Advertisement

ಸೂಕ್ಷ್ಮತೆ ಕಳೆದುಕೊಳ್ಳುತ್ತಿದೆ ಕಾಷ್ಠ ಶಿಲ್ಪ ಪರಂಪರೆ

03:05 PM Dec 02, 2019 | Team Udayavani |

ಹೊನ್ನಾವರ: ಉತ್ತರ ಕನ್ನಡದ ಕುಮಟಾ, ಹೊನ್ನಾವರ, ಯಲ್ಲಾಪುರ ಮತ್ತು ಶಿವಮೊಗ್ಗಾ ಸಾಗರ ತಾಲೂಕುಗಳಲ್ಲಿ ವಿಶೇಷವಾಗಿ ಕಂಡುಬರುತ್ತಿದ್ದ ಕಾಷ್ಠಶಿಲ್ಪ ಪರಂಪರೆ ತನ್ನ ಸೂಕ್ಷ್ಮತೆ ಕಳೆದುಕೊಳ್ಳುತ್ತಿದೆ. ವಂಶವಾಹಿನಿಯಲ್ಲಿ ಕಾಷ್ಠಶಿಲ್ಪದ ಸೂಕ್ಷ್ಮತೆ ಉಳಿಸಿಕೊಂಡು ಬಂದ ಗುಡಿಗಾರ ಸಮಾಜ ವೃತ್ತಿಯಲ್ಲಿಬದಲಾವಣೆ ಮಾಡಿಕೊಳ್ಳುತ್ತಿರುವುದು,

Advertisement

ವೃತ್ತಿಯಲ್ಲಿದ್ದವರುಅನಿವಾರ್ಯವಾಗಿವ್ಯಾವಹಾರಿಕವಾಗಿರುವುದು ದೇಶದ ಅಮೂಲ್ಯ ಪ್ರತಿಭೆಗೆ ಮಸುಕು ಕವಿದಿದೆ. ರಾಮಚಂದ್ರಾಪುರ ಮಠಕ್ಕೆ ಆನೆದಂತದ ಸಿಂಹಾಸನ ಮಾಡಿಕೊಟ್ಟ ಸಾಗರದ ಗುಡಿಗಾರರು, ಲಂಡನ್‌ ಮ್ಯೂಸಿಯಂನಲ್ಲಿ ಮಹಾಭಾರತ, ಗೀತೋಪದೇಶದ ಪ್ರತಿಮೆಗಳು ಪ್ರದರ್ಶನ ಮಾಡುವಂತೆ ಶ್ರೇಷ್ಠ ಶಿಲ್ಪ ಕೊಟ್ಟ ಕುಮಟಾ ಗುಡಿಗಾರರು, ಎರಡು ರಾಷ್ಟ್ರಪ್ರಶಸ್ತಿ ಪಡೆದ ಹೊನ್ನಾವರದ ವಿಠಲ ಶೆಟ್ಟಿ ಗುಡಿಗಾರರು, ಮೈಸೂರು ಮಹಾರಾಜರ ಕಾಲದಲ್ಲಿ ಆಸ್ಥಾನ ಶಿಲ್ಪಿಯಾಗಿದ್ದ ವೆಂಕಪ್ಪ ಗುಡಿಗಾರರು ಈಗ ಇಲ್ಲ. ಕೃಷ್ಣನನ್ನು ತಬ್ಬಿಕೊಂಡ ರಾಧೆ ಮತ್ತು ಗೀತೋಪದೇಶದ ಮೂಲ ಕೃತಿಯನ್ನು ರಚಿಸಿದ್ದ ವೆಂಕಪ್ಪ ಗುಡಿಗಾರರು ಮೂಲತಃ ಖರ್ವಾನಾಥಗೇರಿಯವರು, ಹೊನ್ನಾವರಕ್ಕೆ ಬಂದು ನೆಲೆಸಿದ್ದರು. ಇವರ ಕೃತಿಯನ್ನು ನೋಡಿ ಮಹಾರಾಜರು ಮೈಸೂರಿಗೆ ಕರೆಸಿಕೊಂಡುಕಾರು ಉಡುಗೊರೆಕೊಟ್ಟು ಉಳಿಸಿಕೊಂಡಿದ್ದರು.

ಕುಮಟಾದ ದತ್ತ ಗುಡಿಗಾರರಿಗೆ ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ದೊರಕಿದ್ದವು. ವೈವಿಧ್ಯಮಯ ದೇವರ ಮೂರ್ತಿಗಳನ್ನು, ದೊಡ್ಡ ರಥಗಳನ್ನುನಿರ್ಮಿಸುತ್ತಿದ್ದ ಇವರ ಮಗ ದೇವಿದಾಸ ಶೇಟ್‌ ಮತ್ತು ಕುಟುಂಬದವರು ಅವರ ಮಹಲಸಾ ಕಲಾಕೇಂದ್ರವನ್ನು ವಿಸ್ತರಿಸಿ ನಡೆಸುತ್ತಿದ್ದಾರೆ. ನೂರಾರು ಜನರಿಗೆ ಕೆಲಸಕೊಟ್ಟಿದ್ದಾರೆ. ಮೊದಲಿನ ಸೂಕ್ಷ್ಮತೆ ಈಗಿಲ್ಲ. ವರ್ಷಗಟ್ಟಲೆ ಒಂದು ಕೃತಿ ರಚಿಸಿದರೆ ಅದನ್ನು ಕೊಳ್ಳುವವರೂ ಇಲ್ಲ, ಶ್ರೀಗಂಧ ಸಿಗುವುದಿಲ್ಲ. ಆದ್ದರಿಂದ ಶಿವಣಿ ಮೊದಲಾದ ಹಗುರ ಕಟ್ಟಿಗೆಗಳಿಂದ ಮೂರ್ತಿನಿರ್ಮಿಸುತ್ತೇವೆ. ಪರಂಪರೆಯನ್ನು ಒಂದು ಹಂತದಲ್ಲಿ ಕಾಯ್ದುಕೊಂಡು ಬಂದಿದ್ದೇವೆ ಎನ್ನುತ್ತಾರೆ ಅವರು. ಹೊನ್ನಾವರದ ದೇವಿದಾಸ ಗುಡಿಗಾರರ ಮತ್ತು ವಿಠಲ ಗುಡಿಗಾರರ ಮಕ್ಕಳು ಅದೇ ವ್ಯವಹಾರವನ್ನು ಮುಂದುವರಿಸಿದ್ದು, ಸೂಕ್ಷ್ಮ ಕೃತಿ ಗಳಿಗಿಂತ ಅಗ್ಗದ ಕೃತಿಗಳಿಗೆ ಬೇಡಿಕೆ ಇದೆ ಎನ್ನುತ್ತಾರೆ ಇವರು.

ಯಲ್ಲಾಪುರದ ಭಿಕ್ಕು ಗುಡಿಗಾರರು ದೇವಾಲಯಗಳ ಬಾಗಿಲು, ದೇವರ ಪೀಠಗಳನ್ನು ವಿದೇಶಗಳಿಗೂ ರಫ್ತು ಮಾಡುತ್ತಾರೆ. ಕುಮಟಾ ಮಹಾಲಸಾ ಕಲಾಕೇಂದ್ರದ ನವರಂಗ ಶಿಲ್ಪ ಅಪರೂಪವಾದದ್ದು. ಕಲಾ ಶಾಲೆಯಿಲ್ಲದ, ಕೊಳ್ಳುವವರೂ ಹೆಚ್ಚು ಸಂಖ್ಯೆಯಲ್ಲಿ ಇಲ್ಲದ ಕಾಲದಲ್ಲಿ ಅಪೂರ್ವ ಸೂಕ್ಷ್ಮತೆಯನ್ನು, ಅರ್ಥವಂತಿಕೆಯನ್ನು ಉಳ್ಳ ಭಾವಪೂರ್ಣ ಶ್ರೀಗಂಧದ ಕೆತ್ತನೆಗೆ ಹೆಸರಾಗಿದ್ದ ಗುಡಿಗಾರರು ದೊಡ್ಡ ಪರಂಪರೆ ಹುಟ್ಟುಹಾಕಿದ್ದರು. ಈಗ ಈ ಕುಟುಂಬದ ಹೆಚ್ಚಿನವರು ಬೇರೆಬೇರೆವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ.ಬೆಂಕಿ ಪೊಟ್ಟಣದಲ್ಲಿ ತುಂಬಿಡಬಹುದಾದ ಸೀರೆಯನ್ನು ಬೆರಳಿನ ಉಗುರಿನಿಂದ ನೇಯುತ್ತಿದ್ದ ಪರಿಣಿತರ ಬೆರಳನ್ನೇ ವಿದೇಶಿಯರು ಕಡಿದು ಹಾಕಿದರಂತೆ. ಈಗ ಸರ್ಕಾರದ ನಿರ್ಲಕ್ಷ್ಮ ದಿಂದ ಸೂಕ್ಷ್ಮ ಕಾಷ್ಠಶಿಲ್ಪಿಗಳ ಬೆರಳುಗಳು ತನ್ನ ಗುಣವನ್ನು ಕಳೆದುಕೊಳ್ಳುತ್ತಿವೆ. ಸರ್ಕಾರ ಇಂಥವರನ್ನು ಗುರುತಿಸಿ, ಆರ್ಥಿಕನೆರವು ನೀಡಿ ಕಾಷ್ಠಶಿಲ್ಪದ ಸೂಕ್ಷ್ಮತೆಯನ್ನು ರಕ್ಷಿಸಬೇಕಾದ ಅಗತ್ಯವಿದೆ.

 

Advertisement

-ಜೀಯು ಹೊನ್ನಾವ

Advertisement

Udayavani is now on Telegram. Click here to join our channel and stay updated with the latest news.

Next