ದಾವಣಗೆರೆ: ಮಹಾಮಾರಿ ಕೋವಿಡ್ ಹಲವರ ದುಡಿಮೆಯನ್ನೇ ಅಕ್ಷರಶಃ ಕಿತ್ತುಕೊಂಡು ಜೀವನಮುಂದ್ಹೇಗೆ ಎಂದು ಕ್ಷಣ ಕ್ಷಣಕ್ಕೂ ಚಿಂತೆಗೀಡು ಮಾಡಿದೆ!.
ಫೆಬ್ರವರಿ ಮಾಹೆಯಲ್ಲಿ ಕಾಣಿಸಿಕೊಂಡ ಮಹಾಮಾರಿ ಕೋವಿಡ್ ವೈರಸ್ ಹಾವಳಿ ತಡೆಗಟ್ಟಲು ಸರ್ಕಾರ ಜಾರಿ ಮಾಡಿದ್ದಂತಹ ಲಾಕ್‌ಡೌನ್ ಹಲವಾರು ಕುಟುಂಬಗಳ ಜೀವನ ನಿರ್ವಹಣೆಯ ಹಾದಿಯನ್ನೇ ಲಾಕ್… ಮಾಡಿದೆ. ಕೋವಿಡ್ ಬರೋದಕ್ಕಿಂತಲೂ ಮುಂಚೆ ಕೊಡಗಿನಲ್ಲಿ ಕಟ್ಟಡ ಕಟ್ಟೋ ಕೆಲಸಕ್ಕೆ 10-15 ಜನರ ಕರೆದುಕೊಂಡು ಹೋಗ್ತಾ ಇದ್ದೆವು. ಪ್ರತಿಯೊಬ್ಬರಿಗೆ ದಿನಕ್ಕೆ 600 ರೂಪಾಯಿ ಕೂಲಿ ಕೊಡುವ ಜೊತೆಗೆ ಊಟ-ತಿಂಡಿಯನ್ನೂ ಕೊಡ್ತಾ ಇದ್ದರು. ಅಲ್ಲದೆ ಅಲ್ಲೇ ಲೈನ್ ಮನೆಗಳಲ್ಲೇ ಉಳಿದುಕೊಳ್ಳಲಿಕ್ಕೂ ಅವಕಾಶವೂ ಇತ್ತು. ಸೀಸನ್ ಮುಗಿಯೋ ಹೊತ್ತಿಗೆ ಎಲ್ಲಾ ಖರ್ಚು ತೆಗೆದು, ಮನೆ ಖರ್ಚಿಗೆ ಹಣ ಕಳಿಸಿ, 10-20 ಸಾವಿರ ಕೈಯಲ್ಲಿ ಇರೋದು. ಜೀವನಕ್ಕೆ ಯಾವುದೇ ತೊಂದರೆ ಇರ್ತಾ ಇರಲಿಲ್ಲ. ಆದರೆ, ಯಾವಾಗ ಕೊರೊನಾ, ಲಾಕ್‌ಡೌನ್ ಆಂತ ಬಂತೋ ನಮಗೆ ಕೆಲಸ ಇಲ್ಲದಂಗೆ ಆಯಿತು. ಅನಿವಾರ್ಯುವಾಗಿ ದಾವಣಗೆರೆಗೆ ಬರುವಂತಾಯಿತು. ಈಗ ಕೆಲಸವೇ ಇಲ್ಲ. ಜೀವನ ಬಹಳ ಕಷ್ಟ ಆಗ್ತಾ ಇದೆ ಎನ್ನುತ್ತಾರೆ ದಾವಣಗೆರೆಯ ವಿನೋಬ ನಗರದ ನಿವಾಸಿ ಮಂಜುನಾಥ್ ಇತರರು.
ಕೋವಿಡ್ ಬಂದ ಮೇಲೆ ಎಲ್ಲಾ ಕೆಲಸ ನಿಂತಂತೆ ಕಟ್ಟಡ ಕೆಲಸಾನೂ ನಿಂತಿತ್ತು. ಈಗೇನೋ ಕೆಲಸ ಮಾಡೋಕೆ ಪರ್ಮಿಷನ್ ಕೊಡಲಾಗಿದೆ. ಆದರೆ, ಕಟ್ಟಡ ಕಟ್ಟಿಸೋದು ಕಡಿಮೆ ಆಗಿದೆ. ಹಾಗಾಗಿ ಹಿಂದಿನಂತೆ ದಿನಾ ಕೆಲಸವೇ ಇಲ್ಲ. ವಾರದಲ್ಲಿ 2 ಇಲ್ಲ ಅಂದರೆ 3 ದಿನ ಕೆಲಸ ಇದ್ದರೆ ಅದೇ ನಮ್ ಪುಣ್ಯ ಅನ್ನುವಂತಾಗಿದೆ. ಕೆಲಸ ಸಿಕ್ಕಾಗ ಕೈಯಲ್ಲಿ ಒಂದಿಷ್ಟು ಹಣ ಬರೋದರಲ್ಲೇಜೀವನ ನಡೆಸಬೇಕಾಗಿದೆ. ಮಕ್ಳು, ಮರಿ, ಆಸ್ಪತ್ರೆ, ಅಕ್ಕಿ, ಬೇಳೆ, ಬೆಲ್ಲ… ಹಿಂಗೆ ಪ್ರತಿಯೊಂದನ್ನು ಸರಿದೂಗಿಸಿಕೊಂಡು ಹೋಗೋದು ಬಹಳ ಕಷ್ಟ ಆಗುತ್ತಿದೆ. ಕೋವಿಡ್ ಬಂದು ನಮ್ ದುಡಿಮೆನೇ ಕಿತ್ತುಕೊಂಡಿದೆ ಎಂದು ಹೇಳುತ್ತಾರೆ ಮಂಜುನಾಥ್. ಕಟ್ಟಡ ಕೆಲಸಗಾರರ ಕಥೆ ಒಂದು ಕಡೆಯಾದರೆ. ಹೋಟೆಲ್ ಉದ್ಯಮಿಗಳ ಪಾಡು ಸಹ ಅದೇ ರೀತಿಯದ್ದಾಗಿದೆ.
ದಾವಣಗೆರೆಯ ಮಾಮಾಸ್ ಜಾಯಿಂಟ್ ರಸ್ತೆಯಲ್ಲಿ ಕಳೆದ ಕೆಲ ತಿಂಗಳನಿಂದ ಹೋಟೆಲ್ ಅರೋಹ…ನಡೆಸುತ್ತಿ ರುವ ಬಿಬಿಂ ಪದವೀಧರೆಅರ್ಪಿತಾ ಯಲಗಚ್ ಹೇಳುವಂತೆ, ಲಾಕ್ ಡೌನ್ ತೆರವಿನ ನಂತರವೂ ಹೋಟೆಲ್ ಗಳಲ್ಲಿ ವ್ಯಾಪಾರ-ವಹಿವಾಟು ಬಹಳ ಕಡಿಮೆ ಆಗಿದೆ. ಕೋವಿಡ್ ಭಯದಿಂದ ಜನರು ಹೋಟೆಲ್‌ಗಳಿಗೆ ಬರುವುದೇ ಇಲ್ಲ. ಬಹಳ ಕಡಿಮೆ ಸಂಖ್ಯೆಯಲ್ಲಿಬರುವುದರಿಂದ ವ್ಯಾಪಾರ ಅಷ್ಟಕಷ್ಟೇ. 7 ಲಕ್ಷ ರೂಪಾಯಿ ಇನ್‌ವೆಸ್ಟ್ ಮಾಡಲಾಗಿದೆ. 5-6 ಜನರು ಕೆಲಸಕ್ಕಿದ್ದಾರೆ. ವಹಿವಾಟು ಚೆನ್ನಾಗಿ ನಡೆದರೆ ಏನೂ ಸಮಸ್ಯೆಯೇ ಇಲ್ಲ. ವ್ಯಾಪಾರವಾಗದೇ ಹೋದರೆ ಎಲ್ಲವೂ ಕಷ್ಟ ಆಗುತ್ತದೆ ಎಂದು ಅರ್ಪಿತಾ ಹೇಳುತ್ತಾರೆ.
ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ಪ್ರಮುಖ ರಸ್ತೆಯಲ್ಲಿನ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯದ್ದು ಅದೇ ವ್ಯಥೆ. ಕೋವಿಡ್ ಕಾರಣಕ್ಕೆ ನಾವು ಎಷ್ಟೇ ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಬಹಳಷ್ಟು ಜನರು ಬ್ಯೂಟಿಪಾರ್ಲರ್‌ಗಳಿಗೆ ಬರುವುದಕ್ಕೇ ಹೆದರುತ್ತಾರೆ. ಒಂದೊಂದು ದಿನ ಸುಮ್ಮನೆ ಬಾಗಿಲು ತೆರೆದುಕೊಂಡು ಕಾಯುವಂತಾಗುತ್ತದೆ. ಕೆಲಸಗಾರರಿಗೆ ಸಂಬಳ, ಬಾಡಿಗೆ, ಮನೆ ಖರ್ಚು, ಮಕ್ಕಳ ಓದು, ಮೆಡಿಕಲ್ ಖರ್ಚು…. ಎಲ್ಲವನ್ನೂ ನಿಭಾಯಿಸಲಿಕ್ಕೆ ಆಗುತ್ತಲೇ ಇಲ್ಲ. ಮುಂದೆ ಒಳ್ಳೆಯದಾಗಬಹುದು ಎಂಬ ಏಕೈಕ ಕಾರಣಕ್ಕೆ ಸಾಲ-ಸೋಲ ಮಾಡಿ, ಬ್ಯೂಟಿಪಾರ್ಲರ್ ನಡೆಸಿಕೊಂಡು ಹೋಗುತ್ತಿದ್ದೇವೆ. ಇದೇ ಪರಿಸ್ಥಿತಿ ಏನಾದರೂ ಮುಂದುವರೆದರೆ ದೇವರೇ ಗತಿ… ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಕೋವಿಡ್ ಪರಿಣಾಮ ಸಾಕಷ್ಟು ಜನರು ಕೈಯಲ್ಲಿದ್ದ ಕೆಲಸ ಕಳೆದುಕೊಂಡು ತರಕಾರಿ ಇತರೆ ಮಾರಾಟಕ್ಕೆ ಇಳಿದಿದ್ದರೂ ವ್ಯಾಪಾರ ಅನ್ನುವುದು ಅಷ್ಟಕಷ್ಟೇ ಎನ್ನುವಂತಾಗಿದೆ. ಒಟ್ಟಾರೆ ಕೋವಿಡ್ ಅನೇಕರ ದುಡಿಮೆಯನ್ನೇ ಆಪೋಶನ ಮಾಡಿದೆ. ದಿನದಿಂದ ದಿನಕ್ಕೆ ಜೀವನ ದುಸ್ತರವಾಗಿಸುತ್ತಿದೆ.
-ರಾ. ರವಿಬಾಬು