ಹುಬ್ಬಳ್ಳಿ: ಸಾರ್ವಜನಿಕ ಹಣ ಲೂಟಿ ಹೊಡೆಯುವ ಬಿಜೆಪಿಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬಾರದು. ಈ ಕ್ಷೇತ್ರದ ಅಪರೂಪದ ಜನಸೇವಕ ಸಿ.ಎಸ್. ಶಿವಳ್ಳಿ ಅವರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಕ್ಷೇತ್ರದ ಮತದಾರರು ಮೈತ್ರಿ ಅಭ್ಯರ್ಥಿ ಕುಸುಮಾವತಿ ಅವರಿಗೆ ಮತ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಕುಂದಗೋಳದ ಗಾಂಧಿ ವೃತ್ತದಲ್ಲಿ ಶುಕ್ರವಾರ ನಡೆದ ಮೈತ್ರಿ ಅಭ್ಯರ್ಥಿ ಪರ ಪ್ರಚಾರಾರ್ಥ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಿಸ್ಟರ್ ಬಿ.ಎಸ್.ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ರಾಜ್ಯವನ್ನು ಲೂಟಿ ಹೊಡೆದು ಜೈಲಿಗೆ ಹೋಗಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಮತ್ತೂಮ್ಮೆ ವಾಮಮಾರ್ಗದ ಮೂಲಕ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ಇದಕ್ಕೆ ಕುಂದಗೋಳದ ಜನತೆ ಅವಕಾಶ ನೀಡಬಾರದು. ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಗೆದ್ದಾಗ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರಲಿಲ್ಲ. ಇಂತಹ ವ್ಯಕ್ತಿಯನ್ನು ತಿರಸ್ಕರಿಸಬೇಕೆಂದರು.
ಮೋದಿಗೆ ತಕ್ಕ ಪಾಠ: ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಅಚ್ಛೇ ದಿನ್ ಆಯೇಗಾ ಎಂದಿದ್ದ ನರೇಂದ್ರ ಮೋದಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ಅಡುಗೆ ಅನಿಲ ನೀಡುವ ಮೂಲಕ ಸೀಮೆಎಣ್ಣೆ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಗ್ಯಾಸ್ ಬೆಲೆ 900 ರೂ.ಗೆ ಹೆಚ್ಚಳವಾಗಿದೆ. ಇದರಂತೆ ಎಲ್ಲ ವಸ್ತುಗಳು ಬೆಲೆ ಹೆಚ್ಚಾಗಿದ್ದು, ಬಿಜೆಪಿ ಬಡವರ ವಿರೋಧಿ ಪಕ್ಷ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಧಿಕಾರಕ್ಕೆ ಬರುವಾಗ ನೀಡಿದ್ದ ಯಾವುದೇ ಭರವಸೆ ಈಡೇರಿಸದೆ ಕೇಂದ್ರ ಸರಕಾರ ಜನವಿರೋಧಿ ಹಾಗೂ ಸುಳ್ಳಿನ ಸರಕಾರವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ಶಿವಳ್ಳಿ ಅವರು ಅರ್ಧಕ್ಕೆ ಬಿಟ್ಟ ಯೋಜನೆಗಳು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕುಸುಮಾವತಿ ಅವರಿಗೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಬೇಕು. ಸುಳ್ಳಿನ ಸರದಾರರ ಪಕ್ಷವಾದ ಬಿಜೆಪಿಗೆ ಈ ಕ್ಷೇತ್ರದ ಜನರು ಉತ್ತಮ ಸಂದೇಶ ನೀಡಬೇಕು ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಮಾತನಾಡಿ, ಕಾಂಗ್ರೆಸ್ ತಾನು ಮಾಡಿದ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೆ. ಆದರೆ ಬಿಜೆಪಿ ಸೈನಿಕರು, ಧರ್ಮ, ಜಾತಿ ಹಾಗೂ ಭಾವನಾತ್ಮಕ ವಿಚಾರಗಳ ಮೇಲೆ ಮತಯಾಚನೆ ಮಾಡುತ್ತಿರುವುದು ನಾಚಿಕೆಗೇಡು ಎಂದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಗಾಂಧಿಯವರನ್ನು ಕಗ್ಗೊಲೆ ಮಾಡಿದ ನಾಥುರಾಮ್ ಗೋಡ್ಸೆಯನ್ನು ದೇಶಪ್ರೇಮಿ ಎನ್ನುವ ಮೂಲಕ ಬಿಜೆಪಿಯವರು ತಮ್ಮ ಸಂಸ್ಕೃತಿ ಎಂತಹದ್ದು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಸಂಸದ ನಳಿನಕುಮಾರ ಕಟೀಲು ಹೇಳಿಕೆಗೆ ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತಾಗಿದೆ. ದೇಶದ್ರೋಹಿಗಳನ್ನು ಹೊಗಳುವ ಬಿಜೆಪಿಗೆ ಜನರೇ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.
ಶಾಸಕ ಬಿ.ಸಿ. ಪಾಟೀಲ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಮುಖಂಡರಾದ ಡಿ.ಕೆ. ಸುರೇಶ, ಡಾ| ಪುಷ್ಪಾ ಅಮರನಾಥ, ಮುನಿರತ್ನ, ವಿ.ಎಸ್. ಉಗ್ರಪ್ಪ, ಹಜರತ್ ಅಲಿ ಜೋಡಮನಿ, ಶಾಕೀರ ಸನದಿ ಇನ್ನಿತರರಿದ್ದರು.