ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8ರಂದು ಕೈಗೊಂಡಿದ್ದ ನೋಟು ಅಮಾನ್ಯೀಕರಣವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮಂಗಳವಾರ ಬಲವಾಗಿ ಸಮರ್ಥಿಸಿಕೊಂಡಿದ್ದು, ನೋಟು ನಿಷೇಧದಿಂದ ಏಕಕಾಲಕ್ಕೆ ಎಲ್ಲಾ ಭ್ರಷ್ಟಾಚಾರಗಳನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಆದರೆ ಇದನ್ನು ಸಾಧಿಸಲು ಆರ್ಥಿಕ ನಿರ್ಧಾರಗಳಿಗೆ ಹೊಸ ದಿಕ್ಕನ್ನು ಕಲ್ಪಿಸುವ ಮೂಲಕ ಸಾಧ್ಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇವಲ ಒಂದು ಪರಿವಾರದ ಸೇವೆಗಷ್ಟೇ ಸಿಮೀತವಾಗಿದೆ. ಆದರೆ ನಮ್ಮ ಪ್ರಮುಖ ಉದ್ದೇಶ ದೇಶ ಸೇವೆ ಎಂದು ಹೇಳಿದರು. ಭಾರತೀಯ ಜನತಾ ಪಕ್ಷ ನಂಬುವಂತೆ ಒಂದು ವೇಳೆ ಭಾರತ ಅಭಿವೃದ್ಧಿ ದೇಶವಾಗಬೇಕಾದರೆ ನಗದು ರಹಿತ ವಹಿವಾಟಿಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ, ಜತೆಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.
ನೋಟು ನಿಷೇಧದ ಒಂದು ವರ್ಷದ ಅನುಭವದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ನಿಲುವು ಕೂಡಾ ದೃಢವಾಗಿದೆ. ಅಲ್ಲದೇ ನಾವು ಅದನ್ನು ಮುಂದುರಿಸಿಕೊಂಡು ಹೋಗುವುದಾಗಿ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷ ಕಪ್ಪು ಹಣದ ವಿರುದ್ಧ ಯಾವತ್ತೂ ದೊಡ್ಡ ಮಟ್ಟದ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.
ನೋಟು ನಿಷೇಧದಿಂದ ಲೂಟಿ ಆಗಿಲ್ಲ, 2ಜಿ, ಕಾಮನ್ ವೆಲ್ತ್ ಗೇಮ್ಸ್ ಹಗರಣ:
ನೋಟು ನಿಷೇಧ ದೊಡ್ಡ ಲೂಟಿ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ಆದರೆ ನೋಟು ನಿಷೇಧದಿಂದ ಲೂಟಿ ಆಗಿಲ್ಲ, ಲೂಟಿ ಅಂದರೆ 2ಜಿ, ಕಾಮನ್ ವೆಲ್ತ್ ಗೇಮ್ಸ್ ಹಾಗೂ ಕಲ್ಲಿದ್ದಲು ಹಗರಣ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ. ನೋಟು ನಿಷೇಧದಿಂದ ಬ್ಯಾಂಕ್ ಗಳಿಗೆ ಹಣ ಹರಿದು ಬಂತು. ನಕಲಿ ಕಂಪನಿಗಳನ್ನು ಪತ್ತೆ ಹಚಚಲು ಸಾಧ್ಯವಾಯ್ತಿ. ಕಪ್ಪು ಹಣ ನಿಗ್ರಹಕ್ಕೆ ನೋಟು ಬ್ಯಾನ್ ನಿಂದ ಅನುಕೂಲ. ಉಗ್ರರಿಗೆ ಹರಿದು ಹೋಗುವ ಹಣಕ್ಕೆ ಬ್ರೇಕ್ ಬಿದ್ದಿದೆ, ಇದೆಲ್ಲವೂ ಸಾಧ್ಯವಾಗಿದ್ದು ನೋಟು ನಿಷೇಧದಿಂದ ಎಂದು ಹೇಳಿದರು.