ಮಂಗಳೂರು: ತೆರಿಗೆ ಹೆಚ್ಚಳ, ಕೆಎಸ್ಸಾರ್ಟಿಸಿ ಬಸ್‌ಗಳ ಅನಾರೋಗ್ಯಕರ ಪೈಪೋಟಿಯಿಂದಾಗಿ ಖಾಸಗಿ ಬಸ್ ಉದ್ಯಮ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದ್ದು ಸರಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಆಗ್ರಹಿಸಿದ್ದಾರೆ.
ಬುಧವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಸೀಟು ಭರ್ತಿ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಖಾಸಗಿ ಬಸ್‌ಗಳಲ್ಲಿ ಸೀಟುಗಳು ಖಾಲಿ ಇದ್ದರೂ 50 ಸೀಟು ಸಾಮರ್ಥ್ಯದ ಒಂದು ಬಸ್‌ಗೆ ಮೂರು ತಿಂಗಳಿಗೆ 50 ಸಾವಿರ ರೂ. ತೆರಿಗೆ (ಅಡ್ವಾನ್ಸ್ ಟ್ಯಾಕ್ಸ್) ಪಾವತಿಸಬೇಕಾಗಿದೆ. ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ತೆರಿಗೆ ವಿನಾಯಿತಿ ಇದೆ. ಕೆಎಸ್ಸಾರ್ಟಿಸಿ ವಿದ್ಯಾರ್ಥಿಗಳಿಗೆ ನೀಡುವ ಪಾಸ್ ಮೊತ್ತವನ್ನು ಸರಕಾರವೇ ಭರಿಸುತ್ತದೆ. ಆದರೆ ಖಾಸಗಿಯವರು ತಮಗೆ ಸಿಗುವ ಲಾಭಾಂಶದಲ್ಲಿಯೇ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ನೀಡುತ್ತಿದ್ದಾರೆ.
“ಶಕ್ತಿ’ ಯೋಜನೆಯಲ್ಲಿ ಕೆಎಸ್ಸಾರ್ಟಿಸಿಗೆ ಸರಕಾರ ಮೊತ್ತ ಪಾವತಿಸುತ್ತಿದೆ. ಶಕ್ತಿ ಯೋಜನೆಯಿಂದ ಹಲವೆಡೆ ಖಾಸಗಿ ಬಸ್‌ಗಳ ಆದಾಯದ ಮೇಲೆ ಹೊಡೆತ ಬಿದ್ದಿದೆ. ಈಗ ಖಾಸಗಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿರುವ ರೂಟ್‌ಗಳಲ್ಲಿಯೇ ಮತ್ತೆ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಟಿಕೆಟ್ ದರದಲ್ಲಿಯೂ ಅನಾರೋಗ್ಯಕರ ಪೈಪೋಟಿ ನೀಡಲಾಗುತ್ತಿದೆ. ಯಾವುದೇ ಮಾನದಂಡ ಅನುಸರಿಸುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಬಸ್ ಮಾಲಕರು ಸಾಲದ ಸುಳಿಯಲ್ಲಿ ಸಿಲುಕಿದ್ದು ಈ ಉದ್ಯಮವನ್ನು ನಂಬಿರುವ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಇದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾತನಾಡಿ, ದ.ಕ. ಜಿಲ್ಲೆಯ ಖಾಸಗಿ ಬಸ್ ವ್ಯವಸ್ಥೆ ಇತರ ಎಲ್ಲ ಕಡೆಗಳಿಗಿಂತಲೂ ಉತ್ತಮವಾಗಿದೆ. ಉದ್ಯಮ ಮುಂದುವರಿಯಲು ಸರಕಾರ ಸಹಕರಿಸಬೇಕು ಎಂದರು.
ದೂರು ನೀಡಿ: “ಚಲೋ ಕಾರ್ಡ್’ನ್ನು ಕೆಲವು ಬಸ್‌ಗಳಲ್ಲಿ ಸ್ವೀಕರಿಸುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಅಜೀಜ್ ಪರ್ತಿಪ್ಪಾಡಿ, ಅಂತಹ ನಿರ್ವಾಹಕರ ವಿರುದ್ಧ, ಅದೇ ರೀತಿ 10 ರೂ. ನಾಣ್ಯ ಸ್ವೀಕರಿಸದವರ ವಿರುದ್ಧ 7996999977ಗೆ ದೂರು ನೀಡಬಹುದು ಎಂದರು.
ಬಸ್ ಮಾಲಕರ ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಶಿಫಾಲಿ, ಜತೆ ಕಾರ್ಯದರ್ಶಿ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.