ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರ ಸಮಸ್ಯೆಗಳ ಕೊಂಪೆಯಾಗಿದ್ದು, ಅಧಿಕಾರಿಗಳೂ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ದುರಸ್ತಿಗೊಳಿದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಳಗೆರೆಹಳ್ಳಿ ಕೃಷಿ ಪ್ರಧಾನ ಗ್ರಾಮ. ಅಧಿಕ ಜನಸಂಖ್ಯೆ ಹಾಗೂ ಜಾನುವಾರುಗಳನ್ನು ಹೊಂದಿದೆ. ಕುರಿ, ಕೋಳಿ, ಎಮ್ಮೆ, ಹಸು, ದನಗಳನ್ನು ಹೆಚ್ಚು ಸಾಕಾಣೆ ಮಾಡುವ ಜತೆಗೆ ಸ್ವ ಉದ್ಯೋಗ ಕಂಡು ಕೊಂಡಿದ್ದಾರೆ. ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಶು ಚಿಕಿತ್ಸಾ ಕೇಂದ್ರ ನೀರಿನಿಂದ ಆವೃತ್ತವಾಗಿ, ಕಚೇರಿಯಲ್ಲಿದ್ದ ಔಷಧ, ದಾಖಲೆ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಸಂಪೂರ್ಣ ಹಾಳಾಗಿವೆ. ಜತೆಗೆ ಮೂಲ ಸೌಲಭ್ಯವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲ ಸೌಲಭ್ಯಗಳಿಂದ ವಂಚಿತ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಪಶುಸಂಗೋಪನೆ ಮಾಜಿ ಸಚಿವ ಕೆ.ಎಂ. ನಾಗೇಗೌಡ ಅಧ್ಯಕ್ಷತೆಯಲ್ಲಿ ಅನಾವರಣಗೊಂಡಿದ್ದ ಪಶುಸಂಗೋಪನೆ ಚಿಕಿತ್ಸಾ ಕೇಂದ್ರ ಸದ್ಯ ಶಿಥಿಲಗೊಂಡಿದೆ. ವಿದ್ಯುತ್, ಕುಡಿ ಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳಿಂದ ವಂಚಿತ ವಾಗಿದೆ. ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮಿಶ್ರ ತಳಿ ಹಸು, 100ಕ್ಕೂ ಹೆಚ್ಚು ಎಮ್ಮೆಗಳು, 2 ಸಾವಿರಕ್ಕೂ ಹೆಚ್ಚು ಕುರಿ, 100 ಎತ್ತುಗಳು, ಕೋಳಿ ಸೇರಿದಂತೆ ಇನ್ನಿತರ ಜಾತಿಯ ಪ್ರಾಣಿ-ಪಕ್ಷಿ ಸಂಕುಲವಿದೆ. ಆದರೆ ಪಶು ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಜಾನುವಾರು ಮಾಲಿಕರು ಪರದಾಡಬೇಕಿದೆ. ಅಲ್ಲದೆ ಚಿಕಿತ್ಸೆ, ಔಷಧಕ್ಕಾಗಿ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯ ಉಂಟಾಗಿದೆ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಸಮಸ್ಯೆ ಕೇಳುವವರೇ ಇಲ್ಲ: ಪ್ರಮೀಳಾ ವೀರಪ್ಪ ಶೈಕ್ಷಣಿಕ ಸಂಸ್ಥೆಗಳ ನಿರ್ಮಾತೃ ವಿ.ಕೆ. ವೀರಪ್ಪ ಸಹಕಾರದಲ್ಲಿ ಪಶು ಆಸ್ಪತ್ರೆ ನಿರ್ಮಾಣಗೊಂಡಿದೆ. ದಾನಿಗಳಾದ ಗೌರಮ್ಮ, ಚನ್ನೇಗೌಡ ಕುಟುಂಬದವರು ಆಸ್ಪತ್ರೆಗೆ ಹಣ ದಾನ ಮಾಡಿದ್ದರೂ, ಅಲ್ಲಿನ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ವಳಗೆರೆಹಳ್ಳಿ, ಸೊಳ್ಳೇಪುರ ಸೇರಿದಂತೆ ಹತ್ತಾರು ಗ್ರಾಮದ ರೈತರು ಮದ್ದೂರು ಪಟ್ಟಣಕ್ಕೆ ಜಾನುವಾರು ಚಿಕಿತ್ಸೆಗೆಂದು ಕರೆತರಬೇಕಾದ ಸ್ಥಿತಿ ಬಂದೊದಗಿದೆ. ಗ್ರಾಮದಲ್ಲಿ ಪಶುಚಿಕಿತ್ಸಾ ಕೇಂದ್ರ ಆರಂಭಗೊಂಡಿತೆಂದು ಸಂತಸಪಟ್ಟಿದ್ದ ರೈತರು ಕ್ರಮೇಣ ಹತ್ತು, ಹಲವು ಸಮಸ್ಯೆಗಳಿಂದಾಗಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದೆ. ಹಲವು ಬಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.
ಶೂನ್ಯ ಸಾಧನೆ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಆಸ್ಪತ್ರೆ ಸಂಪೂರ್ಣ ಜಲಾವೃತಗೊಂಡಿದ್ದರಿಂ ಕಾಗದ ಪತ್ರಗಳು, ಆಸ್ಪತ್ರೆ ದಾಖಲಾತಿಗಳು, ಔಷಧಿ ನೀರಿನಲ್ಲಿ ಕೊಚ್ಚಿಹೋಗಿವೆ. ರಾಜ್ಯ ಸರ್ಕಾರ ಪ್ರತಿ ಬಜೆಟ್‌ನಲ್ಲೂ ಪಶು ಚಿಕಿತ್ಸಾಲಯದ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸುತ್ತಿದ್ದರೂ ಸಾಧನೆ ಮಾತ್ರ ಶೂನ್ಯವಾಗಿದೆ. ಮನುಷ್ಯರಿಗೆ ರೋಗಬಂದರೆ ವಾಹನಗಳ ಮೂಲಕ ಪಟ್ಟಣಕ್ಕೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಪ್ರಾಣಿ, ಪಕ್ಷಿಗಳಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸುವುದೇ ದುಸ್ತರವಾಗಿದೆ. ವಯೋ ವೃದ್ಧರು, ಅಂಗವಿಕಲರು ತಮ್ಮ ರಾಸುಗಳಿಗೆ ಚಿಕಿತ್ಸೆ ಕೊಡಿಸಲು ಹರ ಸಾಹಸ ಪಡಬೇಕಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿ ಶಿಥಿಲ ಗೊಂಡಿರುವ ಕಟ್ಟಡ ನಿರ್ಮಾಣಕ್ಕೆ ಮುಂದಾಗುವ ಜತೆಗೆ ಮೂಲ ಸೌಲಭ್ಯ ಕಲ್ಪಿಸಿ ಔಷಧಿ ಕೊರತೆ ನೀಗಿಸುವ ಜತೆಗೆ ಜಾನುವಾರುಗಳ ರಕ್ಷಣೆಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದ್ದಾರೆ.
-ಎಸ್. ಪುಟ್ಟಸ್ವಾಮಿ