Advertisement
ನಗರ ಮಾತ್ರವಲ್ಲ, ಕುಗ್ರಾಮದಲ್ಲೂ ನೀರಿಗೆ ಬಂಗಾರದ ಬೆಲೆ ಬಂದಿದೆ. ಅದ ರಲ್ಲೂ ಕೃಷಿ ಅವಲಂಬಿತ ಸುಳ್ಯದ ಜನತೆಗೆ ನೀರಿನ ಅವಶ್ಯ ಹೆಚ್ಚೇ ಇದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನದಿ, ಹಳ್ಳ, ಕೊಳ್ಳ, ಕೆರೆ, ಬಾವಿ, ತೋಡುಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ಜಲಮೂಲ ಆಳಕ್ಕೆ ಹೋಗಿದೆ. ಒಂದೆರಡು ಬಾರಿ ಬಿದ್ದ ಮಳೆ ನೀರಿನ ಬವಣೆ ತೀರಿಸಿಲ್ಲ. ಹೀಗಾಗಿ ಕೊಳವೆ ಬಾವಿಯಿಂದ ನೀರು ಪಡೆಯುವುದು ಅನಿವಾರ್ಯ.
Related Articles
Advertisement
ಹೊಸದಾಗಿ ತಲೆ ಎತ್ತುವ ಬೃಹತ್ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಸಮರ್ಪಕವಾಗಿ ಜಾರಿಗೊಂಡಿಲ್ಲ. ಬಹುತೇಕ ಕಡೆಗಳಲ್ಲಿ ಮಳೆಗಾಲದಲ್ಲಿ ಮಳೆನೀರು ಚರಂಡಿಗಳಲ್ಲೇ ಹರಿಯುತ್ತದೆ. ಸರಕಾರಿ ಕಚೇರಿಗಳೂ ಮಳೆಕೊಯ್ಲು ಅಳವಡಿಸಿಕೊಂಡಿಲ್ಲ. ಬೋರ್‌ವೆಲ್‌ಗಳಿಗೆ ನೀರಿಂಗಿಸುವ ಯೋಜನೆಗಳನ್ನೂ ಗ್ರಾ.ಪಂ.ಗಳು ಅನುಷ್ಠಾನ ಮಾಡಿಲ್ಲ. ರೈತರೂ ಆಧುನಿಕ ಕೃಷಿ ಪದ್ಧತಿಗೆ ಮಾರು ಹೋಗಿದ್ದರಿಂದ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿ ಕಣ್ಮರೆಯಾಗುತ್ತಿದೆ. ರಸಗೊಬ್ಬರ ಬಳಕೆ ಹೆಚ್ಚುತ್ತಿದೆ. ಭೂಮಿಯ ಫಲವತ್ತತೆ ಮಟ್ಟ ಇಳಿಕೆಯಾಗುತ್ತಿದೆ. ಸುಮಾರು 200 ಅಡಿಗಳಷ್ಟು ಆಳಕ್ಕೆ ಇಳಿಯುತ್ತಿದ್ದ ಎರೆಹುಳುಗಳು ಭೂಮಿಯ ಫಲವತ್ತತೆ ಹಾಗೂ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿಯಾಗಿದ್ದವು. ಅವೂ ರಾಸಾಯ ನಿಕ ಗೊಬ್ಬರಗಳಿಂದ ಸಾಯುತ್ತಿವೆ.
ತಾಲೂಕಿನಲ್ಲಿ 100ಕ್ಕೂ ಅಧಿಕ ವೆಂಟೆಡ್ ಡ್ಯಾಮ್‌ಗಳಿದ್ದರೂ, ಬಹುತೇಕ ಕಡೆಗಳಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿಲ್ಲ. ಕೆಲ ಡ್ಯಾಮ್ ಗಳು ಮಾತ್ರ ನಿರ್ವಹಣೆ ಆಗುತ್ತಿವೆ. ಡ್ಯಾಮ್ ಆರಂಭದ ವರ್ಷ ಕೃಷಿ ಇಲಾಖೆ ಹಲಗೆ ನೀಡುತ್ತದೆ. ಆದರೆ ರೈತರು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಒಂದೇ ವರ್ಷದಲ್ಲಿ ನೀರು ಹರಿದು ಹೋಗುತ್ತದೆ. ಮತ್ತೆ ಡ್ಯಾಮ್‌ಗೆ ಹಲಗೆ ಹಾಕುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ, ಬೇಸಗೆಯಲ್ಲಿ ನೀರಿನ ಅಭಾವ ಉಂಟಾಗುತ್ತಿದೆ.
ಕಠಿನ ನಿಯಮ ರೂಪಿಸಬೇಕುಒಂದು ವಾರದಲ್ಲಿ ನಮ್ಮ ಮನೆಯ ಸುತ್ತ ಹತ್ತಾರು ಬೋರ್‌ವೆಲ್ ಕೊರೆದಿದ್ದಾರೆ. ಇದಕ್ಕೆ ಮಿತಿಯೇ ಇಲ್ಲದಂತಾಗಿದೆ. ಮೊದಲೆಲ್ಲ 10 ಅಡಿಯಷ್ಟು ಕೊರೆದರೆ ನೀರು ಸಿಗುತ್ತಿತ್ತು. ಈಗ 300 ಅಡಿ ತನಕ ಕೊರೆಯಬೇಕು. ಸೆಂಟ್ಸ್ ಲೆಕ್ಕದಲ್ಲಿ ಭೂಮಿ ಇದ್ದವರೂ ಬೋರ್ ಕೊರೆವವರೆ. ಇದಕ್ಕೆ ಮಾನದಂಡವೇ ಇಲ್ಲ, ಸ್ಪಷ್ಟ ನಿಯಮ ರೂಪಿಸುವುದು ಅವಶ್ಯ. ಇಲ್ಲವಾದಲ್ಲಿ ಇದು ಭವಿಷ್ಯಕ್ಕೆ ಮಾರಕ. ಬಯಲು ಸೀಮೆಯ ಗತಿಯೇ ನಮಗೂ ಬರಬಹುದು.
– ಪಿ.ಜಿ.ಎನ್. ಪ್ರಸಾದ್,
ಪ್ರಗತಿಪರ ಕೃಷಿಕರು, ಮಳೆ ಮಾಪಕರು ಅನುಮತಿ ನೀಡಲಾಗುತ್ತಿಲ್ಲ
ಬೋರ್‌ವೆಲ್ ಕೊರೆಯಲು ಅನುಮತಿ ನೀಡುತ್ತಿಲ್ಲ. ಸರಕಾರಿ ಯೋಜನೆಯಂತೆ ಕುಡಿಯುವ ನೀರಿನ ಯೋಜನೆಗಳಿಗಾಗಿ ಅನುಮತಿ ಪಡೆದಿದ್ದಲ್ಲಿ ಮಾತ್ರ ಅವಕಾಶ ಇದೆ. ಬೋರ್‌ವೆಲ್ ಕೊರೆಯುತ್ತಿರುವ ಕುರಿತು ದೂರು ಬಂದಿಲ್ಲ. ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಕುಂಞಮ್ಮ,
ತಹಶೀಲ್ದಾರ್, ಸುಳ್ಯ ಬಾಲಕೃಷ್ಣ ಭೀಮಗುಳಿ