ಗದಗ: ಅವಳಿ ನಗರದಲ್ಲಿ ನಡೆದ 24*7 ಹಾಗೂ ಒಳಚರಂಡಿ ಕಾಮಗಾರಿಗಳು ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನೇ ನುಂಗಿ ಹಾಕಿದೆ. ಪರಿಣಾಮ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಇಲ್ಲಿನ ಗಂಗಿಮಡಿ ಹಾಗೂ ಬೆಟಗೇರಿಯ ಒಕ್ಕಲಗೇರಿ ಭಾಗದ ರಸ್ತೆಗಳು ಅಕ್ಷರಶಃ ಹೊಂಡಗಳಾಗಿ ಪರಿವರ್ತನೆಗೊಂಡಿದೆ. ಹದಗೆಟ್ಟ ರಸ್ತೆಗಳಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ಪರದಾಡುವಂತಾಗಿದೆ. ಕಾಲಿಟ್ಟರೆ ಸಾಕು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಬೆಟಗೇರಿಯ ಕನ್ನಾಳಹಗಸಿ, ಒಕ್ಕಲಿಗರ ಓಣಿಯಲ್ಲಿ ಈ ಹಿಂದೆ ಸಂಪೂರ್ಣ ಡಾಂಬರ್ ಹಾಗೂ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಒಂದು ವರ್ಷದಿಂದ ಹಿಂದೆ ಆರಂಭಗೊಂಡಿದ್ದ 24*7 ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಕಾಮಗಾರಿಗಳು ಈ ಭಾಗದ ಜನರ ನಿದ್ದೆಗೆಡಿಸಿದ್ದವು. ಆಮೆಗತಿಯಲ್ಲಿ ತಿಂಗಳು ಕಾಲ ನಡೆದ ಕಾಮಗಾರಿಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ಆದರೆ, ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೂಮ್ಮೆ ರಸ್ತೆ ನಿರ್ಮಿಸದೇ ಬೇಕಾಬಿಟ್ಟಿಯಾಗಿ ಮುಚ್ಚಿದ್ದರಿಂದ ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಿದ್ದಿವೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿದ್ದು, ಸಣ್ಣ ಹೊಂಡಗಳಾಗಿ ಪರಿವರ್ತನೆಗೊಂಡಿವೆ. ಗುಂಡಿಗಳ ಆಳ ಅಂದಾಜಿಸಲಾಗದೇ ವಾಹನ ಸವಾರರು ಪರದಾಡುವಂತಾಗಿದೆ. ಈ ನಡುವೆ ವಾಹನಗಳ ನಿಯಂತ್ರಣ ತಪ್ಪಿ, ಕೆಲವರು ಜಾರಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಗಂಗಡಿಮಡಿ ಆಶ್ರಯ ಕಾಲೋನಿ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಒಳಚರಂಡಿ ಹಾಗೂ 24*7 ಜೊತೆಗೆ ಇತ್ತೀಚೆಗೆ ಆರಂಭಗೊಂಡಿರುವ ತೆರೆದ ಸಿಸಿ ಚರಂಡಿಗಳ ನಿರ್ಮಾಣ ಕಾರ್ಯ ಸ್ಥಳೀಯರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಈ ಭಾಗದ ವಿವಿಧೆಡೆ ತೆರೆದ ಚರಂಡಿಗಳ ನಿರ್ಮಾಣಕ್ಕಾಗಿ ತಗ್ಗುತೋಡಿ ಬಿಡಲಾಗಿದೆ. ತಿಂಗಳುಗಳು ಕಳೆದರೂ ಚರಂಡಿ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಹೀಗಾಗಿ ಈ ಭಾಗದ ಜನರು ತಗ್ಗು-ಗುಂಡಿಗಳನ್ನು ದಾಟಲು ಪ್ರತಿನಿತ್ಯ ಹರಸಾಹಸ ನಡೆಸುವಂತಾಗಿದೆ. ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಗಂಗಿಮಡಿ ಸಮಸ್ಯೆಗಳ ಪರಿಹಾರಕ್ಕೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಸೋರುತಿದೆ ಮನೆಯ ಮಾಳಗಿ: ಗಂಗಿಮಡಿ ನಿವಾಸಿಗಳಿಗೆ ರಸ್ತೆ, ಚರಂಡಿಗಿಂತ ಸ್ವಂತ ಮನೆಗಳೇ ಸಮಸ್ಯೆಯಾಗಿ ಕಾಡುತ್ತಿದೆ. ಮನೆಯ ಛಾವಣಿಗಳು ಸೋರುತ್ತಿದ್ದು, ಅಲ್ಪಸ್ವಲ್ಪ ಮಳೆಯಾದರೂ ಮಕ್ಕಳು, ಮರಿಗಳೊಂದಿಗೆ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಜನರ ನಿದ್ದೆಗೆಡಿಸಿದೆ. 2003ರಲ್ಲಿ ಗಂಗಿಮಡಿಯಲ್ಲಿ ಸುಮಾರು 2 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಬಡಾವಣೆಯಲ್ಲಿ ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅನೇಕ ಮನೆಗಳ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಮಳೆಗೆ ಸೋರುತ್ತಿವೆ. ಮಳೆ ನೀರು ಬೀಳುವ ಸ್ಥಳದಲ್ಲಿ ಸಣ್ಣ- ಪುಟ್ಟ ಪಾತ್ರೆಗಳನ್ನಿಟ್ಟು ಮಳೆ ನಿಲ್ಲುವುದನ್ನೇ ಕಾಯುವಂತಾಗಿರುವುದು ಶೋಚನೀಯ.
ಬೆಟಗೇರಿಯ ಒಕ್ಕಲಗೇರಿ ಓಣಿಯ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಆರು ತಿಂಗಳಿಂದ ಪೌರಾಯುಕ್ತರಿಗೆ ಮನವಿ ಮಾಡುತ್ತಿದ್ದೇವೆ. ಶಾಸಕ ಎಚ್.ಕೆ. ಪಾಟೀಲ ಗಮನಕ್ಕೆ ತಂದಾಗಲೂ ಪೌರಾಯುಕ್ತರು ಸರಿಪಡಿಸುವ ಭರವಸೆ ನೀಡಿ ಕೈತೊಳೆದುಕೊಂಡರು. ಆದರೆ, ಸಮಸ್ಯೆಗೆ ನೈಜವಾಗಿ ಯಾರೂ ಸ್ಪಂದಿಸುತ್ತಿಲ್ಲ.
•ಪ್ರಕಾಶ ಶಿವಪ್ಪ ಮಾನೇದ,ಒಕ್ಕಲಗೇರಿ ಓಣಿ ನಿವಾಸಿ