ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಸಂಕಷ್ಟ ಎದುರಿಸಿರುವ ಸಂತ್ರಸ್ತರು, ಇದೀಗ ಸರ್ಕಾರ ಕೊಡುವ ಪರಿಹಾರ ಧನ ಹಾಗೂ ಕಿಟ್‌ಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಕೇಳುತ್ತಿದ್ದು, ಹೀಗಾಗಿ ಸಂಕಷ್ಟ ಅನುಭವಿಸಿದ ಸಂತ್ರಸ್ತರಿಗೆ ಮತ್ತಷ್ಟು ಸಂಕಟ ಕೊಡುವ ದುರ್ಬದ್ಧಿ ದೂರಾಗಲಿ ಎಂಬ ಮಾತು ಕೇಳಿ ಬರುತ್ತಿದೆ.
ಹೌದು, ಕೃಷ್ಣೆ, ಘಟಪ್ರಭೆ ಹಾಗೂ ಮಲಪ್ರಭೆ ನದಿಗಳ ಪ್ರವಾಹಕ್ಕೆ ಜಿಲ್ಲೆಯ 194 ಗ್ರಾಮಗಳು, ಸುಮಾರು ಒಂದು ವಾರಗಳ ಕಾಲ ನೀರಲ್ಲಿ ನಿಂತಿದ್ದವು. 39 ಸಾವಿರ ಕುಟುಂಬಗಳು, ಅಕ್ಷರಶಃ ಬೀದಿಗೆ ಬಂದಿದ್ದವು. ಇನ್ನೂ ಕೆಲ ಕುಟುಂಬಗಳು ಜಿಲ್ಲಾಡಳಿತ ಆರಂಭಿಸಿರುವ ಪರಿಹಾರ ಕೇಂದ್ರದಲ್ಲೇ ಆಶ್ರಯ ಪಡೆದಿದ್ದಾರೆ. ಸಿಮೆಂಟ್ ಇಟ್ಟಿಗೆ ನಿರ್ಮಿತ ಮನೆ ಹೊಂದಿದ ಕುಟುಂಬಗಳು ಮಾತ್ರ ಮನೆಗೆ ಮರಳಿ ಹೋಗಿದ್ದಾರೆ. ಹಳೆಯ ಮಣ್ಣಿನ ಮನೆಗಳು ನೀರಿನಲ್ಲಿ ನೆನೆದು, ಯಾವಾಗ ಬೀಳುತ್ತವೆಯೋ ಎಂಬ ಆತಂಕವಿದ್ದು, ಆ ಮನೆಗಳ ಮಾಲಿಕರು, ಮನೆ ಸೇರುವ ಧೈರ್ಯ ಮಾಡಿಲ್ಲ. ಆದರೆ, ಮೂರು ನದಿಗಳ ಪ್ರವಾಹದಿಂದ ಸಂಕಷ್ಟ ಅನುಭವಿಸಿದ ಸಂತ್ರಸ್ತರು, ಇದೀಗ ನ್ಯಾಯಬದ್ಧ ಪರಿಹಾರಧನಕ್ಕೂ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಸಂತ್ರಸ್ತರಲ್ಲದವರ ಪ್ರಭಾವ: ನೆರೆಯಿಂದ ಕಂಗಾಲಾಗಿರುವ ಕುಟುಂಬಗಳಿಗೆ ಸದ್ಯ ತಾತ್ಕಾಲಿವಾಗಿ ಸಿಗಬೇಕಾದ 10 ಸಾವಿರ ರೂ. ಹಾಗೂ ಪೂರ್ಣ, ಭಾಗಶಃ ಕಳೆದಕೊಂಡವರಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಸಂತ್ರಸ್ತರಲ್ಲದವರೇ ಪ್ರಭಾವ ಬೀರಿ ಪರಿಹಾರ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿದೆ.
ಶಾಸಕರು, ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಸದಸ್ಯರಲ್ಲದೇ ಸ್ಥಳೀಯ ರಾಜಕೀಯ ಪ್ರಭಾವಿಗಳ ಹೆಸರಿನಲ್ಲಿ ಸಂತ್ರಸ್ತರಲ್ಲದವರಿಗೆ ಅಧಿಕಾರಿಗಳೂ ಮಣೆ ಹಾಕುತ್ತಿದ್ದಾರೆ. ನೈಜವಾಗಿ ಸಂಕಷ್ಟ ಎದುರಿಸಿದ ಸಂತ್ರಸ್ತರಿಗೆ ಪರಿಹಾರ ದೊರೆಯುತ್ತಿಲ್ಲ. ಸಂತ್ರಸ್ತರು, ಮನೆಗೆ ಹೋಗಿ ಕನಿಷ್ಠ ವಾರಕ್ಕಾಗುವಷ್ಟು ನೆರವಾಗಲಿ ಎಂಬ ಉದ್ದೇಶದಿಂದ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ಸಿದ್ಧಪಡಿಸಿದ್ದ ಆಹಾರ ಸಾಮಗ್ರಿ, ಸೀಮೆಎಣ್ಣೆ ಒಳಗೊಂಡ ಕಿಟ್ ವಿತರಣೆಯಲ್ಲೇ ದೊಡ್ಡ ತಾರತಮ್ಯ ನಡೆದಿದೆ ಎಂದು ಹಲವು ಗ್ರಾಮಗಳ ಸಂತ್ರಸ್ತರು ಸ್ವತಃ ಡಿಸಿಯನ್ನು ಭೇಟಿ ಮಾಡಿದ್ದಾರೆ. ಡಿಸಿ ಕಚೇರಿ ಎದುರು ಧರಣಿಯೂ ಮಾಡಿದ್ದಾರೆ. ಕಿಟ್ ವಿತರಣೆಯಲ್ಲೇ ಇಂತಹ ತಾರತಮ್ಯ ನಡೆದರೆ, ಇನ್ನೂ ಸಂತ್ರಸ್ತರಿಗೆ ಬದುಕು ಕಲ್ಪಿಸಿಕೊಡಬೇಕಾದ ದೊಡ್ಡ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ. ಅದು ಯಾವ ರೀತಿ ಆಗುತ್ತದೆ ಎಂಬ ಆತಂಕ ಶುರುವಾಗಿದೆ.
2009ರಂತೆ ಮರುಕಳಿಸದಿರಲಿ: 2009ರಲ್ಲಿ ಉಂಟಾದ ಪ್ರವಾಹದ ವೇಳೆಯೂ ನಿಜವಾದ ಸಂತ್ರಸ್ತರನ್ನು ಬಿಟ್ಟು, ರಾಜಕೀಯ ಪ್ರಭಾವ ಬೀರಿದವರಿಗೆ ಆಸರೆ ಮನೆ, ಆಹಾರ ಕಿಟ್ ಎಲ್ಲವೂ ದೊರೆತ್ತಿದ್ದವು. ಯಾರ ಮನೆಯ ಮುಂದೆ ಕುಳಿತ, ಬಿದ್ದ ಮನೆಗಳ ಸಮೀಕ್ಷೆ ಮಾಡಲಾಗಿತ್ತೋ, ಆ ಮನೆಯವರ ಹೆಸರನ್ನೇ ಫಲಾನುಭವಿಗಳ ಪಟ್ಟಿಯಿಂದ ಬಿಡಲಾಗಿತ್ತು. ಇದಕ್ಕೆ ಸ್ಪಷ್ಟ ಉದಾಹರಣೆ ಬಾದಾಮಿ ತಾಲೂಕು ತಳಕವಾಡ ಗ್ರಾಮ. ಇನ್ನು ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡೋಣವೆಂದು ಆಸರೆ ಮನೆ ಕಟ್ಟಲು, ಕಡಿಮೆ ಬೆಲೆಗೆ ಭೂಮಿ ಕೊಟ್ಟ ರೈತನ ಮನೆಯೂ 2009ರ ಪ್ರವಾಹದ ವೇಳೆ ಬಿದ್ದಿತ್ತು. ಆ ರೈತನಿಗೂ ಮನೆ ಕೊಟ್ಟಿರಲಿಲ್ಲ. ಮುಖ್ಯವಾಗಿ ದಾನಿಗಳು, ಸರ್ಕಾರ ಸಂತ್ರಸ್ತರಿಗೆ ಸಾವಿರಾರು ಮನೆ ಕಟ್ಟಲು ಮುಂದೆ ಬಂದಿದ್ದರು. ಅವರೆಲ್ಲ ಇಲ್ಲಿಯೇ ಇದ್ದು ಮನೆ ಕಟ್ಟುವುದು ನೋಡಲು ಆಗಿರಲಿಲ್ಲ. ಹೀಗಾಗಿ ಜಿಲ್ಲಾಡಳಿತಕ್ಕೆ ಜವಾಬ್ದಾರಿ ವಹಿಸಿದ್ದರು. ಆಗ ಆಸರೆ ಮನೆ ಕಟ್ಟಲು ಬಳಸುವ ಸಿಮೆಂಟ್ ಇಟ್ಟಿಗೆ ಉತ್ಪಾದನೆಯಲ್ಲೂ ದೊಡ್ಡ ಭ್ರಷ್ಟಾಚಾರ ನಡೆದಿತ್ತು. ಕಾಲಿನಿಂದ ಒದ್ದರೆ ಪುಡಿ-ಪುಡಿಯಾಗುವ ಸಿಮೆಂಟ್ ಇಟ್ಟಿಗೆ ಬಳಸಲಾಯಿತು. ಹೀಗಾಗಿ ಆಸರೆ ಮನೆಗಳು, ವರ್ಷ ಕಳೆಯುವುದರೊಳಗೆ ಬಾರಾ ಕಮಾನ್‌ನಂತೆ ನಿಂತಿದ್ದವು. ಹೀಗಾಗಿ ಸಂತ್ರಸ್ತರು ಆಸರೆ ಮನೆಗೆ ಹೋಗಲಿಲ್ಲ. ಬೀಳುವ ಮನೆಯಲ್ಲಿ ಹೇಗಿರುವುದು ಎಂದು ವಾದಿಸಿದರು. ಇಂತಹ ಪರಿಸ್ಥಿತಿ ಮರು ಕಳಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಿದೆ ಎಂಬ ಒತ್ತಾಯ ಕೇಳಿ ಬಂದಿದೆ.
ಲೆಕ್ಕ ಮೇಲೆಯೇ ಇದೆ: ನಿಜವಾದ ಸಂತ್ರಸ್ತರಿಗೆ 10 ಸಾವಿರ ತಾತ್ಕಾಲಿಕ ಪರಿಹಾರ (ಬಟ್ಟೆ, ಪಾತ್ರೆ ಖರೀದಿಗೆ) ಮತ್ತು ಆಹಾರ ಸಾಮಗ್ರಿ ಕಿಟ್ ವಿತರಣೆ ನಡೆಯುತ್ತಿದೆ. ಇದರಲ್ಲೇ ದೊಡ್ಡ ತಾರತಮ್ಯವಾಗುತ್ತಿದೆ ಎಂಬ ಪ್ರಬಲ ಆರೋಪ ಕೇಳಿಬಂದಿದೆ. ಪ್ರವಾಹ ಬಂದಾಗ, ಸ್ವತಃ ತಾಲೂಕು ಆಡಳಿತಗಳೇ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಗ್ರಾಮವಾರು ಎಷ್ಟು ಕುಟುಂಬ, ಎಷ್ಟು ಸಂತ್ರಸ್ತರು ಎಂಬ ದಾಖಲೆ ಇವೆ. 39,098 ಕುಟುಂಬಗಳ ಸಂತ್ರಸ್ತರಾಗಿದ್ದು, ಅವುಗಳಿಗೆ 10 ಸಾವಿರದಂತೆ ಒಟ್ಟು 39,09,80,000 (39.09 ಕೋಟಿ) ತಾತ್ಕಾಲಿಕ ಪರಿಹಾರ ಕೊಡಬೇಕು. ಆಯಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಇಡೀ ಗ್ರಾಮದಲ್ಲಿ ಸುತ್ತಾಡಿ ಸಮೀಕ್ಷೆ ಮಾಡಿದರೆ, ಬಿದ್ದ ಮನೆಗಳ ಲೆಕ್ಕ ಕಣ್ಣೆದುರಿಗೆ ಸಿಗುತ್ತದೆ. ಯಾರ ಪ್ರಭಾವಕ್ಕೂ ಒಳಗಾಗದೇ ಸಂಕಷ್ಟ ಅನುಭವಿಸಿದ ಸಂತ್ರಸ್ತರಿಗೆ ಮಾನವೀಯ ನೆಲೆಯಲ್ಲಿ ಕೆಲಸ ಮಾಡುವ ಮನಸ್ಸು ಎಲ್ಲ ಅಧಿಕಾರಿಗಳು ಮಾಡಬೇಕಿದೆ. ಇನ್ನು ಸಂತ್ರಸ್ತರ ಹೆಸರಿನಲ್ಲಿ ಹಣ ದೊಡೆಯಲು ನೋಡುವ ಜನರಾಗಲಿ, ಅಧಿಕಾರಿಗಳಾಗಲಿ ಅಥವಾ ಗ್ರಾಪಂ ಮಟ್ಟದ ಜನಪ್ರತಿನಿಧಿಗಳಾಗಲಿ, ದುರ್ಬದ್ಧಿ ಬಿಡಬೇಕಿದೆ.
•ಶ್ರೀಶೈಲ ಕೆ. ಬಿರಾದಾರ