Advertisement

Lord Ram: ಅಯೋಧ್ಯೆ ರಾಮ ವಿಗ್ರಹಕ್ಕೆ ರಾಜ್ಯದಿಂದ ಅಧಿಕೃತ ಬೇಡಿಕೆ

01:07 AM Jan 31, 2024 | Team Udayavani |

ಬೆಂಗಳೂರು: ಈಗ ಅಧಿಕೃತ: ಅಯೋಧ್ಯಾ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗದೆ ಉಳಿದ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶಿಲ್ಪಿ ಗಣೇಶ್‌ ಭಟ್‌ ಕೆತ್ತನೆಯ ರಾಮನ ವಿಗ್ರಹ ನೀಡುವಂತೆ ವಿಧ್ಯುಕ್ತ ಬೇಡಿಕೆ ಸಲ್ಲಿಕೆಯಾಗಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಾ ಪುರ ಮಠದ ವತಿಯಿಂದ ಕೋರಿಕೆ ಪತ್ರ ರವಾನೆಯಾಗಿದೆ. ವಿಗ್ರಹವನ್ನು ಹಸ್ತಾಂತರಿಸಲು ಒಪ್ಪಿಗೆ ನೀಡಿದರೆ ಅದನ್ನು ತಂದು ರಾಮಚಂದ್ರಾಪುರ ಮಠದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸುವುದಾಗಿಯೂ ಪತ್ರದಲ್ಲಿ ಪ್ರಸ್ತಾವಿಸಲಾಗಿದೆ.

Advertisement

ಅಯೋಧ್ಯೆಗೆ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷರಾದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಜ. 22ರಂದು ಭೇಟಿ ನೀಡಿ ಪ್ರಾಣಪ್ರತಿಷ್ಠಾಪನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಠದ ಶಿಷ್ಯರೂ ಆದ ಶಿಲ್ಪಿ ಗಣೇಶ್‌ ಭಟ್‌ ಅವರು ಕಡೆದಿರುವ ರಾಮನ ವಿಗ್ರಹವನ್ನು ವೀಕ್ಷಿಸಿ ಬಂದಿದ್ದಾರೆ. ವಿಗ್ರಹದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀಗಳು, ಅದನ್ನು ಕರ್ನಾಟಕಕ್ಕೆ ತಂದು ಮಠದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ನಿತ್ಯಪೂಜೆಗೆ ಒಳಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಗೌರವಾನ್ವಿತ ಟ್ರಸ್ಟ್‌ ಇದಕ್ಕೆ ಒಪ್ಪಿಗೆ ನೀಡಿದ್ದೇ ಆದಲ್ಲಿ ವಿಗ್ರಹವನ್ನು ಅಯೋಧ್ಯೆಯಿಂದ ಕರ್ನಾಟಕಕ್ಕೆ ಸಾಗಿಸಿ ಭಕ್ತಿ ಗೌರವದಿಂದ ಪ್ರತಿಷ್ಠಾಪಿಸುತ್ತೇವೆ. ಇದಕ್ಕೆ ಸ್ವಾಮೀಜಿ ಹಾಗೂ ಆಗಮ ಶಾಸ್ತ್ರ ತಜ್ಞರಿಂದ ಸಲಹೆ, ಮಾರ್ಗದರ್ಶನ ಪಡೆಯು ತ್ತೇವೆ ಎಂದು ಜ. 29ರಂದು ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಸುಮಾರು 1,200 ವರ್ಷಗಳ ಹಿಂದೆ ಆದಿಶಂಕರರಿಂದ ಸ್ಥಾಪಿತವಾದ ಮಠಕ್ಕೆ ಭಗವಾನ್‌ ಶ್ರೀರಾಮನೇ ಪ್ರಾಣದೇವರು. ಅಗಸ್ತ್ಯ ಮುನಿಗಳಿಂದ ಪೂಜಿತವಾದ ವಿಗ್ರಹವೇ ಇಲ್ಲಿನ ಮುಖ್ಯ ದೇವರು. ಗೋಕರ್ಣ ಮಂಡಲದ ಧಾರ್ಮಿಕ ಕಲ್ಯಾಣವನ್ನು ಶ್ರೀಮಠಕ್ಕೆ ವಹಿಸುವ ವೇಳೆ ಈ ವಿಗ್ರಹವನ್ನು ಮಠದ ಮೊತ್ತಮೊದಲ ಗುರುಗಳಾದ ವಿದ್ಯಾನಂದ ಸ್ವಾಮೀಜಿಯವರಿಗೆ ಹಸ್ತಾಂತರಿಸಲಾಗಿತ್ತು. ಅಯೋಧ್ಯೆಯಲ್ಲಿ ಗರ್ಭಗುಡಿಗಾಗಿ ಕೆತ್ತನೆಯಾಗಿರುವ 3 ವಿಗ್ರಹಗಳ ಪೈಕಿ 2 ವಿಗ್ರಹಗಳನ್ನು ಕರ್ನಾಟಕದ ಶಿಲ್ಪಿಗಳೇ ರಚಿಸಿದ್ದಾರೆ. ಹೀಗೆ ಅಯೋಧ್ಯೆಗೂ ಕರ್ನಾಟಕಕ್ಕೂ ವಿಶಿಷ್ಟ ನಂಟಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಗಣೇಶ್‌ ಭಟ್‌ ಕಡೆದ ರಾಮನ ವಿಗ್ರಹವನ್ನು ನಮಗೆ ಹಸ್ತಾಂತರಿಸಿ ಎಂದು ಟ್ರಸ್ಟ್‌ನ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಕೋರಲಾಗಿದೆ.

ಅಯೋಧ್ಯೆಗೆ ರೈಲು ಫೆ. 7ರಿಂದ ಆರಂಭ
ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ತೆರಳುವ ರಾಮಭಕ್ತರಿಗಾಗಿ ಜ. 31ರ ಬುಧವಾರದಿಂದ ಆರಂಭಗೊಳ್ಳಬೇಕಿದ್ದ ಬಿಜೆಪಿಯ ರೈಲು ಸೇವೆಯು ಒಂದು ವಾರ ಮುಂದೂಡಿಕೆ ಯಾಗಿದ್ದು, ಫೆ. 7ರಿಂದ ಆರಂಭಗೊಳ್ಳಲಿದೆ. ಕರ್ನಾಟಕ ದಿಂದ ರೈಲುಗಳ ಮೂಲಕ ಸಾವಿರಾರು ಭಕ್ತರು ಒಮ್ಮೆಲೆ ತೆರಳಿದರೆ ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ದರ್ಶನಕ್ಕೆ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಜತೆಗೆ ಆರಂಭದಲ್ಲಿ 6 ರೈಲುಗಳನ್ನು ಮುಂಗಡ ಕಾಯ್ದಿರಿಸಲಾಗಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಚ್ಚುವರಿಯಾಗಿ ಎರಡು ರೈಲುಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅಭಿಯಾನದ ಸಂಯೋಜಕರಾದ ಸಿದ್ದರಾಜು ಹೇಳಿದ್ದಾರೆ.

ಫೆ. 15ರಿಂದ ಮಂದಿರದ 2ನೇ ಹಂತದ ಕಾಮಗಾರಿ
ರಾಮಮಂದಿರದ 2ನೇ ಹಂತದ ಕಾಮಗಾರಿ ಫೆ. 15 ರಿಂದ ಆರಂಭವಾಗಲಿದೆ. ಇದಕ್ಕಾಗಿ ದೇಗುಲದ ಪಶ್ಚಿಮ ಭಾಗದಲ್ಲಿ 2 ಟವರ್‌ ಕ್ರೇನ್‌ಗಳನ್ನು ಅಳವಡಿಸಲಾಗಿದ್ದು, ಫೆ. 15ರೊಳಗೆ ಕೆಲಸಕ್ಕೆ ಬರುವಂತೆ ಕಾರ್ಮಿಕರಿಗೆ ಸೂಚಿಸಲಾಗಿದೆ. ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಜ. 15ರಿಂದ ಎಲ್‌ ಆ್ಯಂಡ್‌ ಟಿ ಕಂಪೆನಿಯು ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಮುಂದಿನ ತಿಂಗಳಿಂದ ಕಾಮಗಾರಿ ಮುಂದುವರಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next