ಬೆಂಗಳೂರು: ಕೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಊರೆಲ್ಲಾ ಹುಡುಕಾಡಿದರು’ ಇದು ಹಳೇ ಗಾದೆ. ಆದರೆ ಈಗ ಹೊಸ ರೂಪ ಪಡೆದಿದೆ. ‘ ಕಿಸೆಯಲ್ಲಿ ಬಾಲ್ ಇಟ್ಟು ಮೈದಾನವೆಲ್ಲಾ ಹುಡುಕಿದರು’ ! ಇದು ಬುಧವಾರ ಆರ್ ಸಿಬಿ ಪಂಜಾಬ್ ಪಂದ್ಯದ ವೇಳೆ ನಡೆದ ಅಂಪಾಯರ್ ಶಂಶುದ್ದೀನ್ ಯಡವಟ್ಟು.
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಬ್ಯಾಟಿಂಗ್ ಮಾಡುತ್ತಿತ್ತು . 15ನೇ ಓವರ್ ಎಸೆಯಲು ಬಂದ ಪಂಜಾಬ್ ಬೌಲರ್ ಅಂಕಿತ್ ರಜಪೂತ್ ಬಾಲ್ ಗಾಗಿ ಹುಡುಕಿದಾಗ ಬಾಲ್ ಯಾರಲ್ಲೂ ಇಲ್ಲ ? ಅಂಪಾಯರ್ ಶಂಶುದ್ದೀನ್ ಮತ್ತು ಬ್ರೂಸ್ ಆಕ್ಸನ್ ಫರ್ಡ್ ಮುಖ ಮುಖ ನೋಡಿಕೊಂಡರು. ಬಾಲ್ ಎಲ್ಲಿ ಹೋಗಿದೆ ಎಂದು ಯಾರಿಗೂ ಗೊತ್ತಿಲ್ಲ. ಹೆಚ್ಚುವರಿ ಅಂಪಾಯರ್ ಹೊಸ ಬಾಲ್ ತಂದರೂ ಕಳೆದು ಹೋದ ಬಾಲ್ ಸಿಗುತ್ತಿಲ್ಲ !
ಟಿವಿ ಅಂಪಾಯರ್ ವಿಡಿಯೋ ನೋಡಿದಾಗ ಅಸಲಿ ಕಥೆ ಗೊತ್ತಾಗಿದ್ದು. 14ನೇ ಓವರ್ ಮುಗಿದಾಗ ಅಂಪಾಯರ್ ಬ್ರೂಸ್ ಆಕ್ಸನ್ ಫರ್ಡ್ ಟೈಮ್ ಔಟ್ ಘೋಷಿಸುತ್ತಾರೆ. ಆಗ ಸ್ಕ್ವೇರ್ ಲೆಗ್ ನಲ್ಲಿದ್ದ ಅಂಪಾಯರ್ ಶಂಶುದ್ದೀನ್ ಬಂದು ಆಕ್ಸನ್ ಫರ್ಡ್ ಬಳಿಯಿಂದ ಬಾಲ್ ಪಡೆದು ತಮ್ಮ ಪ್ಯಾಂಟ್ ಕಿಸೆಯಲ್ಲಿ ಇಡುತ್ತಾರೆ ! ಆದರೆ ಟೈಮ್ ಔಟ್ ಮುಗಿದಾಗ ಶಂಶುದ್ದೀನ್ ಗೆ ತಾನು ಚೆಂಡನ್ನು ಕಿಸೆಯಲ್ಲಿ ಇಟ್ಟದ್ದು ನೆನಪೇ ಇಲ್ಲ !
ಟಿವಿ ಅಂಪಾಯರ್ ಶಂಶುದ್ದೀನ್ ಗೆ ಈ ಬಗ್ಗೆ ಹೇಳಿದಾಗ ಶಂಶುದ್ದೀನ್ ನಗುತ್ತಾ ಕಿಸೆಯಿಂದ ಚೆಂಡನ್ನು ಹೊರತೆಗೆದರು. ಬೆಂಗಳೂರು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗಂತೂ ಪುಕ್ಕಟೆ ಮನರಂಜನೆ.