Advertisement

ಒಂದು ಸರಣಿ ಸೋತ ಮಾತ್ರಕ್ಕೆ ಇಡೀ ತಂಡವೇ ಕಳಪೆಯಲ್ಲ

12:02 AM Jan 26, 2022 | Team Udayavani |

ಭಾರತದಲ್ಲಿ ಕ್ರಿಕೆಟ್‌ ಆಟದ ಮೇಲಿರುವ ಅಭಿಮಾನ ಹೇಳತೀರದ್ದು. ಗೆದ್ದಾಗ ಅತಿಯಾಗಿ ಸಂಭ್ರಮಿಸುವ ಮತ್ತು ಸೋತಾಗ ಅಷ್ಟೇ ಕೋಪದಿಂದಲೇ ವರ್ತಿಸುವುದು ತೀರಾ ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. ಇದರಲ್ಲಿ ಅಭಿಮಾನಿಗಳ ತಪ್ಪಿದೆ ಎಂದು ಹೇಳುವುದು ಅಸಾಧ್ಯ. ಇದಕ್ಕೆ ಕಾರಣ, ಕ್ರಿಕೆಟ್‌ ಆಟಗಾರರನ್ನು ಕೆಲವೊಮ್ಮೆ ದೇವರಂತೆ ನೋಡುವ ಸಂಪ್ರದಾಯವೂ ಇಲ್ಲಿದೆ.

Advertisement

ಇದಕ್ಕೆ ತೀರಾ ಇತ್ತೀಚೆಗಿನ ಉದಾಹರಣೆ ಎಂದರೆ, ಇತ್ತೀಚಿನ ದಕ್ಷಿಣ ಆಫ್ರಿಕಾದಲ್ಲಿನ ಟೆಸ್ಟ್‌ ಮತ್ತು ಏಕದಿನ ಸರಣಿ. ಈ ಎರಡೂ ಸರಣಿಗಳನ್ನು ಭಾರತ ಕಳೆದುಕೊಂಡಿದೆ. ಟೆಸ್ಟ್‌ನಲ್ಲಿ 2-1 ಅಂತರದಿಂದ ಸೋತಿತಾದರೂ ಏಕದಿನದಲ್ಲಿ ಮೂರು ಪಂದ್ಯಗಳನ್ನೂ ಕಳೆದುಕೊಂಡು ಹೀನಾಯವಾಗಿಯೇ ಸೋತಿತು. ಇದಕ್ಕೆ ಕಾರಣಗಳು ಹಲವಾರು ಇವೆ.

ಈ ಬಾರಿ ಟೆಸ್ಟ್‌ ತಂಡದ ನೇತೃತ್ವವನ್ನು ವಿರಾಟ್‌ ಕೊಹ್ಲಿ ಅವರೇ ವಹಿಸಿಕೊಂಡಿದ್ದರಾದರೂ, 2ನೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದರು. ಈ ಪಂದ್ಯದಲ್ಲಿ ಅಜಿಂಕ್ಯ ರೆಹಾನೆ ಮುನ್ನಡೆಸಬೇಕಿತ್ತು. ಆದರೆ ಇವರ ಬದಲಿಗೆ ಕೆ.ಎಲ್‌.ರಾಹುಲ್‌ ಅವರಿಗೆ ನಾಯಕತ್ವ ವಹಿಸಲಾಗಿತ್ತು. ಆದರೆ ಮೊದಲ ಟೆಸ್ಟ್‌ ನಾಯಕತ್ವದ ಪಂದ್ಯವನ್ನೇ ರಾಹುಲ್‌ ಸೋತರು. ಮೂರನೇ ಪಂದ್ಯಕ್ಕೆ ಮತ್ತೆ ಕೊಹ್ಲಿ ಬಂದರಾದರೂ ಫ‌ಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಇಲ್ಲಿ ರೋಹಿತ್‌ ಶರ್ಮ ಅನುಪಸ್ಥಿತಿ ಹೆಚ್ಚಾಗಿಯೇ ಕಾಡಿತು. ಇನ್ನು ಏಕದಿನ ತಂಡದ ನಾಯಕತ್ವದಿಂದ ವಿರಾಟ್‌ ಕೊಹ್ಲಿ ಅವರನ್ನು ಸ್ವತಃ ಬಿಸಿಸಿಐ ತೆಗೆದುಹಾಕಿದೆ. ಏಕದಿನದಲ್ಲಿ ಕೊಹ್ಲಿ ಅವರದ್ದು ಉತ್ತಮ ಪ್ರದರ್ಶನವಿದೆಯಾದರೂ ವೈಟ್‌ಬಾಲ್‌ ಕ್ರಿಕೆಟ್‌ಗೆ ಒಬ್ಬರೇ ನಾಯಕರಿರಬೇಕು ಎಂಬ ತಣ್ತೀದ ಆಧಾರದ ಮೇಲೆ ಕೊಹ್ಲಿ ಅವರನ್ನು ತೆಗೆದುಹಾಕಿ, ರೋಹಿತ್‌ ಶರ್ಮ ಅವರನ್ನು ನೇಮಿಸಲಾಗಿದೆ. ಆದರೆ ಗಾಯದ ಕಾರಣದಿಂದಾಗಿ ಮೊದಲ ಸರಣಿಯಲ್ಲೇ ರೋಹಿತ್‌ ಭಾಗಿಯಾಗಲಿಲ್ಲ. ಹೀಗಾಗಿ ಕೆ.ಎಲ್‌.ರಾಹುಲ್‌ ಅವರೇ ನಾಯಕತ್ವ ನಿಭಾಯಿಸಬೇಕಾಯಿತು.

ಸದ್ಯ ಟೆಸ್ಟ್‌ ಮತ್ತು ಏಕದಿನ ಸರಣಿಗಳೆರಡನ್ನೂ ಸೋತಿರುವುದರಿಂದ ಕ್ರಿಕೆಟ್‌ ಪಂಡಿತರು ಹೊಸ ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ಕೆ.ಎಲ್‌.ರಾಹುಲ್‌ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಲು ಮುಂದಾಗಿದ್ದಾರೆ. ರಾಹುಲ್‌ ಮೇಲೆ ಭಾರೀ ನಿರೀಕ್ಷೆ ಇರಿಸಿಕೊಂಡದ್ದೇ ತಪ್ಪಾಯಿತು ಎಂಬ ಮಾತುಗಳೂ ಕೇಳಿಬಂದಿವೆ.  ದಿಢೀರನೇ ವಿರಾಟ್‌ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿದ್ದು, ಟೆಸ್ಟ್‌ ಸರಣಿ ಸೋತ ಅನಂತರ ನಾಯಕತ್ವವನ್ನು ಅವರೇ ಬಿಟ್ಟಿದ್ದು, ಎಲ್ಲೋ ಒಂದು ಕಡೆಯಲ್ಲಿ ತಂಡದ ಮೇಲೆ ಪರಿಣಾಮ ಬೀರಿದೆ. ಈ ಅಂಶವನ್ನು ಸ್ವತಃ ಕೋಚ್‌ ರಾಹುಲ್‌ ದ್ರಾವಿಡ್‌ ಅವರೇ ಹೊರಹಾಕಿದ್ದಾರೆ. ಏಕದಿನ ತಂಡದಲ್ಲಿ ಕೊಂಚ ಅಸಮತೋಲನ ಇರುವುದು ಸತ್ಯ ಎಂದಿದ್ದಾರೆ. ಅಲ್ಲದೆ ಮಧ್ಯಮ ಕ್ರಮಾಂಕದ ಕೆಲವು ಆಟಗಾರರು ಸ್ಥಿರವಾದ ಆಟ ಪ್ರದರ್ಶಿಸಲೇಬೇಕು ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ಇದೆಲ್ಲದರ ಹೊರತಾಗಿ ರಾಹುಲ್‌ ದ್ರಾವಿಡ್‌ ಅವರಿಗಾಗಲಿ ಅಥವಾ ಹೊಸ ನಾಯಕ ರೋಹಿತ್‌ಗಾಗಲಿ ಒಂದಷ್ಟು ಪಂದ್ಯಗಳನ್ನು ಆಡಲು ಅವಕಾಶ ನೀಡಬೇಕು. ಆಗಷ್ಟೇ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಾಧ್ಯ ಎಂಬುದನ್ನು ಮರೆಯಬಾರದು. ಅಲ್ಲದೆ ಇದೊಂದೇ ಸರಣಿ ಮೂಲಕ ರಾಹುಲ್‌ ದ್ರಾವಿಡ್‌ ಅಥವಾ ಇಡೀ ತಂಡದ ಸಾಧನೆಯನ್ನು ಪರಾಮರ್ಶಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next