಂಘವು ಸಂಗ್ರಹವಾಗುವ ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಒಂದೆಡೆ ಸೇರಿಸುವಂತಹ ಕೆಲಸ ಮಾಡುತ್ತಿದೆ.

ನಿಧಿ ಸಂಗ್ರಹಣೆಗೆ ಸ್ಪರ್ಧೆ: ನಾ ಮುಂದು, ತಾ ಮುಂದು ಎಂದು ತಾಲೂಕಿನ ಗ್ರಾಮಗಳು ನಿಧಿ ಸಂಗ್ರಹಿಸುತ್ತಿದ್ದು, ತಾಲೂಕಿನ ಹುಚ್ಚಂಗಿಪುರ, ಮುಸ್ಟೂರು, ಕಲ್ಲೇದೇವರಪುರ, ಕಮಂಡಲಗೊಂದಿ, ಸೊಕ್ಕೆ, ಕೆಳಗೋಟೆ, ಲಕ್ಕಂಪುರ ಗ್ರಾಮಸ್ಥರು ನೆರವು ಸಂಗ್ರಹಿಸಿ ತಾಲೂಕಾಡಳಿತಕ್ಕೆ ನೀಡಿದ್ದಾರೆ.

ಬಿಳಿಚೋಡು, ಮಲ್ಲಪುರ, ಆಸಗೋಡು, ಗುಡ್ಡದ ಲಿಂಗಣ್ಣಹಳ್ಳಿ, ಚಿಕ್ಕ ಉಜ್ಜಿನಿ, ಚಿಕ್ಕಮಲ್ಲನಹೋಳೆ, ಅಣಬೂರು, ತಾಯಿಟೋನಿ ಸೇರಿದಂತೆ ಇನ್ನ ಕೆಲವು ಗ್ರಾಮಗಳು ನೆರವಿನ ಭರವಸೆ ನೀಡಿವೆ ಎಂದು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ತಿಳಿಸಿದ್ದಾರೆ.

Advertisement

ಸಂಗ್ರಹವಾದ ವಸ್ತುಗಳು: 200 ಕ್ವಿಂಟಲ್ ಅಕ್ಕಿ, 5 ಕ್ವಿಂಟಲ್ ಬೇಳೆ, 2 ಸಾವಿರ ಸೀರೆಗಳು, 1500 ಜೊತೆ ಚಿಕ್ಕ ಮಕ್ಕಳ ಬಟ್ಟೆಗಳು, 500 ಬೆಡ್‌ ಶೀಟ್, 1 ಸಾವಿರ ಟಾವಲ್ ಗಳು, 4 ಲಕ್ಷ ರೂ. ನಗದು ಈವರೆಗೆ ಸಂಗ್ರಹವಾಗಿದೆ. ಇವುಗಳನ್ನು ಒಂದಡೆ ಶೇಖರಿಸಿ ಕುಟುಂಬಕ್ಕೊಂದರಂತೆ ಪ್ಯಾಕೆಟ್ ಮಾಡಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುತ್ತಾರೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಜ್ಜಣ್ಣ,

ಕುಟುಂಬಕ್ಕೊಂದು ಪ್ಯಾಕೆಟ್: 50 ಕೆಜಿ ಅಕ್ಕಿ. 5 ಕೆಜಿ ಬೇಳೆ. 4 ಲೀ. ಅಡುಗೆ ಎಣ್ಣೆ, ಸೋಪು, ಬ್ರಷ್‌, ಪೇಸ್ಟ್‌, 2 ಪಾತ್ರೆ, ಬಕೆಟ್, ಚೊಂಬು, ಸೌಟು, ತಟ್ಟೆಗಳು, ಮಕ್ಕಳಿಗೆ ನೋಟ್ ಬುಕ್‌ ಸೇರಿದಂತೆ ಇತರೆ ವಸ್ತುಗಳನ್ನು ಸೇರಿಸಿ ಒಂದು ಪ್ಯಾಕೆಟ್ ಮಾಡಲಾಗುತ್ತಿದೆ.

ಖುದ್ದು ನೆರೆ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ: ಆ. 13 ರಿಂದ ನೆರವು ಸಂಗ್ರಹಕ್ಕೆ ತಹಶೀಲ್ದಾರ್‌ ಚಾಲನೆ ನೀಡಿದ್ದು ಆ. 22 ವರೆಗೆ ಸಂಗ್ರಹ ನಡೆಯಲಿದೆ. ಆ. 24 ಕ್ಕೆ ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ವಿತರಿಸಲಾಗುವುದು.

 

•ರವಿಕುಮಾರ ಜೆಓ ತಾಳಿಕೆರೆ

Advertisement

Udayavani is now on Telegram. Click here to join our channel and stay updated with the latest news.

Next