Advertisement

ಸಾರಿಗೆ ಕ್ಷೇತ್ರಕ್ಕೆ  3.5 ಕೋಟಿ ರೂ.ಗೂ ಹೆಚ್ಚು ನಷ್ಟ! 

05:14 AM Jan 10, 2019 | |

ಮಂಗಳೂರು: ಭಾರತ ಬಂದ್‌ ಜನಜೀವನದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ ಕರಾವಳಿಯ ಎರಡು ಜಿಲ್ಲೆಗಳ ಸಾರಿಗೆ ವಲಯವನ್ನು ಬಲವಾಗಿ ಬಾಧಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ ಸಂಚಾರ ಸ್ಥಗಿತಗೊಂಡು 3.5 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ.

Advertisement

ಎರಡೂ  ಜಿಲ್ಲೆಗಳ ಪ್ರಮುಖ ನಗರ, ಪಟ್ಟಣ; ಇನ್ನಿತರ ಪ್ರದೇಶಗಳಿಗೆ ದಿನಕ್ಕೆ 3,600ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಎರಡು ದಿನಗಳಲ್ಲಿ 3,000ಕ್ಕೂ ಹೆಚ್ಚು ಖಾಸಗಿ ಬಸ್‌ ಸಂಚಾರ ರದ್ದಾಗಿದ್ದು ಖಾಸಗಿ ಕ್ಷೇತ್ರಕ್ಕೆ 2 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಮಂಗಳೂರಿನಲ್ಲಿ 360ಕ್ಕೂ ಹೆಚ್ಚಿನ ಸಿಟಿ ಬಸ್‌ಗಳಿದ್ದು, ಮಂಗಳವಾರ ಜನಸಂಚಾರ ಕಡಿಮೆ ಇದ್ದ ಕಾರಣ ಹೆಚ್ಚಿನ ಬಸ್‌ ಟ್ರಿಪ್‌ ಕಡಿತಗೊಂಡಿದ್ದವು. ಹೀಗಾಗಿ ಸಿಟಿ ಬಸ್‌ ವಲಯ ಸುಮಾರು 50 ಲಕ್ಷ ರೂ. ನಷ್ಟ ಅನುಭವಿಸಿದೆ.

ಕೆಎಸ್ಸಾರ್ಟಿಸಿಗೆ 1.20 ಕೋಟಿ ನಷ್ಟ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಪ್ರತಿ ದಿನ 350ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಪುತ್ತೂರು ವಿಭಾಗದಿಂದ ಸುಮಾರು 560 ಬಸ್‌ಗಳು ಸಂಚರಿಸುತ್ತವೆ. ಬಂದ್‌ನಿಂದ ಎರಡೂ ಡಿಪೋಗಳಲ್ಲಿ ಸುಮಾರು 1 ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ. ಮೊದಲ ದಿನ ಮಂಗಳೂರು ವಿಭಾಗ ದಿಂದ 255 ಬಸ್‌ಗಳ ಪೈಕಿ 158 ಮಾತ್ರಸಂಚರಿಸಿವೆ. ಪುತ್ತೂರು ವಿಭಾಗದ 288 ಬಸ್‌ಗಳ ಪೈಕಿ 184 ಮಾತ್ರ ಸಂಚರಿಸಿದ್ದವು. ಎರಡನೇ ದಿನ ಮಂಗಳೂರು ವಿಭಾಗದಿಂದ 251 ಬಸ್‌ಗಳ ಪೈಕಿ 205 ಮತ್ತು ಪುತ್ತೂರು ವಿಭಾಗದಿಂದ 283ರ ಪೈಕಿ 244 ಮಾತ್ರ ಸಂಚರಿಸಿದ್ದವು.

ಎಂದಿನಂತೆ ಸಂಚಾರ
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಕಾಸರಗೋಡಿಗೆ ಸಾಮಾನ್ಯ ದಿನಗಳಲ್ಲಿ ಸುಮಾರು 3 ನಿಮಿಷಕ್ಕೊಂದರಂತೆ 42 ಬಸ್‌ ಸಂಚರಿಸುತ್ತವೆ. ಬಂದ್‌ನ ಎರಡೂ ದಿನಗಳಲ್ಲಿ ಒಂದೂ ಬಸ್‌ ಸಂಚರಿಸಲಿಲ್ಲ. ಗುರುವಾರದಿಂದ ಸಂಚಾರ ಎಂದಿನಂತೆ ಇರಲಿದೆ. ರಾಜ್ಯ ಕೆಎಸ್ಸಾರ್ಟಿಸಿಗೆ  7.82 ಕೋಟಿ ರೂ. ನಷ್ಟ ಭಾರತ ಬಂದ್‌ ಪರಿಣಾಮದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮೊದಲ ದಿನ 5.40 ಕೋಟಿ ರೂ., ಎರಡನೇ ದಿನ 2.42 ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆ ಎರಡು ದಿನಗಳಲ್ಲಿ 7.82 ಕೋಟಿ ರೂ. ನಷ್ಟವಾಗಿದೆ. 

ನಷ್ಟದಲ್ಲಿ  ಬಸ್‌ಗಳು
ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕೆ. ರತ್ನವರ್ಮ ಬಲ್ಲಾಳ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಎರಡು ದಿನಗಳ ಕಾಲ ಹೆಚ್ಚಿನ ಖಾಸಗಿ ಬಸ್‌ಗಳು ಓಡಾಡಲಿಲ್ಲ. ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ಕೆಲವು ಬಸ್‌ ಓಡಿಸಿದ್ದೆವು. ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದ ಕಾರಣ ಅಪಾರ ನಷ್ಟ ಉಂಟಾಗಿದೆ. ಕೆಲವು ಬಸ್‌ ಮಾಲಕರು ನಿರ್ವಾಹಕರಿಗೆ ನಷ್ಟದಲ್ಲಿಯೇ ಹಣ ಪಾವತಿ ಮಾಡಿದ್ದಾರೆ ಎಂದಿದ್ದಾರೆ. 

Advertisement

72 ಲಕ್ಷ ರೂ. ನಷ್ಟ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಕ್ಕೆ ಎರಡು ದಿನಗಳಲ್ಲಿ ಸುಮಾರು 72 ಲಕ್ಷ ರೂ. ನಷ್ಟ ಉಂಟಾಗಿದೆ. ಮೊದಲ ದಿನ  1.50 ಲಕ್ಷ ಕಿ.ಮೀ., ಎರಡನೇ ದಿನ 64 ಸಾವಿರ ಕಿ.ಮೀ. ಬಸ್‌ ಸಂಚಾರ ರದ್ದಾಗಿತ್ತು.
ದೀಪಕ್‌ ಕುಮಾರ್‌, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ

50 ಲಕ್ಷ ರೂ. ನಷ್ಟ
ಬಂದ್‌ನಿಂದ ಮಂಗಳೂರಿನಲ್ಲಿ ಸಿಟಿ ಬಸ್‌ ಸಂಚಾರ ರದ್ದುಗೊಂಡು ಎರಡು ದಿನಗಳಲ್ಲಿ ಸುಮಾರು 50 ಲಕ್ಷ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಹೆಚ್ಚಿನ ಟ್ರಿಪ್‌ ರದ್ದಾಗಿತ್ತು.
ದಿಲ್‌ರಾಜ್‌ ಆಳ್ವ,  ಖಾಸಗಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next