ಬೆಂಗಳೂರು: ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ಹಲವಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಎ-ತಯ್ಯಬಾ ಸಂಘಟನೆಯ ಶಂಕಿತ ಉಗ್ರ ಜುನೈದ್ ಅಹ್ಮದ್ ಪತ್ತೆಗಾಗಿ ಕೇಂದ್ರ ಅಪರಾಧ ವಿಭಾಗ ಪೊಲೀಸರು, ರಾಷ್ಟ್ರೀಯ ತನಿಖಾ ದಳ ಜಂಟಿ ಕಾರ್ಯಾಚರಣೆಯಲ್ಲಿ ಲುಕ್ ಔಟ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಲಾಗಿದೆ.
ಈಗಾಗಲೇ ಜುನೈದ್‌ನ ಐವರು ಸಹಚರರನ್ನು ಬಂಧಿಸಲಾಗಿದೆ. ಆತ ಅರಬ್ ಅಥವಾ ಯುರೋಪ್ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಆತನ ಬಂಧನಕ್ಕೆ ಲುಕ್‌ಔಟ್ ನೋಟಿಸ್ ನೀಡಲು ಸಿದ್ಧತೆ ಆ ರಂಭಿಸಲಾಗಿದೆ.
ಲುಕ್‌ಔಟ್ ನೋಟಿಸ್ ಹೊರಡಿಸಿದ ಬಳಿಕ ದೇಶದ ಎಲ್ಲ ರೈಲು, ವಿಮಾನ, ಬಸ್ ನಿಲ್ದಾಣ ಹಾಗೂ ವಿದೇಶಿ ಪೊಲೀಸರಿಗೂ ಮಾಹಿತಿ ರವಾನೆಯಾಗಲಿದೆ.
ಒಂದು ವೇಳೆ ಆತ ಪತ್ತೆಯಾದರೆ ಸ್ಥಳೀಯ ಪೊಲೀಸರ ನೆರವು ಪಡೆದು ವಶಕ್ಕೆ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ 2ನೇ ಆರೋಪಿಯಾಗಿರುವ ಜುನೈದ್ 2017ರಲ್ಲಿ ಆರ್.ಟಿ. ನಗರದಲ್ಲಿ ನಡೆದಿದ್ದ ಹತ್ಯೆ ಪ್ರಕರಣ ದಲ್ಲಿ ಜೈಲು ಸೇರಿದ್ದ. 2020ರಲ್ಲಿ ರಕ್ತ ಚಂದನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿ 2 ವರ್ಷಗಳ ಹಿಂದೆಯಷ್ಟೇ ಹೊರಬಂದಿದ್ದ. ಜೈಲಿನಲ್ಲಿ ಉಗ್ರ ಟಿ. ನಾಸಿರ್‌ನ ಸಂಪರ್ಕವಾಗಿ, ಅವನ ಪ್ರೇರಣೆಯಿಂದ ಉಗ್ರ ಸಂಘಟನೆಗೆ ಸೇರಿ ಸಹಚರರ ಮೂಲಕ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದ್ದ. ಬಳಿಕ ವಿದೇಶಕ್ಕೆ ತೆರಳಿ ಅಲ್ಲಿಂ ದಲೇ ತನ್ನ ಸಹಚರರಿಗೆ ಹಣ, ಶಸ್ತ್ರಾಸ್ತ್ರ ಗಳನ್ನು ಪೂರೈಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಿಎಂಟಿಸಿ ರೂಟ್
ಮಾರ್ಕ್ ಮಾಡಿದ್ದ ಶಂಕಿತರು?
ಬಂಧಿತರು ನಗರದ ಕೆಲವು ಪ್ರದೇಶಗಳ ಬಿಎಂಟಿಸಿ ರೂಟ್ ಮಾರ್ಕ್‌ಗಳನ್ನು ಮಾಡಿ ಕೊಂಡಿದ್ದರು ಎಂದು ಹೇಳಲಾಗಿದೆ. ಜನರು ಹೆಚ್ಚಾಗಿ ಪ್ರಯಾಣಿಸುವ ರೂಟ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಶಂಕಿತರ ವಿಚಾರಣೆ ನಡೆಸಬೇಕಿದೆ ಎಂದು ಮೂಲಗಳು ತಿಳಿಸಿವೆ.