ಹಾವೇರಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಲೂಟಿಕೋರರ ಸರ್ಕಾರ. ಪ್ರತಿದಿನ ಒಂದಿಲ್ಲೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಇಡೀ ದೇಶದಲ್ಲಿ ತಲೆ ತಗ್ಗಿಸುವ ಕೆಲಸ ರಾಜ್ಯದಲ್ಲಿ ನಡೆಯುತ್ತಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಪ ಸದಸ್ಯ ಸಲೀಂ ಅಹ್ಮದ್ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಭ್ರಷ್ಟಾಚಾರದಿಂದಲೇ ಉದಯಿಸಿರುವ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರದ ಅವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಆದರೆ, ನಿತ್ಯವೂ ಭ್ರಷ್ಟಾಚಾರ ಅಭಿವೃದ್ಧಿ ಆಗುತ್ತಿದೆ ಎಂದು ಹರಿಹಾಯ್ದರು.
ಈ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ಬೆಲೆ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿ ಹುದ್ದೆ, ಮಂತ್ರಿ ಸ್ಥಾನ, ಅಧಿಕಾರಿಗಳ ವರ್ಗಾವಣೆ, ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಹಣ ಗೊತ್ತುಪಡಿಸಲಾಗಿದೆ. ಇತಿಹಾಸದಲ್ಲಿ ಇಂತಹ ಘಟನೆ ಸಂಭವಿಸಿಲ್ಲ, ಮುಖ್ಯಮಂತ್ರಿಯಾಗಬೇಕಾದರೆ 2500 ಸಾವಿರ ಕೋಟಿ ಕೊಡಬೇಕಾಗುತ್ತೆ. ಮಂತ್ರಿ ಸ್ಥಾನಕ್ಕೂ ಹಣ ಕೊಡಬೇಕು ಎಂಬ ಮಾಹಿತಿಯನ್ನೂ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ ಕೊಟ್ಟಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಸರ್ಕಾರ ಕಳೆದುಕೊಂಡಿದೆ ಎಂದು ದೂರಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ. ಹೀಗಾಗಿ ರಾಜ್ಯದ ಜನತೆ ಭ್ರಮನಿರಶನ ಆಗಿದ್ದಾರೆ. ಏಕೆ ನಾವು ಬಿಜೆಪಿಗೆ ವೋಟ್ ಹಾಕಬೇಕು ಎಂಬ ಆಲೋಚನೆಯಲ್ಲಿ ಜನತೆ ಇದ್ದಾರೆ. ಯಾವ ಘನ ಕಾರ್ಯ ಮಾಡಿದ್ದಾರೆ ಎಂಬುದಕ್ಕೆ ಜನ ಇವರಿಗೆ ಮತ ಹಾಕಬೇಕು, ಯಾವ ಪುರುಷಾರ್ಥಕ್ಕೆ ಜನತೆ ಇವರನ್ನು ಬೆಂಬಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಲೆ ಏರಿಕೆ ಕುರಿತು ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸುತ್ತೇವೆ. ರಾಜ್ಯದ 224ಕ್ಷೇತ್ರಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಏಪ್ರಿಲ್ ಅಂತ್ಯಕ್ಕೆ ರಾಜ್ಯದಲ್ಲಿ 76 ಲಕ್ಷ ಜನ ಡಿಜಿಟಲ್ ಸದಸ್ಯತ್ವ ಪಡೆದಿದ್ದು, ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ 1.60 ಲಕ್ಷ ಜನ ಸದಸ್ಯತ್ವ ಪಡೆದಿದ್ದು, ಈ ಎಲ್ಲ ಸದಸ್ಯರಿಗೆ ಮುಂಬರುವ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸೇರಿ ಪಕ್ಷದ ಚುನಾವಣೆಗಳಿಗೆ ಮತ ಚಲಾಯಿಸುವ ಹಕ್ಕು ಸಿಗಲಿದೆ. ಮೇ 28ರೊಳಗೆ ಜಿಲ್ಲೆಯ ಎಲ್ಲ 1470 ಬೂತ್‌ಗಳನ್ನು ರಚಿಸಲು ನಿರ್ದೇಶನ ನೀಡಲಾಗಿದೆ. ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ. ಮೊದಲು ಬೂತ್ ಸಮಿತಿ, ಬ್ಲಾಕ್ ಸಮಿತಿ, ಜಿಲ್ಲಾ ಅಧ್ಯಕ್ಷರು ಹಾಗೂ ಕೆಪಿಸಿಸಿಗೆ ಚುನಾವಣೆ ನಡೆಯಲಿದೆ. ಬೂತ್ ಕಮಿಟಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಪಕ್ಷದ ಸಿದ್ಧಾಂತ, ವಿಚಾರಧಾರೆಗಳು ಹಾಗೂ ಬಿಜೆಪಿ ಸರ್ಕಾರದ ವೈಪಲ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ಕೊಟ್ಟಿದ್ದೇವೆ. ಇಡೀ ಪಕ್ಷ ಸಂಘಟನೆ ಹಾಗೂ ಹೋರಾಟದೊಂದಿಗೆ ಪಕ್ಷ ಸದೃಢಗೊಳಿಸುತ್ತೇವೆ ಎಂದರು.
ಭ್ರಷ್ಟಾಚಾರ-ಕಮೀಷನ್ ವ್ಯವಹಾರ ನಿಲ್ಲಿಸಿ: ಅರ್ಕಾವತಿ ಪ್ರಕರಣ ಕೈಗೆತ್ತಿಕೊಂಡರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಳೀನ್‌ಕುಮಾರ್ ಕಟೀಲ ಅವರೇ ನೀವು ಹೆದರಿಸುವ ತಂತ್ರಗಾರಿಕೆ ಮಾಡಲು ಹೋಗಬೇಡಿ. ಯಾವುದೇ ತನಿಖೆಗೂ ನಾವು ಸಿದ್ಧರಾಗಿದ್ದೇವೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಕೈಬಿಡಿ. ನಿಮ್ಮ ಯೋಗ್ಯತೆ ನೋಡಿದ್ದೇವೆ. ಮೊದಲು ನಿಮ್ಮ ಭ್ರಷ್ಟಾಚಾರ, ಶೇ. 40 ಕಮೀಷನ್ ವ್ಯವಹಾರ ನಿಲ್ಲಿಸಿ ಎಂದು ಹರಿಹಾಯ್ದರು. ಈಗಾಗಲೇ ನಿಮಗೆ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನತೆ ನಿಮಗೆ ಉತ್ತರ ಕೊಟ್ಟಿದ್ದಾರೆ.
ಅಭಿವೃದ್ಧಿ ಮಾಡಲು ಜನ ಅಧಿಕಾರ ಕೊಟ್ಟರೆ ನೀವು ಭ್ರಷ್ಟಾಚಾರ ಅಭಿವೃದ್ಧಿ ಮಾಡುತ್ತಿದ್ದೀರಿ. ನಿತ್ಯವೂ ಸಿಎಂ ಬದಲಾವಣೆ ಎಂಬ ಸುದ್ದಿ ಹರಡುತ್ತೆ. ಮಂತ್ರಿ ಮಂಡಲ ವಿಸ್ತರಣೆ ಆಗುತ್ತೆ ಎಂಬೆಲ್ಲ ಮಾಹಿತಿ ಹರಹಾಡುತ್ತೆ ಹೀಗಾದ್ರೆ ಹೇಗೆ. ಆಡಳಿತದಲ್ಲಿ ಹಿಡಿತ ಸಾಧಿಸಲು ಸಾಧ್ಯ. ಕಟೀಲ್ ಅವರೇ ಬಿಜೆಪಿಯಲ್ಲಿ ಯಾರೂ ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಪ್ರಮುಖರಾದ ಎಸ್.ಆರ್. ಪಾಟೀಲ, ಅಜ್ಜಂಫಿರ್ ಖಾದ್ರಿ, ಪ್ರಕಾಶಗೌಡ ಪಾಟೀಲ, ಎಸ್.ಎಫ್.ಎನ್. ಗಾಜೀಗೌಡ, ಶ್ರೀನಿವಾಸ ಹಳ್ಳಳ್ಳಿ, ಎಂ.ಎಂ. ಮೈದೂರು ಇತರರು ಇದ್ದರು.