Advertisement
ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಯ ಬೆನ್ನು ಸವರಿ ಮುಗುಳ್ನಕ್ಕು ಸ್ವಾಮೀಜಿ ನಿರ್ಗಮಿಸುತ್ತಾರೆ. ಮುಂದೆ ಅದೇ ವಿದ್ಯಾರ್ಥಿ ಅವರ ಪ್ರೀತಿಯ ಶಿಷ್ಯನಾಗುತ್ತಾನೆ. ಆ ವಿದ್ಯಾರ್ಥಿ ಬಂಡಾಯ ಕವಿ ಪ್ರೊ. ಸಿದ್ದಲಿಂಗಯ್ಯ ಇದನ್ನು ಸ್ವತಃ ಪ್ರೊ.ಸಿದ್ದಲಿಂಗಯ್ಯ ತಮ್ಮ “ಊರು-ಕೇರಿ’ಯಲ್ಲಿ ದಾಖಲಿಸಿದ್ದಾರೆ. “ಅಸ್ಪೃಶ್ಯರ ಬಗ್ಗೆ ಪೇಜಾವರ ಶ್ರೀಗಳ ಕಾಳಜಿ ಅನುಮಾನಿಸಿದ್ದು ತಪ್ಪು’ ಎಂದೂ ಹೇಳಿಕೊಂಡಿದ್ದಾರೆ. ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪ್ರೀತಿಯ ಶಿಷ್ಯ ಪ್ರೊ. ಸಿದ್ದಲಿಂಗಯ್ಯ, “ಉದಯವಾಣಿ’ ಜತೆ ಶ್ರೀಗಳೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ್ದು ಹೀಗೆ…
Related Articles
Advertisement
ಬದಲಾವಣೆಯ ಸ್ಫೂರ್ತಿ ಕೇಂದ್ರ: ಅವರೊಬ್ಬ ಸಾಮಾಜಿಕ ಬದಲಾವಣೆಯ ಸ್ಫೂರ್ತಿಯ ಕೇಂದ್ರವಾಗಿದ್ದರು. ಅವರು ದಯೆ, ಪ್ರೀತಿ, ಕರುಣೆ, ಕಾಳಜಿಗಳ ಸಂಗಮ. ಅವರ ಅಗಲಿಕೆಯಿಂದ “ದಲಿತ ಬಂಧು’ವನ್ನು ಕಳೆದುಕೊಂಡಂತಾಗಿದೆ. ಪೇಜಾವರ ಶ್ರೀಗಳ ಧೋರಣೆಗಳನ್ನು ಮುಂದುವರಿಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಅಸ್ಪೃಶ್ಯತೆ ವಿರುದ್ಧ ದನಿ ಎತ್ತಿದ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಮೊದಲಿಗರು ಹಾಗೂ ಪ್ರಮುಖರು. 1974ರಲ್ಲಿ ಅವರ ಮನಸ್ಸಿಗೆ ನೋವುಂಟಾಗುವಂತೆ ಟೀಕಿಸಿದ್ದೆ.
ಆದರೆ, 2006-07ರಲ್ಲಿ ಆದಿಚುಂಚನಗಿರಿ ಸಮಾರಂಭವೊಂದರಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ನನ್ನನ್ನು ಪೇಜಾವರ ಶ್ರೀಗಳಿಗೆ ಪರಿಚಯಿಸಿದಾಗ, “ಇವರು ನಮ್ಮ ಸಿದ್ದಲಿಂಗಯ್ಯ. ನನಗೆ 1974ರಿಂದಲೂ ಅವರು ಗೊತ್ತು’ ಎಂದಿದ್ದರು. ಆಗ ನಾನು ಘಟನೆ ಬಗ್ಗೆ ಊರು-ಕೇರಿಯಲ್ಲಿ ದಾಖಲಿಸಿರುವುದನ್ನು ಸ್ವಾಮೀಜಿ ಗಮನಕ್ಕೆ ತಂದಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, “ನಾನು ಆಗಲೇ ಊರು-ಕೇರಿ ತರಿಸಿಕೊಂಡು ಓದಿದ್ದೇನೆ’ ಎಂದು ಹೇಳಿದರು.
ಇದು ಅವರ ತೀಕ್ಷ್ಣಮತಿಗೆ ಹಿಡಿದ ಕನ್ನಡಿ. ಅಸ್ಪೃಶ್ಯತೆ ವಿರುದ್ಧ ಕೆಲವು ಲಿಂಗಾಯತ ಮಠಗಳು ಕ್ರಾಂತಿಕಾರಿ ಧೋರಣೆ ಹೊಂದಿದ್ದರೂ, ಉಳಿದ ಸ್ವಾಮೀಜಿಗಳು ಚಕಾರ ಎತ್ತದಿದ್ದಾಗ, ಪೇಜಾವರರು ನಿರ್ಭೀತಿಯಿಂದ ಮುಕ್ತವಾಗಿ ಮಾತನಾಡಿದ್ದರು. ನಿಡುಮಾಮಿಡಿ ಸ್ವಾಮೀಜಿಗಳು ಪೇಜಾವರ ಸ್ವಾಮೀಜಿಗೆ ಕೆಲವು ಕಠಿಣ ಪ್ರಶ್ನೆಗಳನ್ನೂ ಕೇಳಿದ್ದು ನಿಜ. ಆದರೆ, ಪೇಜಾವರ ಶ್ರೀಗಳು ತಮ್ಮ ಇತಿಮಿತಿಗಳಲ್ಲಿ ಮಾಡಿದ ಸಾಧನೆ ಕಡಿಮೆ ಇಲ್ಲ. ಸಾಮಾಜಿಕ ಸುಧಾರಣೆಗೆ ಮಾಡಿರುವ ಕೆಲಸ ಕಡಿಮೆ ಅಲ್ಲ. ನಮ್ಮ ಕೆಲವು ಪ್ರಗತಿಪರ ಗೆಳೆಯರು ತಿಳಿಯದೆ ಮಾತನಾಡಿದ್ದೇ ಹೆಚ್ಚೆನಿಸುತ್ತದೆ
ನಿರೂಪಣೆ: ವಿಜಯಕುಮಾರ್ ಚಂದರಗಿ