Advertisement

Los Angeles;ಕಾಳ್ಗಿಚ್ಚು ಆರಿಸಲು ಸೂಪರ್‌ ಸ್ಕೂಪರ್‌:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!

12:26 AM Jan 14, 2025 | Team Udayavani |

ಲಾಸ್‌ ಏಂಜಲೀಸ್‌: ಕ್ಯಾಲಿಫೋರ್ನಿಯಾದಲ್ಲಿ ಹಬ್ಬಿರುವ ಕಾಳ್ಗಿಚ್ಚು ಆರಿಸಲು ಅಮೆರಿಕ ಸರಕಾರ “ಸೂಪರ್‌ ಸ್ಕೂಪರ್‌’ಗಳ ಮೊರೆ ಹೋಗಿದೆ. ಇವು ಸಾಮಾನ್ಯ ವಿಮಾನಗಳಂತಿರದೇ ಕಾಳ್ಗಿಚ್ಚು ಆರಿಸಲೆಂದೇ ಇವುಗಳನ್ನು ತಯಾರಿಸಲಾಗಿದೆ.

Advertisement

ಈ ವಿಮಾನಗಳಲ್ಲೇ ಟ್ಯಾಂಕ್‌ಗಳನ್ನು ಅಳವಡಿಸಲಾಗಿದ್ದು, ಇವು ಒಂದು ಬಾರಿಗೆ ಬರೋಬ್ಬರಿ 6,000 ಲೀ. ನೀರನ್ನು ಗಂಟೆಗೆ 350 ಕಿ.ಮೀ. ವೇಗದಲ್ಲಿ ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿವೆ. ಅಲ್ಲದೇ ಇಷ್ಟು ಪ್ರಮಾಣದ ನೀರನ್ನು ವಿಮಾನಕ್ಕೆ ತುಂಬಲು ಕೇವಲ 12 ಸೆಕೆಂಡ್‌ ಸಾಕು. ನೀರು ತುಂಬಿಸಲು ವಿಮಾನವನ್ನು ಲ್ಯಾಂಡ್‌ ಮಾಡಬೇಕಾದ ಆವಶ್ಯಕತೆಯೂ ಇಲ್ಲ. ಇದು ಜಲಮೂಲದ ಮೇಲೆ ಹಾರಾಡುತ್ತಲೇ ನೀರನ್ನು ತನ್ನೊಳಕ್ಕೆ ಸೆಳೆದುಕೊಳ್ಳುತ್ತದೆ.

ನೀರು, ಬುರುಗು ಸಿಂಪಡನೆ: ನೀರನ್ನು ತುಂಬಿಕೊಂಡ ಬಳಿಕ ಕಾಳಿYಚ್ಚು ಹಬ್ಬಿರುವ ಪ್ರದೇಶದತ್ತ ಹಾರುವ ವಿಮಾನ, ನೀರಿನೊಂದಿಗೆ ಬುರುಗನ್ನು ಬೆರೆಸಿ ಒಂದೇ ಬಾರಿಗೆ ಉರಿಯುತ್ತಿರುವ ಬೆಂಕಿಯ ಮೇಲೆ ಸುರಿಯುತ್ತದೆ. ಇಷ್ಟೊಂದು ಪ್ರಮಾಣದ ನೀರು ಒಂದೇ ಬಾರಿ ಬೀಳುವುದರಿಂದ ಬೆಂಕಿ ಸಂಪೂರ್ಣ ವಾಗಿ ನಂದಿಹೋಗುತ್ತದೆ.

ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!
ಕಾಳ್ಗಿಚ್ಚು ಮತ್ತಷ್ಟು ಭೀಕರತೆ ಸೃಷ್ಟಿಸಿದ್ದು, ಶ್ರೀಮಂತರ ನಗರದಲ್ಲಿ ಈಗ ಬೂದಿಯಷ್ಟೇ ಉಳಿದಿದೆ. ಕೋಟ್ಯಂತರ ರೂ. ಬೆಲೆಬಾಳುವ ಮನೆಗಳನ್ನು ಬೆಂಕಿಯ ಕೆನ್ನಾಲಿಗೆ ಆಹುತಿ ತೆಗೆದುಕೊಂಡಿದೆ.

ಲಾಸ್‌ ಏಂಜಲೀಸ್‌ನಲ್ಲಿ ಸಾವಿನ ಸಂಖ್ಯೆ 24ಕ್ಕೇರಿದೆ. 16 ಮಂದಿ ಕಾಣೆಯಾಗಿದ್ದು, ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ. ಮಂಗಳವಾರದಿಂದ ಕಾಳ್ಗಿಚ್ಚು ಮತ್ತಷ್ಟು ಹೆಚ್ಚುವ ಆತಂಕವನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದ್ದು, ಲಾಸ್‌ ಏಂಜಲೀಸ್‌ನಲ್ಲಿ ಪ್ರಸ್ತುತ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು 113 ಕಿ.ಮೀ.ಗೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಕಿ ಆರಿಸಲು 70 ಹೆಚ್ಚುವರಿ ಟ್ರಕ್‌ಗಳನ್ನು ನಿಯೋಜಿಸಲಾಗಿದೆ.

Advertisement

ಪವಾಡ ಸದೃಶವಾಗಿ ಉಳಿದ ವ್ಯಕ್ತಿಯ ಮನೆ
ಲಾಸ್‌ ಏಂಜಲೀಸ್‌ನಲ್ಲಿ ಬೆಂಕಿ ಹೆಚ್ಚಾಗುತ್ತಿದ್ದಂತೆ ನಾನು ನನ್ನ ಕುಟುಂಬವನ್ನಲ್ಲೇ ಕಾರಿಗೆ ಹತ್ತಿಸಿ ಕಳುಹಿಸಿದೆ. ನಮ್ಮ ಮನೆಯ ಬಳಿ ಇರುವ ತಾಳೆ ಮರಕ್ಕೆ ಬೆಂಕಿ ಹೊತ್ತಿಕೊಂಡಿದ್ದರೂ, ಯಾರೂ ಅದನ್ನು ಆರಿಸದಿದ್ದರಿಂದ ನಾನೇ ಬೆಂಕಿ ಆರಿಸಲು ಮುಂದಾದೆ. ಹೀಗಾಗಿ ನನ್ನ ಮನೆ ಬೆಂಕಿಗೆ ತುತ್ತಾಗುವುದು ತಪ್ಪಿತು. ಆದರೆ ನನ್ನ ಗ್ಯಾರೇಜ್‌ ಸಂಪೂರ್ಣವಾಗಿ ಸುಟ್ಟುಹೋಯಿತು. ಮನೆ ಪವಾಡ ಸದೃಶವಾಗಿ ಉಳಿದುಕೊಂಡಿತು ಎಂದು ದುರಂತದಲ್ಲಿ ಮನೆ ಉಳಿಸಿಕೊಂಡ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಕಣ್ಣೆದುರಿಗೆ ಅಣ್ಣನನ್ನು ಕಳೆದುಕೊಂಡೆ
ಬೆಂಕಿ ಹೆಚ್ಚುತ್ತಿದ್ದ ಕಾರಣ, ಮನೆಯಿಂದ ಹೊರಡು­ವಂತೆ ನನ್ನ ಅಣ್ಣನನ್ನು ನಾನು ಬೇಡಿಕೊಂಡೆ. ಆದರೆ ಮನೆ ತೊರೆಯಲು ವಿರೋಧಿಸಿದ ಆತ ಹೊರಡದೇ ಮಲಗಿಕೊಂಡಿದ್ದ. ನಾನು ಸಾಮಗ್ರಿಗಳನ್ನು ಕಾರಿಗೆ ತುಂಬಿ, ಮತ್ತೂಮ್ಮೆ ಅಣ್ಣನನ್ನು ಏಳಿಸುವ ಹೊತ್ತಿಗೆ, ಬೆಂಕಿಗೆ ತುತ್ತಾದ ಮನೆ ಸ್ಫೋಟಗೊಂಡಿತು. ಅಣ್ಣ ಕಣ್ಣೆದುರಿಗೆ ಸಜೀವ ದಹನವಾದ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ಮಾಲಕನ ಸೇರಿದ ನಾಯಿ: ವೀಡಿಯೋ ವೈರಲ್‌
5 ದಿನಗಳ ಕಾಲ ಕಾಳ್ಗಿಚ್ಚಿಗೆ ಸಿಲುಕಿಕೊಂಡಿದ್ದ ನಾಯಿ­ಯೊಂದು ತನ್ನ ಮಾಲಕರನ್ನು ಸೇರಿದ್ದು, ವೀಡಿಯೋ ವೈರಲ್‌ ಆಗಿದೆ. ಮನೆಯ ಗೇಟಿನ ಬಳಿ ನಿಂತು ಮಾಲಕ ನಾಯಿಯನ್ನು ಕೂಗಿದ್ದು, ನಾಯಿ ಮಾಲಕನ ಬಳಿಗೆ ಓಡಿ ಬಂದಿದೆ.

ಮನೆ ಉಳಿಸಿಕೊಳ್ಳಲು ಗಂಟೆಗೆ 1.7 ಲಕ್ಷ ವೆಚ್ಚ
ಲಾಸ್‌ ಏಂಜಲೀಸ್‌ನಲ್ಲಿ ಮನೆಗಳನ್ನು ಹೊಂದಿರುವ ಶ್ರೀಮಂತರು ಬೆಂಕಿಯಿಂದ ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಗಂಟೆಗೆ 1.7 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಖಾಸಗಿ ಅಗ್ನಿಶಾಮಕ ವಾಹನಗಳನ್ನು ಬುಕ್‌ ಮಾಡುತ್ತಿರುವ ಶ್ರೀಮಂತರು ತಮ್ಮ ಆಸ್ತಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಕಮಲಾ ಮನೆ ದರೋಡೆಗೆ ಯತ್ನ: ಇಬ್ಬರ ಬಂಧನ
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಬ್ರೆಂಟ್‌ವುಡ್‌ ಮನೆಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಕಿಗೆ ಹೆದರಿ ಜನ ಮನೆಗಳನ್ನು ತೊರೆದು ಹೋಗಿರುವುದರಿಂದ, ದರೋಡೆಕೋರರ ಸಂಖ್ಯೆ ಈ ಪ್ರದೇಶದಲ್ಲಿ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.