Advertisement

Farmer: ಸಿಹಿ ಕುಂಬಳ ಬೆಳೆದ ರೈತನಿಗೆ ಸಿಕ್ಕಿದ್ದು ಕಹಿ

02:25 PM Sep 12, 2023 | Team Udayavani |

ಮಾಗಡಿ: ಸಿಹಿ ಕುಂಬಳಕಾಯಿ ಬೆಳೆದ ಕುಂಬಳಕಾಯಿ ಗಂಗಣ್ಣ ಅವರ ಬದುಕು ಮಾತ್ರ ಕಹಿಯಾಗಿದೆ. ಮಾಗಡಿ ತಾಲೂಕಿನ ಹಂಚಿಕುಪ್ಪೆ ಗ್ರಾಪಂ ವ್ಯಾಪ್ತಿ ಗುಡ್ಡಹಳ್ಳಿಯ ಪ್ರಗತಿಪರ ಕುಂಳಕಾಯಿ ಗಂಗಣ್ಣ ಬರಗಾಲದಲ್ಲಿಯೂ ಭರ್ಜರಿಯಾಗಿ ಸಿಹಿ ಕುಂಬಳಕಾಯಿ ಬೆಳೆದಿದ್ದಾರೆ.

Advertisement

ಆದರೆ, ಬೆಲೆ ಕುಸಿತದಿಂದ ಸಂಕಷ್ಟ ಎದುರಾಗಿದೆ. ತಲಾ ಕುಂಬಳಕಾಯಿ 20 ರಿಂದ 25 ಕೆ.ಜಿ ತೂಗುವಷ್ಟರ ಮಟ್ಟಿಗೆ ಗುಣಮಟ್ಟದ ಬೆಳೆ ಬಂದಿದೆ. ಮಳೆ ಬಿದ್ದಿದ್ದರೆ ಕನಿಷ್ಠ 40 ರಿಂದ 45 ಕೆ.ಜಿ.ತೂಗುವಷ್ಟರ ಮಟ್ಟಿಗೆ ಬೆಳೆ ಸಿಗುತ್ತಿತ್ತು. ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ನೀರಿನಿಂದಲೇ ಭರ್ಜರಿ ಕುಂಬಳಕಾಯಿ ಬೆಳೆದಿದ್ದಾರೆ. ಕಾಡಂಚಿನಲ್ಲಿರುವುದರಿಂದ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಗಲು ರಾತ್ರಿ ಜಮೀನಲ್ಲಿಯೇ ಕಾದು ಬೆಳೆಯನ್ನು ರಕ್ಷಿಸಿಕೊಂಡಿದ್ದರು. ಕೆಲವೊಂದು ವೇಳೆ ಕಾಡಾನೆ ಕುಂಬಳಕಾಯಿಯನ್ನು ತಿಂದು, ತುಳಿದು ನಷ್ಟವನ್ನೂ ಮಾಡಿತ್ತು. ಆದರೂ ಎದೆಗುಂದಲಿಲ್ಲ.

ಮಳೆಯಿಲ್ಲ, ಬರಗಾಲವಿದೆ ಕನಿಷ್ಠ ಕೆ.ಜಿ. ಕುಂಬಳಕಾಯಿಗೆ 20 ರಿಂದ 25 ರೂ. ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆಗಿದ್ದೆ ಬೇರೆ. ಬೆಲೆ ಸಿಗದೆ ತಲಾ ಕೆ.ಜಿ. ಗೆ 5 ರೂ. ಗೆ ಖರೀದಿ ಕೇಳುತ್ತಿದ್ದಾರೆ. ಸುಮಾರು 10-15 ಟನ್‌ ಕುಂಬಳಕಾಯಿ ಬೆಳೆದಿದ್ದು, ಸಾಲಬಾಧೆಯಿಂದ ವಿಧಿಯಿಲ್ಲದೆ ಈಗಾಗಲೇ 2 ಟನ್‌ ಕುಂಬಳಕಾಯಿಯನ್ನು ಕೇವಲ 5ರೂ.ಗೆ ಮಾರಾಟ ಮಾಡಿದ್ದಾಗಿ ಇಂಥ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ನೋವಿನಿಂದ ಗಂಗಣ್ಣ ನುಡಿಯುತ್ತಾರೆ ಗಂಗಣ್ಣ. ಸದ್ಯಕ್ಕೆ ಮಳೆಯಾಗುತ್ತಿರುವುದರಿಂದ ಸ್ಟೊರೇಜ್‌ ರೂಂ ಇಲ್ಲದ ಕಾರಣ ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಸಿಹಿ ಕುಂಬಳಕಾಯಿ ಬೆಳೆದ ಗಂಗಣ್ಣ ಕೈಸುಟ್ಟುಕೊಂಡು ನಷ್ಟದ ಹಾದಿ ಹಿಡಿದಿದ್ದಾರೆ. ಕೃಷಿಯಲ್ಲಿ ಸದಾ ಏನಾದರೊಂದು ಮಾಡಬೇಕೆಂಬ ತುಡಿತದಲ್ಲಿದ್ದ ಗಂಗಣ್ಣ ಅವರು ಕುಂಬಳಕಾಯಿ ಬೀಜವನ್ನು ಬಿತ್ತಿ ಕೃಷಿ ಆರಂಭಿಸಿದ್ದರು. ಇದು ಅಲ್ಪಾವಧಿ ಬೆಳೆಯಾದ್ದರಿಂದ ನೋಡಿಯೇ ಬಿಡೋಣ ಎಂದು ಕೃಷಿ ಕ್ರಮಗಳನ್ನು ಚಾಚೂ ತಪ್ಪದೆ ಮಾಡಿದ್ದರು. ಹಲವು ವರ್ಷಗಳಿಂದಲೂ ಸಿಹಿ ಮತ್ತು ಬೂದ ಕುಂಬಳಕಾಯಿ ಬೆಳೆಯುವ ಪರಿಣಿತರು ಆಗಿದ್ದಾರೆ. ಅವರ ಆಯಾಯ ಸಂದರ್ಭಕ್ಕೆ ತಕ್ಕಂತೆ ಯಾವ ಬೆಳೆ ಬೆಳೆದರೆ ಅನುಕೂಲವಾಗಬಹುದು ಎಂಬುದನ್ನು ಅರಿತು ಅದನ್ನು ಬೆಳೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂಬುದನ್ನು ಗುಡ್ಡಹಳ್ಳಿ ಗ್ರಾಮದ ಪ್ರಗತಿ ಪರ ರೈತ ಗಂಗಣ್ಣ ತೋರಿಸಿಕೊಟ್ಟಿದ್ದಾರೆ. ಅಲ್ಪಾವಧಿ ಬೆಳೆಯಾಗಿ ಬೆಳೆದು ಲಾಭ ಕಾಣುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಇವರು ಬೆಳೆದ ಕುಂಬಳ ಕಾಯಿ ಸುಮಾರು ಮೂವತ್ತರಿಂದ ನಲವತ್ತು ಕೆಜಿಯಷ್ಟು ತೂಗುವ ಮೂಲಕ ಉತ್ತಮ ಇಳುವರಿ ನೀಡುತ್ತಿದೆ.ಆದರೆ ಈ ವರ್ಷ ಇವರಿಗೆ ಇಳುವರಿಯಲ್ಲೂ ಕುಂಟಿತವಾಗಿ ನಷ್ಟ ಎದುರಾಗಿದೆ.

Advertisement

ಹಠ ಬಿಡದೆ ಕೃಷಿ: ಹಲವು ವರ್ಷಗಳ ಹಿಂದೆ ಕುಂಬಳಕಾಯಿ ಬೆಳೆ ಬೆಳೆಯುತ್ತೇನೆಂದು ಹೊರಟ ಗಂಗಣ್ಣ ಅವರ ನಿರ್ಧಾರ ಕೆಲವರಿಗೆ ಆಶ್ಚರ್ಯವಾಗಿ ಕಂಡಿತಲ್ಲದೆ, ಇದೆಲ್ಲ ಇಲ್ಲಿ ಮಾಡಲು ಸಾಧ್ಯವಾ ಎಂದು ಸುತ್ತಮುತ್ತಲಿನವರು ಇವರನ್ನು ಆಡಿಕೊಂಡಿದ್ದರು. ಹಠಬಿಡದೆ ಕುಂಬಳಕಾಯಿ ಬೆಳೆದು ಬದುಕು ಕಟ್ಟಿಕೊಂಡಿದ್ದೇನೆ ಎಂದು ಗಂಗಣ್ಣ ನೆನಪು ಮಾಡಿಕೊಳ್ಳುತ್ತಾರೆ.

ನಷ್ಟಕ್ಕೆ ಒಳಗಾಗಿರುವ ಕುಂಬಳಕಾಯಿ ಗಂಗಣ್ಣ ಅವರಿಗೆ ತೋಟಗಾರಿಕೆ ಇಲಾಖೆ ಬೆಳೆನಷ್ಟದ ಪರಿಹಾರ ಧನ ನೀಡಿ ಪ್ರೋತ್ಸಾಹಿಸಬೇಕು. ಬರಗಾಲದಲ್ಲಿಯೂ ಕಷ್ಟಪಟ್ಟು ಕುಂಬಳಕಾಯಿ ಬೆಳೆದಿದ್ದಾರೆ. ಬೆಲೆ ಸಿಗದೆ ಕಂಗಾಲಾಗಿರುವ ರೈತ ಗಂಗಣ್ಣ ಅವರಿಗೆ ಸರ್ಕಾರದ ನೆರವು ಅಗತ್ಯವಿದೆ. -ಹೊಸಪಾಳ್ಯದ ಲೋಕೇಶ್‌, ತಾಲೂಕು ರೈತ ಸಂಘದ ಅಧ್ಯಕ್ಷ  

ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next