Advertisement

ಕದಿಯುವಾಗ ಗೆದ್ದೆ ಧರಿಸುವಾಗ ಸೋತೆ!

01:38 PM Dec 05, 2017 | |

ನಾವು ದೇವಸ್ಥಾನದಿಂದ ಮರಳುವ ಹೊತ್ತಿಗೆ ಚಾಲಾಕಿ ಕಳ್ಳನೊಬ್ಬ ನಮ್ಮ ಬ್ಯಾಗ್‌ಗಳಿದ್ದ ಹೊಸಬಟ್ಟೆ, ಹಣವನ್ನು ಅಪಹರಿಸಿದ್ದ. ಅವನು ಕದ್ದೊಯ್ದಿದ್ದ ವಸ್ತುಗಳ ಪಟ್ಟಿಯಲ್ಲಿ ನನ್ನ ಜೀನ್ಸ್‌ ಪ್ಯಾಂಟ್‌ ಕೂಡ ಸೇರಿತ್ತು. ಅಕಸ್ಮಾತ್‌ ಮನೆಯಲ್ಲಿ ಕೇಳಿದರೆ ಏನು ಮಾಡಲಿ ಎಂದು ಯೋಚಿಸಿದಾಗ, ನನ್ನ ಪ್ಯಾಂಟ್‌ ಥರವೇ ಇದ್ದ ಗೆಳೆಯನ ಜೀನ್ಸ್‌ ಪ್ಯಾಂಟ್‌ ಕಣ್ಣಿಗೆ ಬಿತ್ತು….

Advertisement

ಆಗಿನ್ನೂ ನಾನು ಏಳನೇ ತರಗತಿ ಹುಡುಗ ಅನ್ಸುತ್ತೆ. ಅವಾಗಾಗ್ಲೆ ಜೀನ್ಸ್‌ ಪ್ಯಾಂಟ್‌ಗಳ ಕಾಲ ಶುರುವಾಗಿತ್ತು. ಓಡಾಡಲು ರಸ್ತೆಗಳಿಲ್ಲದ ಹಳ್ಳಿಗಳಿಗೂ “ಬ್ಲೂ’ ಹೆಸರಿನ ಬ್ರಾಂಡೆಡ್‌ ಜೀನ್ಸ್‌ ಪ್ಯಾಂಟ್‌ ದಾಳಿ ಮಾಡಿದ್ದವು. ದೊಡ್ಡವರಿಗೆ ಹಾಕಿಕೊಳ್ಳಲು ಮುಲಾಜಿದ್ದರೂ ಚಿಕ್ಕಮಕ್ಕಳಿಗೆ ಧಾರಾಳವಾಗಿ ಕೊಡಿಸುತ್ತಿದ್ದರು. ನಮ್ಮಪ್ಪ ಸೆಲೆಕ್ಟ್ ಮಾಡಿದ ಬಟ್ಟೆಯನ್ನಷ್ಟೇ ಹಾಕುತ್ತಿದ್ದ ನನಗೆ ಅದೊಮ್ಮೆ ಏಕಾಏಕಿ ಹೊಸದೊಂದು ಜೀನ್ಸ್‌ಪ್ಯಾಂಟ್‌ ಕೊಡಿಸಿಬಿಟ್ಟಿದ್ದರು.

ಅವೆಲ್ಲಾ ಹೊಸ ಅಭ್ಯಾಸವಾದ್ದರಿಂದ ಅದನ್ನು ಹಾಕಿಕೊಂಡು ಶಾಲೆಗೆ ಹೋಗುವುದಾದರೂ ಹೇಗೆಂಬ ನಾಚಿಕೆ ನನಗೆ. ಸ್ವಲ್ಪ ದಿನ ಬಿಟ್ಟು ನಂತರ ಹಾಕಿಕೊಂಡರಾಯಿತೆಂದು ಹಾಗೇ ಎತ್ತಿಟ್ಟಿದ್ದೆ. ಅದೇ ಸಮಯಕ್ಕೆ ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸವೂ ಬಂತು. ದಕ್ಷಿಣದತ್ತ ನಮ್ಮ ಪಯಣ. ಪ್ರವಾಸಕ್ಕೆ ಹೋದಾಗ ಹೊಸ ಪ್ಯಾಂಟ್‌ ಧರಿಸುವುದು ಉತ್ತಮವೆನಿಸಿತು.

ಇನ್ನೂ ಕವರ್‌ನೂ° ಬಿಚ್ಚಿರದಿದ್ದ ಪ್ಯಾಂಟ್‌ನ್ನು ಹಾಗೇ ಬ್ಯಾಗಿನೊಳಗೆ ತುರುಕಿಕೊಂಡು ಬಸ್‌ ಹತ್ತಿದ್ದೆ. ಪ್ರವಾಸವೇನೋ ಮಜವಾಗಿತ್ತು. ಹಣೆಬರಹಕ್ಕೆ ಹೊಣೆಯಾರು ಎನ್ನುವಂತೆ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ ದರ್ಶನಕ್ಕೆಂದು ತೆರಳಿದ್ದಾಗ ಡ್ರೆ„ವರ್‌, ಬಸ್‌ನ ಕಿಟಕಿ ಗಾಜುಗಳನ್ನು ಸರಿಸದೇ ಹಾಗೇ ಇಳಿದು ಚಾ ಅಂಗಡಿಗೆ ಹೋಗಿದ್ದರು.

ಅದೇ ಸಮಯ ನೋಡಿ ಕಳ್ಳನೊಬ್ಬ ಬಸ್‌ ಕಿಟಿಕಿ ಮೂಲಕವೇ ಹಲವಾರು ಬ್ಯಾಗುಗಳನ್ನು ಬಿಚ್ಚಿ ಡ್ರೆಸ್‌, ಪರ್ಸ್‌ಗಳನ್ನು ಹೊತ್ತೂಯ್ದಿದ್ದ. ಕಳ್ಳತನವಾದ ವಸ್ತುಗಳ ಪಟ್ಟಿಗೆ ನನ್ನ ಹೊಸ ಪ್ಯಾಂಟ್‌ ಕೂಡ ಸೇರಿತ್ತು. ಈ ಪ್ಯಾಂಟ್‌ನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗೋದು ಬೇಡ, ಇದು ದುಬಾರಿಯದ್ದು. ಅಕಸ್ಮಾತ್‌ ಕಳೆದು ಹೋದರೆ ಎಂದೆಲ್ಲಾ ಅಮ್ಮ ಮೊದಲೇ ಎಚ್ಚರಿಸಿದ್ದು ನೆನಪಾಗಿ ಕಣ್ಣಲ್ಲಿ ನೀರಾಡಿತು.

Advertisement

ಏನ್ಮಾಡೋದು ಎಂದು ತೋಚದೆ ನನ್ನ ಆಪ್ತ ಸ್ನೇಹಿತನೊಬ್ಬನ ಪ್ಯಾಂಟೂ ಅದೇ ಬಣ್ಣದ್ದಿದ್ದುದರಿಂದ ಅವನಿಗೆ ತಿಳಿಯದಂತೆ ಕದ್ದು, ಅದನ್ನು ನನ್ನ ಬ್ಯಾಗಿಗೆ ಸೇರಿಸಿದೆ. ಅದನ್ನೇ ಮನೆಗೆ ಕೊಂಡೊಯ್ದು “ನೀರಲ್ಲಿ ನೆನೆಸಿದ್ದಕ್ಕೆ ಹಾಗೆ ಆಗಿದೆ’ ಎಂದು ಸಮಜಾಯಿಷಿ ನೀಡಿದೆ, ಆದರೂ, ಅಮ್ಮ “ಇಲ್ಲಾ ನೀನು ಬದಲಿಸಿಕೊಂಡು ಬಂದಿದ್ದೀಯಾ. ಇದು ನಾವು ಕೊಡಿಸಿದ್ದಲ್ಲ. ಯಾರಧ್ದೋ, ಏನೋ. ಹೋಗಿ ವಾಪಸ್‌ ಕೊಡು’ ಎಂದು ಗದರಿದರು. 

ನನಗೆ ಒಳಗೊಳಗೇ ಸಮಾಧಾನವಾಯ್ತು. ನಂತರ ಯಾರಧ್ದೋ ಕೇಳಿ ಕೊಡುತ್ತೇನೆಂದು ಶಾಲೆಗೆ ತಂದು, “ಇದು ಮಿಸ್ಸಾಗಿ ನನ್ನ ಬ್ಯಾಗಿನೊಳಗೆ ಸೇರಿಕೊಂಡಿತ್ತು’ ಎಂದು ಸ್ನೇಹಿತನಿಗೆ ಮರಳಿ ಕೊಟ್ಟೆ. ನನ್ನ ಅದೃಷ್ಟಕ್ಕೆ ಅಮ್ಮನೂ ಆ ಜೀನ್ಸ್‌ ಪ್ಯಾಂಟ್‌ ಬಗ್ಗೆ ಮತ್ತೆ ಮತ್ತೆ ಏನೂ ಕೇಳಲಿಲ್ಲ. ಅದಾಗಿ ಬಹಳ ವರ್ಷಗಳವರೆಗೆ ನಾನು ಜೀನ್ಸ್‌ ಪ್ಯಾಂಟ್‌ ತೊಡಲೇ ಇಲ್ಲ. “ಪ್ರಥಮ ಚುಂಬನಂ ದಂತ ಭಗ್ನಂ’ ಅಂತಾರಲ್ಲ, ಹಾಗಾಗಿತ್ತು ನನ್ನ ಕಥೆ.

* ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next