ಬೆಂಗಳೂರು: ಕೇಂದ್ರದ ಹಿಟ್ ಆ್ಯಂಡ್ ರನ್ ಕಾನೂನಿಗೆ ಸಂಬಂಧಿಸಿದ ಪ್ರಸ್ತಾವಿತ ಹೊಸ ನಿಬಂಧನೆ ಗಳು ಹಾಗೂ ರಾಜ್ಯದಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆಯಿಂದ ಆಗುತ್ತಿರುವ ಕಿರುಕುಳದ ವಿರುದ್ಧ ಫೆಡರೇಶನ್ ಆಫ್ ಕರ್ನಾಟಕ ಲಾರಿ ಆನರ್ ಅಸೋಸಿಯೇಶನ್ ಜ. 17ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಫೆಡರೇಷನ್ ಆಫ್ ಕರ್ನಾಟಕ ಲಾರಿ ಆನರ್ ಅಸೋಸಿಯೇಶನ್ ಗೌರವಾಧ್ಯಕ್ಷ ಬಿ.ಚೆನ್ನಾ ರೆಡ್ಡಿ ಮಾತನಾಡಿ, ಭಾರತೀಯ ನ್ಯಾಯ ಸಂಹಿತಾ (2ನೇ) 2023ರ ಅಡಿಯಲ್ಲಿ ನಿರ್ಲಕ್ಷÂದ ಚಾಲನೆಯಿಂದ ಸಂಭವಿಸುವ ಮರಣಾಂತಿಕ ರಸ್ತೆ ಅಪಘಾತಗಳಲ್ಲಿ ಭಾಗವಹಿಸುವ ಲಾರಿ ಚಾಲಕರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ಅಪಘಾತದ ಬಳಿಕ ಚಾಲಕರು ಸ್ಥಳದಿಂದ ಪಲಾಯನ ಮಾಡಿದರೆ 7 ಲಕ್ಷ ರೂ. ವರೆಗೆ ದಂಡ ವಿಧಿಸಿ ಶಿಕ್ಷೆ ನೀಡುವ ಕುರಿತು ಉಲ್ಲೇಖೀಸಲಾಗಿದೆ. ಈ ಹೊಸ ಕಾನೂನು ಜಾರಿಯಾದರೆ ಟ್ರಕ್ ಡ್ರೈವರ್ ವೃತ್ತಿಗೆ ಹಿನ್ನಡೆಯಾಗಲಿದೆ ಎಂದರು.
ರಾಜ್ಯದಲ್ಲಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಕಿರುಕುಳದ ವಿರುದ್ಧವೂ ಮುಷ್ಕರ ನಡೆಸುತ್ತಿ ದ್ದೇವೆ. ರಾಜ್ಯದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಲಾರಿ ಆನರ್ ಅಸೋಸಿಯೇಶನ್ ವ್ಯಾಪ್ತಿಯಲ್ಲಿ 6ರಿಂದ 7 ಲಕ್ಷ ಲಾರಿ ಮಾಲಕರು ನೋಂದಣಿಯಾಗಿದ್ದಾರೆ. ಅವರಲ್ಲಿ 15 ಲಕ್ಷ ಟ್ರಕ್ ಚಾಲಕರಿದ್ದಾರೆ. ಅವರೆಲ್ಲರೂ ಅನಿರ್ದಿ ಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಹಾಲು, ನೀರು ಹಾಗೂ ಪೆಟ್ರೋಲ್ ಸರಬರಾಜಿಗೆ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ರಾಜ್ಯ ಸರಕಾರದಿಂದಾಗುತ್ತಿರುವ ತೊಂದರೆ ಹಾಗೂ ಹಿಟ್ ಆ್ಯಂಡ್ ರನ್ ಕಾನೂನಿಗೆ ಸಂಬಂಧಿಸಿದ ಪ್ರಸ್ತಾವಿತ ಹೊಸ ನಿಬಂಧನೆಗಳಲ್ಲಿನ ನ್ಯೂನತೆ ಸರಿಪಡಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಯಲಿದೆ ಎಂದರು.
ಬೇಡಿಕೆ ಏನು?
ಗಡಿ ಭಾಗದ ಸಾರಿಗೆ ಇಲಾಖೆ ಚೆಕ್‌ಪೋಸ್ಟ್ ತೆರವು.
ಹೆಚ್ಚುವರಿ ಪ್ರೊಜೆಕ್ಷನ್ ದಂಡ ಇಳಿಕೆ
ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಎಫ್ಸಿ ಮತ್ತು ಪರ್ಮಿಟ್ ನವೀಕರಣಕ್ಕೆ ಅನುಮತಿ.
ಅಪಘಾತದ ವೇಳೆ ಪೊಲೀಸರು ಚಾಲನಾ ಪತ್ರ ವಶಪಡಿಸಿಕೊಳ್ಳಬಾರದು.
ಹೊರರಾಜ್ಯ ವಾಹನಗಳ ಅಪಘಾತವಾದಾಗ ಬಿಡುಗಡೆಗೆ ಸ್ಥಳೀಯ ವ್ಯಕ್ತಿಗಳ ಭದ್ರತೆ ಹಾಗೂ ಜಾಮೀನು ಕೇಳಬಾರದು.