Advertisement
ಶನಿವಾರದಿಂದಲೇ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಮಹಾಪೂಜೆ, ಶೇಷ ಸೇವೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಸೇವೆ ಸಲ್ಲಿಸಿದರು. ದೇವಸ್ಥಾನದ ಒಳಾಂಗಣ, ಹೊರಾಂಗಣ ಹಾಗೂ ಪರಿಸರದಲ್ಲಿ ಭಕ್ತರು ನೆರೆದಿದ್ದರು. ವಾಹನ ದಟ್ಟಣೆಯೂ ಅಧಿಕವಿತ್ತು. ಕ್ಷೇತ್ರದ ಎಲ್ಲ ಪಾರ್ಕಿಂಗ್ ಜಾಗಗಳು ಭರ್ತಿಯಾಗಿದ್ದವು. ಆದಿ ಸುಬ್ರಹ್ಮಣ್ಯ ದೇಗುಲದಲ್ಲಿ ಕೂಡ ಭಕ್ತರ ಸಂಖ್ಯೆ ಅಧಿಕವಿತ್ತು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬೆಂಗಳೂರು, ಹಾಸನ ಕಡೆಯಿಂದ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಜ. 22ರಿಂದಲೇ ಬಂದ್ ಆಗಿತ್ತು. ಚಾರ್ಮಾಡಿ, ಗುತ್ತಿಗಾರು ಕಡೆಯಿಂದ ಸುತ್ತಿ ಬಳಸಿ ಬರಬೇಕಾದ ಕಾರಣ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ವಹಿವಾಟು ಕಡಿಮೆಯಾಗಿ ವರ್ತಕರೂ ನಷ್ಟ ಅನುಭವಿಸುತ್ತಿದ್ದರು. ರವಿವಾರ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದ್ದು, ಭಕ್ತರ ಪ್ರವಾಹ ಬಂದಿದ್ದರಿಂದ ವರ್ತಕರು ಹರ್ಷಗೊಂಡಿದ್ದರು. ವಸತಿ ಗೃಹಗಳೂ ಭರ್ತಿಯಾಗಿದ್ದವು. ಸೋಮವಾರದಿಂದ ಆಟಿ ತಿಂಗಳೂ ಆರಂಭವಾಗಲಿದ್ದು, ಭಕ್ತರ ದಂಡು ಇನ್ನಷ್ಟು ದಿನಗಳ ಕಾಲ ಇದೇ ರೀತಿ ಮುಂದುವರಿಯುವ ನಿರೀಕ್ಷೆ ವ್ಯಕ್ತವಾಗಿದೆ.