Advertisement

5ನೇ ದಿನಕ್ಕೆ ಲಾರಿ ಮುಷ್ಕರ: ಸರಕು ಪೂರೈಕೆ ವ್ಯತ್ಯಯ

07:30 AM Jul 24, 2018 | Team Udayavani |

ಬೆಂಗಳೂರು: ಸರಕು ಸಾಗಣೆ ವಾಹನಗಳ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು ದಿನ ಕಳೆದಂತೆ ಮುಷ್ಕರ ತೀವ್ರ ಸ್ವರೂಪ ಪಡೆಯುತ್ತಿದ್ದು, ಅಗತ್ಯ ವಸ್ತು ಸೇರಿ ಸರಕು ಮತ್ತು ಸೇವೆ ಪೂರೈಕೆಯಲ್ಲಿ ಕ್ರಮೇಣ ವ್ಯತ್ಯಯವಾಗಲಾರಂಭಿಸಿದೆ.

Advertisement

ರಾಜಧಾನಿ ಬೆಂಗಳೂರು ಸೇರಿ ಇತರೆಡೆ ಆಹಾರ ಧಾನ್ಯ, ಬೇಳೆಕಾಳುಗಳ ಹಳೆಯ ದಾಸ್ತಾನು ಬಹುತೇಕ ಮಾರಾಟವಾಗಿದ್ದು, ಹೊಸ ದಾಸ್ತಾನು ಪೂರೈಕೆಯಾಗದಿದ್ದರೆ ಅಭಾವ ತಲೆದೋರುವ ಆತಂಕ ಮೂಡಿದೆ. ಇನ್ನೊಂದೆಡೆ ಸಣ್ಣ ಮತ್ತು ಭಾರೀ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥ ಪೂರೈಕೆಯಲ್ಲೂ ವ್ಯತ್ಯಯವಾಗಿದ್ದು, ಉತ್ಪಾದನೆ ಇಳಿಕೆಯಾಗುತ್ತಿರುವುದು ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸರಕು ಸಾಗಣೆಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕೆಂದು ಎಫ್ಕೆಸಿಸಿಐ ಕೇಂದ್ರ ಸರ್ಕಾರವನ್ನು ಕೋರಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದಿಂದ ಈವರೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ನಿರ್ಧರಿಸಿದೆ. ಈ ನಡುವೆ ಸರಕು ಹೊತ್ತು ಸಾಗುವ ವಾಹನಗಳನ್ನು ಅಲ್ಲಲ್ಲಿ ತಡೆಯುವ ಕಾರ್ಯ ಆರಂಭವಾಗಿದೆ. ಪ್ರವಾಸಿ ವಾಹನ, ಮ್ಯಾಕ್ಸಿಕ್ಯಾಬ್‌ ಮಾಲೀಕರು ಸಹ ವಾಹನ ಸಂಚಾರ ಸ್ಥಗಿತಗೊಳಿಸಿ ಹೋರಾಟದ ತೀವ್ರತೆ ಹೆಚ್ಚಿಸಲು ಚಿಂತಿಸಿದ್ದಾರೆ.  ಸೋಮವಾರದಿಂದ ಹಲವು ಸರಕುಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಉದ್ಯಮಗಳು, ವ್ಯಾಪಾರ- ವಹಿವಾಟುದಾರರು ಮಾತ್ರವಲ್ಲದೇ ಸಾರ್ವಜನಿಕರಿಗೂ ಮುಷ್ಕರದ ಬಿಸಿ ತಟ್ಟಲಾರಂಭಿಸಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next