ಲಂಡನ್ : ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದ ಹೊರತಾಗಿಯೂ ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನ ಭಾರತ ತನ್ನ ಹೋರಾಟವನ್ನು ಜಾರಿಯಲ್ಲಿರಿಸಿದೆ. ಚಹಾ ವಿರಾಮದ ವೇಳೆ 3 ವಿಕೆಟಿಗೆ 105 ರನ್ ಮಾಡಿದ್ದು, 78 ರನ್ನುಗಳ ಮುನ್ನಡೆಯಲ್ಲಿದೆ.
55ಕ್ಕೆ 3 ವಿಕೆಟ್ ಉರುಳಿದ ಬಳಿಕ ಚೇತೇಶ್ವರ್ ಪೂಜಾರ (148 ಎಸೆತಗಳಿಂದ 29) ಮತ್ತು ಅಜಿಂಕ್ಯ ರಹಾನೆ (74 ಎಸೆತಗಳಿಂದ 24) ತಂಡದ ನೆರವಿಗೆ ನಿಂತಿದ್ದಾರೆ.
ಭಾರತದ 364 ರನ್ನುಗಳ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಜವಾಬಾಗಿ ಇಂಗ್ಲೆಂಡ್ 391 ರನ್ ಗಳಿಸಿತ್ತು. ಇದರಲ್ಲಿ ನಾಯಕ ಜೋ ರೂಟ್ ಪಾಲೇ ಅಜೇಯ 180 ರನ್ (321 ಎಸೆತ, 18 ಬೌಂಡರಿ). ಮೊಹಮ್ಮದ್ ಸಿರಾಜ್ 94ಕ್ಕೆ 4, ಇಶಾಂತ್ ಶರ್ಮ 69ಕ್ಕೆ 3, ಮೊಹಮ್ಮದ್ ಶಮಿ 95ಕ್ಕೆ 2 ವಿಕೆಟ್ ಉರುಳಿಸಿದರು.
ಆತಿಥೇಯರಿಗೆ ಲಭಿಸಿದ್ದು 27 ರನ್ ಮುನ್ನಡೆ ಮಾತ್ರ. ಆದರೆ ರವಿವಾರದ ಆರಂಭ ಭಾರತದ ಪಾಲಿಗೆ ಅತ್ಯಂತ ಆಘಾತಕಾರಿಯಾಗಿ ಪರಿಣಮಿಸಿತು. ಮಾರ್ಕ್ ವುಡ್ ಆರಂಭಿಕರಿಬ್ಬರನ್ನೂ ಬಹಳ ಅಗ್ಗಕ್ಕೆ ಉರುಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಅಮೋಘ ಶತಕ ಬಾರಿಸಿದ್ದ ಕೆ.ಎಲ್. ರಾಹುಲ್ ಕೇವಲ 5 ರನ್ ಮಾಡಿದರೆ, ರೋಹಿತ್ ಶರ್ಮ ಅವಸರದ ಹೊಡೆತಕ್ಕೆ ಮುಂದಾಗಿ 21 ರನ್ನಿಗೆ ಆಟ ಮುಗಿಸಿದರು. ವುಡ್ ಎಸೆತದಲ್ಲಿ ಸಿಕ್ಸರ್ ಎತ್ತಿದ ರೋಹಿತ್, ಅದೇ ಓವರ್‌ನಲ್ಲಿ ಇನ್ನೊಂದು ಬಿಗ್ ಶಾಟ್ ಬಾರಿಸಲು ಹೋಗಿ ಬೌಂಡರಿ ಲೈನ್‌ನಲ್ಲಿದ್ದ ಮೊಯಿನ್ ಅಲಿಗೆ ಕ್ಯಾಚಿತ್ತರು.
ವಿರಾಟ್ ಕೊಹ್ಲಿ ಮತ್ತೂಮ್ಮೆ ನಿರಾಸೆ ಮೂಡಿಸಿದರು. ಭಾರತೀಯ ಕಪ್ತಾನನ ಆಟವನ್ನು ಸ್ಯಾಮ್ ಕರನ್ 20 ರನ್ನಿಗೆ ಕೊನೆಗೊಳಿಸಿದರು.
ಲಂಚ್ ವೇಳೆ 56 ರನ್ನಿಗೆ ಭಾರತದ 3 ವಿಕೆಟ್ ಕೆಡವಿದ ಇಂಗ್ಲೆಂಡ್ ಬೌಲರ್ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಆದರೆ ಪೂಜಾರ-ರಹಾನೆ ದ್ವಿತೀಯ ಅವಧಿಯಲ್ಲಿ ಆಂಗ್ಲರ ಬೌಲಿಂಗ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದರು. ಈ ಅವಧಿಯಲ್ಲಿ ವಿಕೆಟ್ ಕೀಳುವ ಆತಿಥೇಯರ ಪ್ರಯತ್ನ ವಿಫಲವಾಯಿತು.
ಭಾರತ ಈ ಪಂದ್ಯವನ್ನು ಉಳಿಸಿ ಕೊಳ್ಳಬೇಕಾದರೆ ಕನಿಷ್ಠ ಅಂತಿಮ ದಿನದಾಟದ ಲಂಚ್ ತನಕವಾದರೂ ಬ್ಯಾಟಿಂಗ್ ವಿಸ್ತರಿಸಬೇಕು.