Advertisement
ಅದೊಂದು ಆಧಾರ ರಹಿತ ಹೇಳಿಕೆಯಾದುದರಿಂದ ಸಂವಾದದ ಕೊನೆಯಲ್ಲಿ ಆ ಬಗ್ಗೆ ಪ್ರಶ್ನೆಯನ್ನೆತ್ತಿದೆ. ವನ್ಯಜೀವಿ ಸಂಶೋಧಕರು ಅದನ್ನು ಒಪ್ಪಿಕೊಂಡರು ಮತ್ತು ಚಿರತೆಯ ಉದಾಹರಣೆಯನ್ನು ನೀಡುವುದರ ಮೂಲಕ ಸರ್ಮಥಿಸಿದರು. ಆದರೆ ಜೀವಜಾಲದ ವಿಕಾಸ ಪ್ರಕ್ರಿಯೆಯಲ್ಲಿ ಚಿರತೆ ಮತ್ತು ಹಾವುಗಳ ಜೀವನ ಕ್ರಮಕ್ಕೆ ಅಜಗಜಾಂತರವಿದೆ. ಆದ್ದರಿಂದ ಈ ಸಂಶೋಧಕರ ಉದಾಹರಣೆ ಸಮರ್ಪಕವಾಗಿರಲಿಲ್ಲ. ಆದರೆ ನನ್ನ ಪ್ರಶ್ನೆಗುತ್ತರಿಸಲು ಹೊರಟ ಇನ್ನೋರ್ವ ವನ್ಯಜೀವಿ ಶಾಸ್ತ್ರಜ್ಞರೂ ಸಂಶೋಧಕರ ನಿಲುವನ್ನೇ ಸಮರ್ಥಿಸಿಕೊಂಡರು. ಖೇದಕರವೆಂದರೆ ತಮ್ಮ ಸಮರ್ಥನೆಗೆ ಅವರು ಬಳಸಿದ್ದು ಸ್ವಾನುಭವದ ಆಧಾರವನ್ನಲ್ಲ, ಬದಲಿಗೆ ಇನ್ನಿಬ್ಬರು ಉರಗತಜ್ಞರ ಹೆಸರುಗಳನ್ನು ಉಲ್ಲೇಖೀಸಿ ಮಾತನಾಡಿದರು.
Related Articles
Advertisement
ಇಲಿ, ಹೆಗ್ಗಣ ಮತ್ತು ಹಲ್ಲಿಗಳ ಸಮಸ್ಯೆ ನಿವಾರಿಸಲು ಹತ್ತಾರು ವಿಷರಹಿತ ಕೇರೆಹಾವು, ಟ್ರಿಂಕೆಟ್ ಹಾವು ಮತ್ತು ತೋಳಹಾವುಗಳು ಈಗಲೂ ಕೆಲವು ವಠಾರದ ಸುತ್ತಮುತ್ತ ಆರೋಗ್ಯವಂತವಾಗಿ ಬದುಕುತ್ತಿವೆ. ಹಾಗಾಗಿ ಕೆಲವು ವರ್ಷಗಳಿಂದ ಅಲ್ಲಿ ಮೂಷಿಕಜಂತುಗಳ ತೊಂದರೆಯೂ ಗಣನೀಯವಾಗಿ ಹತೋಟಿಗೆ ಬಂದಿರುವುದನ್ನೂ ಗಮನಿಸಿರುವುದುಂಟು. ನಿಸರ್ಗವು ತಾನು ಸೃಷ್ಟಿಸಿದ ಜೀವಿಯೊಂದು ಎಂತಹ ವಿಷಮ ಪರಿಸ್ಥಿತಿಯನ್ನೂ ಎದುರಿಸಿ ಬದುಕಬಲ್ಲಂತಹ ಹುಟ್ಟರಿವು ಅನ್ನು ನೀಡಿರುತ್ತದೆ. ಆಕಸ್ಮತ್ತಾಗಿ ಅಪರಿಚಿತ ಪ್ರದೇಶಕ್ಕೆ ವರ್ಗಾವಣೆಗೊಂಡ ಹಾವೊಂದು ಕೆಲವು ದಿನಗಳ ಕಾಲ ಅತಂತ್ರತೆಯಿಂದ ಅಲೆದಾಡಬಹುದು.
ಕೆಲವೇ ದಿನಗಳ ಅಂತರದಲ್ಲಿ ಅದು ಸೂಕ್ತ ಪ್ರದೇಶವೊಂದನ್ನು ಆಯ್ದುಕೊಂಡು ಅಲ್ಲಿನ ಜೀವರಾಶಿಗಳೊಂದಿಗೆ ಒಂದು ತೆರನಾದ ಒಪ್ಪಂದ, ಸಾಮರಸ್ಯವನ್ನು ಬೆಳೆಸಿಕೊಂಡು ಬದುಕಬಹುದು ಅಥವಾ ಕೆಲವು ಹಾವುಗಳು ಅಲ್ಲಿನ ಭಕ್ಷಕ ಜೀವಿಗಳಿಗೆ ಆಹಾರವಾಗಿ ಆ ಪರಿಸರ ಸಮತೋಲನ ಕಾರ್ಯದಲ್ಲಿ ಹೊಸ ಚೈತನ್ಯ ಸೃಷ್ಟಿಸುವಲ್ಲಿಯೂ ಕಾರಣವಾಗಬಹುದು. ಇಂಥ ಅರಿವನ್ನು ಪಡೆಯದೆ, ಹಾವುಗಳು ದೀರ್ಘ ಉಪವಾಸಿಗಳೆಂದೂ ತಿಳಿಯದೆ ಏಕಾಏಕಿ, ಬಿಟ್ಟ ಹಾವುಗಳೆಲ್ಲ ಹೊಟ್ಟೆಗಿಲ್ಲದೆ ಸಾಯುತ್ತವೆ ಎಂದು ಹೇಳಿಕೆ ನೀಡುವುದು ಸಮಂಜಸವಲ್ಲ.
ಸುಮಾರು ಮೂರೂವರೆ ದಶಕಗಳಿಂದ ಉರಗಜೀವಿಗಳೊಂದಿಗೂ, ಅವಕ್ಕೆ ಸಂಬಂಧಿಸಿದ ಜನಜೀವನದೊಂದಿಗೂ ರಾತ್ರಿಹಗಲು ಒಡನಾಡುತ್ತ ಬಂದುದರಿಂದ ತಿಳಿದ ಒಂದು ವಿಷಾದಕರ ಸಂಗತಿಯೆಂದರೆ, ಎಷ್ಟೆಷ್ಟೋ ಬುದ್ಧಿಜೀವಿಗಳಿರಬಹುದು ಅಥವಾ ಮೊನ್ನೆ ಮೊನ್ನೆಯಷ್ಟೇ ವಿಜ್ಞಾನಯುಗಕ್ಕೆ ಕಾಲಿಟ್ಟು ವೈಜ್ಞಾನಿಕತೆಯನ್ನೇ ಉಸಿರಾಡುತ್ತ ಬೆಳೆದವರೇ ಇರಬಹುದು, ಅಂಥವರಲ್ಲಿ ಬಹುತೇಕರಿಗೆ ಪ್ರಕೃತಿಯ ಜೀವಜಾಲ ವ್ಯವಸ್ಥೆಯಲ್ಲಿ ಅಮೂಲ್ಯ ಪಾತ್ರವನ್ನು ನಿರ್ವಹಿಸುತ್ತ, ಹುಟ್ಟಿ ಸಾಯುವವರೆಗೆ ತಮ್ಮ ಸಹವರ್ತಿಗಳಾಗಿಯೇ ಬದುಕುತ್ತಿರುವ ಹಾವುಗಳಂಥ ಸಾಮಾನ್ಯ ಜೀವಿಗಳ ಕುರಿತು ಸಮರ್ಪಕ ಜ್ಞಾನ ಇಲ್ಲದಿರುವುದು ಒಂದೆಡೆಯಾದರೆ ನೈಜ ಸಾಧಕರ ಜ್ಞಾನವನ್ನು ಒಪ್ಪದೇ ಇರುವಂಥ ಮನಸ್ಥಿತಿಯೂ ಆಘಾತ ತರಿಸುತ್ತದೆ.
ಇದೇ ವನ್ಯಜೀವಿ ಶಾಸ್ತ್ರಜ್ಞರು, ಹಾವುಗಳಿಗೆ ಸಂವೇದನಾಶೀಲ ಶಕ್ತಿಯೇ ಇಲ್ಲ ಎಂದರು. ಅಂದರೆ ಅವು ಮನುಷ್ಯನ ಅಥವಾ ಇತರ ಜೀವರಾಶಿಗಳ ಸ್ನೇಹ, ಕ್ರೋಧಗಳಂಥ ಭಾವ ಕಂಪನಗಳನ್ನು ಗ್ರಹಿಸಲಾರವು ಎಂಬುದು ಅವರ ವಾದ. ಆದರೆ ಹಾವುಗಳು ಮಾತ್ರವೇ ಅಲ್ಲ, ನಿಸರ್ಗದ ಸಮಸ್ತ ಜೀವರಾಶಿಗಳಿಗೂ ಅಂಥ ಸೂಕ್ಷ್ಮ ಸಂವೇದನೆಗಳಿವೆ. ಅದಿಲ್ಲದ ಯಾವ ಜೀವಿಯೂ ನಿಸರ್ಗದಲ್ಲಿ ಬದುಕಲಾರದು. ಮುಖ್ಯವಾಗಿ ಹಾವುಗಳು ಪ್ರಕೃತಿಯ ಬಾಹ್ಯ ಆಗುಹೋಗುಗಳನ್ನು ಮಾತ್ರವೇ ಅಲ್ಲದೇ ಮನುಷ್ಯರ, ಇತರ ಜೀವರಾಶಿಗಳ ಮನಸ್ಸಿನ ಸೂಕ್ಷ್ಮ ಭಾವಾವೇಶಗಳನ್ನು ಗ್ರಹಿಸುವ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಬುದ್ಧಿಮತ್ತೆಯನ್ನು ಹೊಂದಿವೆ ಎಂಬುದು ಅನುಭವದ ಸತ್ಯ. ಆದರೆ ಪ್ರತಿ ವಿಷಯವನ್ನೂ ವೈಜ್ಞಾನಿಕ ಕನ್ನಡಕದ ಮೂಲಕವೇ ನೋಡ ಬಯಸುವ ಮನಸ್ಸುಗಳಿಗೆ ನಿಸರ್ಗದ ಬಹುತೇಕ ಸೂಕ್ಷ್ಮ ಅಂಶಗಳು ಅರಿವಿಗೆ ಬರಲಾರವು.
ಭಾರತದಲ್ಲಿ ಸಾವಿರಾರು ಉರಗ ಸಂರಕ್ಷಕರೂ, ತಜ್ಞರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ತಮ್ಮ ಪ್ರಾಣವನ್ನು ಪಣವಾಗಿಟ್ಟು ಹಾವುಗಳನ್ನೂ ಅವುಗಳಿಗೆ ಸಂಬಂಧಿಸಿದ ಜೀವಜಾಲವನ್ನೂ ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಂಥವರು ಡಾಕ್ಟರೇಟ್ ಪದವಿ ಪಡೆಯದಿದ್ದರೂ ಅವರ ಸಹಾಯ, ಸಹಕಾರದಿಂದಲೂ ವನ್ಯಜೀವಿ ವಿಜ್ಞಾನ ಬೆಳೆಯುತ್ತಿದೆ ಎಂಬುದು ಸತ್ಯ.
ಆದ್ದರಿಂದ ವೈಜ್ಞಾನಿಕರ ಹೇಳಿಕೆಗಳು ಅಂಥವರ ಪರಿಶ್ರಮವನ್ನೆಲ್ಲ, ನೀರಿನಲ್ಲಿಟ್ಟ ಹೋಮಕ್ಕೆ ಸಮ ಎಂಬಂತೆ ಬಿಂಬಿಸದಿರಲಿ ಹಾಗೂ ಯುವಪೀಳಿಗೆಯ ಮುಂದೆ ಉರಗಜೀವಿಗಳ ಬಗ್ಗೆ, ಅಧಿಕೃತವಾಗಿ ಮಾತನಾಡಲು ಹೊರಡುವ ಯಾರೇ ಆದರೂ ಸ್ವನುಭವದ ನೆಲೆಯಲ್ಲೇ ವ್ಯವಹರಿಸುವುದು ಅಗತ್ಯ. ಅಂಥ ನಿಲುವು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಬಲ್ಲದು.
– ಗುರುರಾಜ್ ಸನಿಲ್