Advertisement

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

08:29 PM Jun 05, 2020 | Hari Prasad |

ತಿರುಪತಿ: ಲಾಕ್‌ಡೌನ್‌ನಿಂದಾಗಿ ಬಂದ್‌ ಆಗಿದ್ದ ವಿಶ್ವಪ್ರಸಿದ್ಧ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನ ಶನಿವಾರದಿಂದ ತೆರೆದುಕೊಳ್ಳಲಿದೆ.

Advertisement

ಬೆಳಗ್ಗೆ 6.30ರಿಂದ ರಾತ್ರಿ 7.30ರವರೆಗೆ 3 ಸಾವಿರ ಆನ್‌ಲೈನ್‌ ಟಿಕೆಟ್‌ಗಳೂ ಸೇರಿದಂತೆ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದೆ.

ಒಂದು ಗಂಟೆಗೆ 500 ಭಕ್ತರ ದರ್ಶನಕ್ಕೆ ದೇಗುಲದೊಳಕ್ಕೆ ಪ್ರವೇಶ ಮಾಡಿ ಕೊಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ (ಟಿಟಿಡಿ) ಮುಖ್ಯಸ್ಥ ವೈ.ವಿ. ಸುಬ್ಟಾ ರೆಡ್ಡಿ ಹೇಳಿದ್ದಾರೆ.

ದೇಗುಲದೊಳಗೆ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.

ನಿತ್ಯ 3 ಸಾವಿರ ಮಂದಿ ಭಕ್ತರು ಬೆಟ್ಟ ಹತ್ತಲು ಅನುವು ಮಾಡಿಕೊಡಲಾಗುವುದು. ಬೆಟ್ಟವೇರಿದ ಬಳಿಕ ಅವರಿಗೆ ಜ್ವರ ತಪಾಸಣೆ ಇತ್ಯಾದಿ ನಡೆಯಲಿವೆ. ದೇಗುಲ ಪ್ರವೇಶಿಸುವ ಭಕ್ತರನ್ನು ಥರ್ಮಲ್‌ ಸ್ಕ್ಯಾನರ್‌ ಮೂಲಕ ಪರೀಕ್ಷಿಸಲಾಗುತ್ತದೆ.

Advertisement

ದೇಗುಲಕ್ಕೆ ಆಗಮಿಸುವ ಭಕ್ತರ ಗಂಟಲು ದ್ರವವನ್ನು ಸ್ವಯಂಪ್ರೇರಿತವಾಗಿ ಯಾದೃಚ್ಛಿಕ ವಿಧಾನದಲ್ಲಿ ಪಡೆದು ಕೋವಿಡ್‌ ಪರೀಕ್ಷೆಗೆ ಕಳುಹಿಸಲು ಉದ್ದೇಶಿಸಲಾಗಿದೆ.

ಶನಿವಾರದಂದು ದೇಗುಲ ತೆರೆದರೂ ಆರಂಭದಲ್ಲಿ ಟಿಟಿಡಿ ಸಿಬಂದಿಗೆ ಮಾತ್ರ ದೇಗುಲಕ್ಕೆ ಪ್ರವೇಶವಿರಲಿದೆ. ಈ ವೇಳೆ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಪರಿಶೀಲನೆ ನಡೆಯಲಿದೆ. ಜೂ.8 ಮತ್ತು 9ರಂದು ತಿರುಪತಿ ನಿವಾಸಿಗಳಿಗೆ ಮಾತ್ರ ಅವಕಾಶ ಇರಲಿದೆ. ಜೂ.11ರ ಬಳಿಕ ರಾಜ್ಯದ ಭಕ್ತರಿಗೆ ಅವಕಾಶವಿರಲಿದೆ.

ಜೂ.8ರಿಂದ 10ರವರೆಗೆ ಜನಸಂದಣಿ ಸೇರುವಾಗ ಹೇಗಿರುತ್ತದೆ ಎಂಬುದನ್ನು ದೇಗುಲ ಆಡಳಿತ ಗಮನಿಸಲಿದೆ. ಇದರೊಂದಿಗೆ ಹುಂಡಿ ಸಲ್ಲಿಕೆ, ಲಡ್ಡು ಪ್ರಸಾದ ವಿತರಣೆಯಲ್ಲಿನ ವ್ಯವಸ್ಥೆಯ ಬಗ್ಗೆಯೂ ಗಮನವಿಡಲಾಗುವುದು ಎಂದು ದೇಗುಲ ಆಡಳಿತ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next