ಬೆಂಗಳೂರು: “ನನ್ನ ವಿರುದ್ಧ ಅಲ್ತಾಫ್ ಖಾನ್ ಜತೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ಕರೆತಂದು ನಿಲ್ಲಿಸಿದರೂ ಗೆಲ್ಲುವುದು ನಾನೇ,’ ಎಂದು ಮಾಜಿ ಶಾಸಕ ಜಮೀರ್ ಅಹಮದ್ ಖಾನ್ ದೇವೇಗೌಡರಿಗೆ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, “ನಾನು ಈ ಚುನಾವಣೆಯಲ್ಲಿ ಸೋತರೆ ನನ್ನ ಕತ್ತು ಕತ್ತರಿಸಿಕೊಳ್ಳುತ್ತೇನೆ. ಅಲ್ತಾಫ್ ಖಾನ್ ಬಳಿ ನಾನು ಕಾಲು ಹಿಡಿದು ಸಹಾಯ ಕೇಳಿದ್ದು ಸಾಬೀತು ಪಡಿಸಿದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ,’ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, “ನಾನು ನಾಲ್ಕೂವರೆ ಅಡಿ ಇದ್ದೇನೆ ಎಂದು ಅಲ್ತಾಪ್ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಅಮಿತಾಭ್ ಬಚ್ಚನ್‌ಗಿಂತ ಹೈಟಲ್ಲಿ ಕಡಿಮೆ ಇದ್ದಾರೆ. ಆದರೆ, ಅಮಿತಾಭ್ ಬಚ್ಚನ್‌ಗಿಂತ ಸಚಿನ್ ತೆಂಡೂಲ್ಕರ್ ಫೇಮಸ್ ಆಗಿದ್ದಾರೆ. ಇಂತಹ ಮಾತುಗಳು ಬಿಟ್ಟು ಚುನಾವಣಾ ಕಣದಲ್ಲಿ ತಮ್ಮ ತಾಕತ್ತು ತೋರಿಸಲಿ. ನನ್ನ ವಿರುದ್ಧ 300 ಕೋಟಿ ರೂ. ಆಸ್ತಿ ಆರೋಪ ಮಾಡಿದ್ದಾರೆ.
ಅವರು ಸಾವಿರ ಕೋಟಿ ರೂ. ಆರೋಪ ಮಾಡಲಿ. ಸಿಬಿಐ ತನಿಖೆಯನ್ನೂ ನಡೆಸಲಿ ನನಗೇನೂ ಭಯವಿಲ್ಲ,’ ಎಂದರು. ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಜತೆ ಚರ್ಚಿಸಿದ ಜಮೀರ್ ಅಹಮದ್, ಪುಲಿಕೇಶಿನಗರ ಕ್ಷೇತ್ರದಲ್ಲಿ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡುವ ಬಗ್ಗೆ ಮತ್ತೂಮ್ಮೆ ಭರವಸೆ ಪಡೆದರು ಎಂದು ಹೇಳಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಸನ್ನ ಕುಮಾರ್ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಪಕ್ಷದ ನಾಯಕರು ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.
-ಜಮೀರ್ ಅಹಮದ್, ಮಾಜಿ ಶಾಸಕ