ಹುಣಸೂರು: ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಒಕ್ಕಲಿಗರು, ಜಿ.ಟಿ.ದೇವೇಗೌಡ, ಶ್ರೀನಿವಾಸ್‌ಪ್ರಸಾದ್ ಬೆನ್ನಿಗೆ ನಿಲ್ಲದಿದ್ದಲ್ಲಿ ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲೆ ಗುಂಪಾಗುತ್ತಿದ್ದರು. ಈ ಬಾರಿ ಸೋಲುವ ಮೂಲಕ ಸಿಎಂ ಪಾಪದ ಫಲ ಅನುಭವಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದ ಹೊರ ಆವರಣದಲ್ಲಿ ನಡೆದ ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿ, ಈ ಬಾರಿ ಹುಣಸೂರು ಕ್ಷೇತ್ರದಲ್ಲಿ ಸಣ್ಣ ಪುಟ್ಟ ಸಮಾಜಗಳು ಜೆಡಿಎಸ್ ಬೆಂಬಲಿಸಲಿದ್ದು, ಮೇಲ್ವರ್ಗದ ವಿಶ್ವಾಸದಲ್ಲಿ ತಳವರ್ಗದ ಕಲ್ಯಾಣ ಕಾಣುವ ಸೂತ್ರ ಯಶಸ್ವಿಯಾಗಲಿದೆ ಎಂದು ಹೇಳಿದರು.
ಹಿಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಕಾರಣದಿಂದ ಮಂಜುನಾಥ ಅವರನ್ನು ಕುರುಬ ಸಮುದಾಯ ಕೈಹಿಡಿದಿದ್ದರು. ಈ ಬಾರಿ ತಮ್ಮ ಪ್ರತಿನಿಧಿ ಕುರುಬನೇ ಆಗಬೇಕೆಂದು ಬಯಸಿದ್ದು, ತಮ್ಮನ್ನು ಕೈಹಿಡಿಯಲಿದ್ದಾರೆ. ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅಧಿಕಾರ ಅನುಭವಿಸಿ ನಂತರ ರಾಜಕೀಯದ ಏಳುಬೀಳುನಲ್ಲಿದ್ದಾಗ ಕುರುಬ ಸಮಾಜದ ನಾಯಕನೊಬ್ಬ ಅತಂತ್ರನಾಗುವುದು ಸರಿಯಲ್ಲವೆಂದು ಕಾಂಗ್ರೆಸ್ ಸೇರುವಂತೆ ಮಾಡಿದೆ. ಈಗ ನನ್ನನ್ನೇ ಪಕ್ಷದಿಂದ ಹೊರ ಬರುವಂತೆ ಮಾಡಿದ ದ್ರೋಹಿ ಎಂದು ಕಟುವಾಗಿ ಟೀಕಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ತನ್ನ ಕನಸು ನನಸಾದರೂ ಆತನಿಂದ ಸಮಾಜಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ, ಕುರುಬ ಸಮಾಜದ ಶಾಸಕನನ್ನು ಮಂತ್ರಿ ಮಾಡದೆ, ತಾವೊಬ್ಬರೇ ಮೆರೆದರೆಂದು ಟೀಕಿಸಿದರು. ತನಗೆ ಎಲ್ಲವನ್ನೂ ಕೊಟ್ಟ ಕಾಂಗ್ರೆಸ್‌ನಿಂದ ಹೊರಬರುವಾಗ ಕರ್ಣನ ಅಗಲಿಕೆಯಿಂದ ಕುಂತಿ ಅನುಭವಿಸಿದ ನೋವನ್ನು ಅನುಭವಿಸಿದ್ದೇನೆ ಎಂದು ಹೇಳಿ ಬಾವುಕರಾದರು.
ತಾವು ಕ್ಷೇತ್ರಾದ್ಯಂತ ಭೇಟಿ ನೀಡಿದ್ದು, ಹೋದೆಡೆಯೆಲ್ಲಾ ಮತದಾರರು, ಜನರು ಪ್ರೀತಿಯಿಂದ ಕಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ತಮ್ಮ ಜೊತೆಗಿದ್ದಾರೆ. ಈ ಬಾರಿ ತನ್ನನ್ನು ಪ್ರೀತಿಯಿಂದ ವಿಧಾನಸಭೆಗೆ ಕಳುಹಿಸಲು ತಾಲೂಕಿನ ಜನತೆ ಉತ್ಸುಕರಾಗಿರುವುದು ತನ್ನಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಮತ್ತೆ ಹಳ್ಳಿಗಳಿಗೆ ಭೇಟಿ ನೀಡಲಿದ್ದೇನೆ ಎಂದರು.
ಕುರುಬ ಸಮಾಜದಿಂದ 5 ಲಕ್ಷ ರೂ. ದೇಣಿಗೆ: ಸಮಾವೇಶದಲ್ಲಿ ಕುರುಬ ಸಮಾಜದಿಂದ ಚುನಾವಣೆ ವೆಚ್ಚಕ್ಕಾಗಿ ಅಭ್ಯರ್ಥಿ ವಿಶ್ವನಾಥರಿಗೆ ಐದು ಲಕ್ಷ ರೂ. ನೀಡುವುದಾಗಿ ಕುರುಬ ಸಮಾಜದ ಅಧ್ಯಕ್ಷ ಡಿ.ಕೆ.ಕುನ್ನೇಗೌಡ ಪ್ರಕಟಿಸಿದರು. ಕಾಂಗ್ರೆಸ್, ಬಿಜೆಪಿ ತೊರೆದ ಅನೇಕ ಮುಖಂಡರು ಪಕ್ಷ ಸೇರಿದರು. ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹರಳಹಳ್ಳಿ ಮಾದೇಗೌಡ, ನಗರಸಭಾಧ್ಯಕ್ಷ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಪಜಲುಲ್ಲಾ, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್, ಗಣೇಶ ಕುಮಾರಸ್ವಾಮಿ, ಬಿಳಿಕೆರೆ ರಾಜು, ಹರಿಹರ ಆನಂದಸ್ವಾಮಿ, ಶಿವಶೇಖರ್ ಮಾತನಾಡಿದರು. ಯುವಅಧ್ಯಕ್ಷ ಲೋಕೇಶ್, ಮುಖಂಡರಾದ ಅಣ್ಣಯ್ಯನಾಯ್ಕ, ಕೆ.ಎಸ್.ಕುಮಾರ್, ರವಿಗೌಡ, ಬಸವಣ್ಣ, ಬಸವಲಿಂಗಯ್ಯ ವೇದಿಕೆಯಲ್ಲಿದ್ದರು.