Advertisement

ಟಿಸಿ ಸುಟ್ಟರೆ ರೈತರಿಗೆ ಲಕ್ಷಾಂತರ ಹಾನಿ: ಚಂದ್ರಕಾಂತ

06:25 PM Jul 08, 2022 | Team Udayavani |

ಆಳಂದ: ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳಿಗೆ ಕೃಷಿ ಪಂಪ್‌ಸೆಟ್‌ಗಳ ಭಾರ ಹೆಚ್ಚಾಗಿ ಪದೇ ಪದೇ ಸುಟ್ಟು ಹಾಳಾಗಿ ಸಕಾಲಕ್ಕೆ ದುರಸ್ತಿ ಆಗದೇ ಇರುವುದು ರೈತರಿಗೆ ಬೆಳೆನಷ್ಟವಾಗಿ ಸುಮಾರು 15 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಹೇಳಿದರು.

Advertisement

ತಾಲೂಕಿನ ರುದ್ರವಾಡಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಜೆಸ್ಕಾಂ ಆಯೋಜಿಸಿದ್ದ ವಿದ್ಯುತ್‌ ಸಮಸ್ಯೆ ಪರಿಹಾರಕ್ಕಾಗಿ ಆಯ್ದ ಸ್ಥಳಗಳಲ್ಲಿ ಪ್ರತಿ ತಿಂಗಳು ಜೆಸ್ಕಾಂ ಅಧಿಕಾರಿಗಳ ಗ್ರಾಮ ಭೇಟಿ ಮತ್ತು ವಿದ್ಯುತ್‌ ಅದಾಲತ್‌ನಲ್ಲಿ ಅವರು ಮಾತನಾಡಿದರು. ವಿದ್ಯುತ್‌ ನಂಬಿ ಬೆಳೆ ಬೆಳೆಯುವ ರೈತರಿಗೆ ಸಕಾಲಕ್ಕೆ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಅಲ್ಲದೇ, ಇದ್ದ ಟ್ರಾನ್ಸ್‌ಫಾರ್ಮರ್‌ ಸುಟ್ಟರೆ ದುರಸ್ತಿಯಾಗಿ ಬರುವ ವರೆಗೆ ಬೆಳೆಗಳು ನೀರಿಲ್ಲದೇ ಒಣಗಿ ನಷ್ಟವಾಗುತ್ತಿದೆ. ವಿದ್ಯುತ್‌ ಇದ್ದಾಗಲೂ ಹಲವಾರು ಬಾರಿ ಹೋಗಿ ಬರುತ್ತಿದೆ. ಇದರಿಂದ ನೀರುಣಿಸಲು ಆಗುತ್ತಿಲ್ಲ. ಅಧಿಕಾರಿಗಳು ಇಂತ ಸಮಸ್ಯೆ ತಪ್ಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಒಂದು ಟ್ರಾನ್ಸ್‌ಫಾರ್ಮರ್‌ಗೆ 20ರ ಬದಲು 30ರಿಂದ 40 ಪಂಪ್‌ಸೆಟ್‌ಗಳ ಸಂಪರ್ಕ ಒದಗಿಸಲಾಗಿದೆ. ಇದರಿಂದ ಭಾರ ಹೆಚ್ಚಾಗಿ ಟ್ರಾನ್ಸ್‌ಫಾರ್ಮರ್‌ ಹಾಗೂ ಪಂಪ್‌ಸೆಟ್‌ಗಳು ಸುಟ್ಟು ನಷ್ಟವಾಗುತ್ತಿವೆ. ಟ್ರಾನ್ಸ್‌ಫಾರ್ಮರ್‌ ಸುಟ್ಟ ಮೇಲೆ ರೈತರಿಂದ ಹಣ ತೆಗೆದುಕೊಳ್ಳದೇ ತಕ್ಷಣಕ್ಕೆ ಟ್ರಾನ್‌ Õಫಾರ್ಮರ್‌ ಅಳವಡಿಸಬೇಕು. ವಿದ್ಯುತ್‌ ಕಂಬಗಳ ಅವಶ್ಯಕತೆ ಇದ್ದಲ್ಲಿ ಸ್ಥಾಪಿಸಬೇಕು. ಜೋತುಬಿದ್ದ ವಿದ್ಯುತ್‌ ತಂತಿಗಳನ್ನು ಸರಿಪಡಿಸಬೇಕು. ಹೊಸ ವಿದ್ಯುತ್‌ ಸಂಪರ್ಕ ಪಡೆಯುವ ರೈತರಿಂದ ಠೇವಣಿ ಕಟ್ಟಿಸಿಕೊಂಡು ವಿದ್ಯುತ್‌ ಸಂಪರ್ಕ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆ ಮತ್ತು ದೂರುಗಳನ್ನು ಆಲಿಸಿದ ಜೆಸ್ಕಾಂ ಕಲಬುರಗಿ ಎಇಇ ಸುನಿಲಕುಮಾರ, ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟರೆ ಸ್ವತಃ ರೈತರೇ ದುರಸ್ತಿಗಿಳಿಯಬಾರದು. ಸಿಬ್ಬಂದಿ ಗಮನಕ್ಕೆ ತರಬೇಕು. ವಿದ್ಯುತ್‌ ಸಂಪರ್ಕ ಹಾಗೂ ಇನ್ನಿತರ ಕೆಲಸಗಳಿಗೆ ಮಧ್ಯವರ್ತಿಗಳಿಗೆ ಹಣಕೊಡಬೇಡಿ. ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.

ಪ್ರಗತಿಪರ ರೈತ ಆದಿನಾಥ ಹೀರಾ, ಶ್ರೀಧರ ಕೊಟ್ಟರಗಿ, ಬಸವಂತರಾಯ ಕೊಟ್ಟರಗಿ, ಬಸವರಾಜ ಮೂಲಗೆ, ಪಂಡಿತ ಪಾಟೀಲ, ಶ್ರವಣಕುಮಾರ ಜಮಾದಾರ, ಗುಂಡಪ್ಪ ಹಣಮಶೆಟ್ಟಿ, ಯಶ್ವಂತ ಪಾರಾಣೆ, ಘಂಟೆ ಮತ್ತಿತರ ರೈತರು ಪಂಪ್‌ ಸೆಟ್‌ಗಳ ವಿದ್ಯುತ್‌ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದರು.

Advertisement

ಜೆಸ್ಕಾಂ ಸಹಾಯಕ ಅಭಿಯಂತರ ವಿಕಾಸ ಅಪ್ಪಣನವರ, ರುದ್ರವಾಡಿ ಜೆಸ್ಕಾಂ ಶಾಖೆಯ ಮೈಸೂರ ಜಾಧವ, ಅಧಿಕಾರಿ ಪರಮೇಶ್ವರ, ಜೆಇ ರಾಘವೇಂದ್ರ, ಮೇಲ್ವಿಚಾರಕಿ ಸುಮನ್‌, ಜೆಸ್ಕಾಂ ಜೆಎಲ್‌ಎಂಗಳಾದ ರವಿಕುಮಾರ ವಡಗಾಂವ, ಅನಿಕುಮಾರ ಜವಳೆ, ವಸಂತಕುಮಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next