Advertisement

ರಜೆಯ ಮಜಾ ಕಳೆದು ಶಾಲೆಯತ್ತ ಹೆಜ್ಜೆ…

11:46 PM May 28, 2019 | mahesh |

ಪುತ್ತೂರು: ಮಕ್ಕಳಿಗೆ ಬೇಸಿಗೆ ರಜಾ ಮಜಾ ಕಳೆದು 2019 -20ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳು ಮೇ 29ರಂದು ಅಧಿಕೃತವಾಗಿ ಆರಂಭಗೊಳ್ಳಲಿವೆ. ತರಗತಿಗಳ ಆರಂಭದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಶಾಲೆಗಳಲ್ಲಿ ಪೂರಕ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ಮನಸ್ಸಿಗೆ ಖುಷಿ ನೀಡುವ ನಿಟ್ಟಿನಲ್ಲಿ ಶಾಲೆಗಳನ್ನು ಅಲಂಕಾರ ಮಾಡಲಾಗಿದೆ ಮತ್ತು ಎಲ್ಲ ಶಾಲೆಗಳಲ್ಲಿ ಆರಂಭೋತ್ಸವವನ್ನು ವಿವಿಧ ಚಟುವಟಿಕೆಗಳ ಮೂಲಕ ವಿಶೇಷವಾಗಿ ಆಚರಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ತಾಲೂಕು ಮಟ್ಟದ ಕಾರ್ಯಕ್ರಮವು ಪುತ್ತೂರಿನ ಹಾರಾಡಿ ಸರಕಾರಿ ಶಾಲೆಯಲ್ಲಿ ನಡೆಯಲಿದೆ. ತಾಲೂಕು ಮಟ್ಟದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

Advertisement

ಪೇಟೆ ರಶ್‌
ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಸೋಮವಾರ, ಮಂಗಳವಾರ ಪುತ್ತೂರು ನಗರದ ಅಂಗಡಿ ಮುಂಗಟ್ಟುಗಳಲ್ಲಿ ಜನಸಂದಣಿಯೂ ಅಧಿಕವಾಗಿತ್ತು. ಶಾಲಾ ಪರಿಕರಗಳ ಖರೀದಿ, ಸಮವಸ್ತ್ರ – ಇತರ ವಸ್ತ್ರ ಖರೀದಿ, ಕೊಡೆ, ರೇನ್‌ಕೋಟ್ ಖರೀದಿಗೆ ಆಗಮಿಸಿದವರ ಸಂಖ್ಯೆ ಅಧಿಕವಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.

ಶೇ. 73 ಪಠ್ಯಪುಸ್ತಕ ವಿತರಣೆ
ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಮೂಲಕ ಶೇ. 73ರಷ್ಟು ಪಠ್ಯಪುಸ್ತಕ ಪುಸ್ತಕ ವಿತರಣೆ ಪೂರ್ಣಗೊಳಿಸಲಾಗಿದೆ. ತರಗತಿವಾರು ಮತ್ತು ವಿಷಯವಾರು ಪಠ್ಯಪುಸ್ತಕಗಳ ವಿತರಣೆ ಮಾಡಲಾಗಿದೆ. ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪ್ರತಿ ಪಠ್ಯಪುಸ್ತಕ ನೀಡಲಾಗುತ್ತಿದೆ. ಈ ಶಾಲೆಗಳ ಮುಖ್ಯಸ್ಥರು ಆನ್‌ಲೈನ್‌ ಇಂಡೆಂಟ್ ಮೂಲಕ ಪುಸ್ತಕದ ಪ್ರಮಾಣವನ್ನು ನಿಗದಿಪಡಿಸಿ ಹಣ ಪಾವತಿಸಿ ಚಲನ್‌ನ್ನು ಬಿಇಒ ಕಚೇರಿಗೆ ತೋರಿಸುವ ಮೂಲಕ ಪಠ್ಯ ಪುಸ್ತಕಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೆ ಉಚಿತ ಪ್ರತಿ ಪಠ್ಯಪುಸ್ತಕವನ್ನು ಕಳೆದ ವರ್ಷ ನೀಡಿದ ಆಧಾರದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಹೆಚ್ಚು ಅಥವಾ ಕಡಿಮೆಯಾದಲ್ಲಿ ಮರಳಿ ಬಿಇಒ ಕಚೇರಿಯನ್ನು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಶಿಕ್ಷಕರ ಸಭೆ
ನಗರದ ಮಾೖದೆ ದೇವುಸ್‌ ಚರ್ಚ್‌ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ಎಲ್ಲ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆಯೋಜಿಸಿದ್ದರು. ಸಭೆಯಲ್ಲಿ ಶಾಲೆಗಳಿಗೆ ಸಂಬಂಧಿಸಿದ ಅಹವಾಲು, ಸಿದ್ಧತೆ, ಮುಂದೆ ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚಿಸಿ ಸಲಹೆ -ಸೂಚನೆಗಳನ್ನು ನೀಡಲಾಗಿದೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next