ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ಪಡೆದುಕೊಂಡ ಬೆಳಗಾವಿ ಲೋಕಸಭಾ ಸಂಸದ ಸುರೇಶ ಅಂಗಡಿಗೆ ಮಹತ್ವದ ಖಾತೆಯೇ ಸಿಕ್ಕಿದೆ. ಈ ಭಾಗದಲ್ಲಿ ರೈಲ್ವೆ ಯೋಜನೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಾಮುಖ್ಯತೆ ಸಿಕ್ಕಿಲ್ಲ ಎಂಬ ಕೂಗಿನ ಮಧ್ಯೆಯೇ ಸುರೇಶ ಅಂಗಡಿಗೆ ರೈಲ್ವೆ ರಾಜ್ಯ ಖಾತೆ ಸಚಿವ ಸ್ಥಾನ ಸಿಕ್ಕಿರುವುದು ಹಲವಾರು ನಿರೀಕ್ಷೆಗಳನ್ನು ಮತ್ತೆ ಹುಟ್ಟುಹಾಕಿದೆ.
ರೈಲ್ವೆ ಖಾತೆಯ ಸಂಪುಟ ದರ್ಜೆ ಸಚಿವ ಪಿಯುಷ್ ಗೋಯಲ್ ಹಾಗೂ ರಾಜ್ಯ ಖಾತೆ ಸಚಿವರು ನೆರೆ ಹೊರೆಯ ರಾಜ್ಯದವರು. ಪಿಯುಷ್ ಗೋಯಲ್ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಗಡಿನಾಡು ರೈಲ್ವೆ ಭೂಪಟದಲ್ಲಿ ಹೊಸ ಬದಲಾವಣೆ ಕಾಣಲಿದೆ ಎಂಬ ವಿಶ್ವಾಸ ಮೂಡಿದೆ.
1991ರಲ್ಲಿ ಜಾಫರ್ ಶರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದಲ್ಲಿ ಹಲವಾರು ಯೋಜನೆಗಳು ಜಾರಿಯಾಗಿದ್ದವು. ನಂತರ ಮಲ್ಲಿಕಾರ್ಜುನ ಖರ್ಗೆ ಸಹ ಒಂದಿಷ್ಟು ಯೋಜನೆಗಳನ್ನು ತಂದರು. ಈಗ ಅಂತಹ ಮಹತ್ವದ ಜವಾಬ್ದಾರಿ ಸುರೇಶ ಅಂಗಡಿ ಅವರ ಮೇಲಿದೆ.
ಈ ಹಿಂದೆ ಮೂರು ಅವಧಿಯಲ್ಲಿ ಸಂಸದರಾಗಿದ್ದಾಗಲೂ ರೈಲ್ವೆ ಯೋಜನೆಗಳ ಬಗ್ಗೆ ಮೇಲಿಂದ ಮೇಲೆ ಪ್ರಸ್ತಾಪ ಮಾಡಿ ಸರಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದ ಸುರೇಶ ಅಂಗಡಿ ಹೊಸ ಯೋಜನೆಗಳನ್ನು ಈ ಭಾಗಕ್ಕೆ ತರದೇ ಇದ್ದರೂ ಕೇಂದ್ರ ರೈಲ್ವೆ ಸಚಿವರ ಗಮನಸೆಳೆಯುವಲ್ಲಿ ಸಫಲರಾಗಿದ್ದರು. ಈಗ ಸ್ವತಃ ಅವರೇ ರೈಲ್ವೆ ಖಾತೆಯ ಸಚಿವರಾಗಿರುವುದರಿಂದ ಈ ಭಾಗದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ ಸಿಗಲಿದೆ ಎಂಬ ಆಸೆ ಕಾಣುತ್ತಿದೆ.
ಕಳೆದ ಹಲವಾರು ವರ್ಷಗಳ ಅವಧಿಯಲ್ಲಿ ಹಲವು ಹೊಸ ರೈಲು ಮಾರ್ಗಗಳ ಸಮೀಕ್ಷೆ ನಡೆದಿದೆ. ಅನೇಕ ರೈಲು ಮಾರ್ಗಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಅನುಮೋದನೆ ಸಹ ದೊರಕಿದೆ. ಆದರೆ ಈ ಮಾರ್ಗಗಳು ರಾಜ್ಯ ಸರ್ಕಾರದ ಯಾವುದೇ ಪ್ರಾದೇಶಿಕ ಅಭಿವೃದ್ಧಿ ಯೋಜನೆಗೆ ಅನುಗುಣವಾಗಿ ರೂಪುಗೊಂಡಿಲ್ಲ ಈ ಕೊರತೆ ನೀಗಿಸುವ ಜವಾಬ್ದಾರಿಯನ್ನು ನೂತನ ರೈಲ್ವೆ ಸಚಿವರು ವಹಿಸಿಕೊಳ್ಳಬೇಕು ಎಂಬುದು ರೈಲ್ವೆ ಹೋರಾಟಗಾರರ ಅಭಿಪ್ರಾಯ .
•ಕೇಶವ ಆದಿ