Advertisement

ರೈತರಿಗೆ ಲುಕೌಟ್‌ ಬಿಸಿ : ನಾಯಕರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ಕೇಸು

02:21 AM Jan 29, 2021 | Team Udayavani |

ಹೊಸದಿಲ್ಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ಪರೇಡ್‌ ವೇಳೆ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಈಗ ರೈತ ಮುಖಂಡರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ(ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿದ್ದಾರೆ.

Advertisement

ಅಲ್ಲದೆ ಎಫ್ಐಆರ್‌ನಲ್ಲಿ ಹೆಸರಿರುವ ರೈತ ಮುಖಂಡರ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿ ಮಾಡಿದ್ದಾರೆ. ತಮ್ಮ ಪಾಸ್‌ಪೋರ್ಟ್‌ಗಳನ್ನು ಸರೆಂಡರ್‌ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸರಣಿ ಸಭೆಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಯೋಗೇಂದ್ರ ಯಾದವ್‌, ಬಲ್ಬಿರ್‌ ಸಿಂಗ್‌ ರಾಜೇವಾಲ್‌, ರಾಕೇಶ್‌ ಟೀಕಾಯತ್‌ ಸೇರಿದಂತೆ 20 ರೈತ ನಾಯಕರಿಗೆ ನೋಟಿಸ್‌ ನೀಡಿರುವ ಪೊಲೀಸರು, ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಸಿಂಘು ಗಡಿಯಲ್ಲಿರುವ ರೈತ ನಾಯಕರ ಟೆಂಟ್ಗಳಿಗೆ ನೋಟಿಸ್‌ ಅನ್ನು ಅಂಟಿಸಲಾಗಿದೆ.

ದೇಶದ್ರೋಹ ಕೇಸ್‌: ಕೆಂಪುಕೋಟೆಯಲ್ಲಾದ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಲಾಗಿದೆ. ಇಲ್ಲಿನ ಘಟನೆಗೆ ಸಂಬಂಧಿಸಿದ ಎಫ್ಐಆರ್‌ನಲ್ಲಿ ಪಂಜಾಬಿ ನಟ ದೀಪ್‌ ಸಿಧು ಹಾಗೂ ಲಖಾ ಸಿಧಾನಾ ಅವರ ಹೆಸರೂ ಇದೆ.

ಆಸ್ಪತ್ರೆಗೆ ಅಮಿತ್‌ ಶಾ ಭೇಟಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ದಿಲ್ಲಿಯ 2 ಆಸ್ಪತ್ರೆಗಳಿಗೆ ಭೇಟಿ ನೀಡಿ, ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ. ನಿಮ್ಮ ಧೈರ್ಯ ಹಾಗೂ ದಿಟ್ಟತನಕ್ಕೆ ನಾವು ಹೆಮ್ಮೆಪಡುತ್ತೇವೆ ಎಂದೂ ಶಾ ಟ್ವೀಟ್‌ ಮಾಡಿದ್ದಾರೆ. ಟ್ರ್ಯಾಕ್ಟರ್‌ ಪರೇಡ್‌ ವೇಳೆ ನಡೆದ ಹಿಂಸಾಚಾರದಲ್ಲಿ ಸುಮಾರು 400 ಪೊಲೀಸರು ಗಾಯಗೊಂಡಿದ್ದರು.

Advertisement

ರೈತ ಮುಖಂಡರ ವಿರುದ್ಧ ದೀಪ್‌ ಕಿಡಿ: ಕೆಂಪುಕೋಟೆಯಲ್ಲಿ ಸಿಕ್ಖ್ ಧ್ವಜ ಹಾರಿಸಿದ ದೀಪ್‌ ಸಿಧುವನ್ನು “ಆರೆಸ್ಸೆಸ್‌ ಮತ್ತು ಬಿಜೆಪಿ ಏಜೆಂಟ್‌’ ಎಂದು ಕರೆದಿರುವ ರೈತ ಸಂಘಟನೆಗಳ ಮುಖಂಡರ ವಿರುದ್ಧ ಸಿಧು ಕಿಡಿಕಾರಿದ್ದಾರೆ. “ಬಿಜೆಪಿ ಅಥವಾ ಆರೆಸ್ಸೆಸ್‌ನವನಾಗಿದ್ದರೆ ನಾನು ಸಿಕ್ಖ್ ಧ್ವಜವನ್ನು ಏಕೆ ಹಾರಿಸುತ್ತಿದ್ದೆ’ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಸುಖಾಸುಮ್ಮನೆ ದ್ವೇಷ ಸಾಧಿಸಲಾಗುತ್ತಿದೆ. ನಾನು ಕೆಂಪುಕೋಟೆ ತಲುಪುವಷ್ಟರಲ್ಲಿ ಅಲ್ಲಿ ಸಾಕಷ್ಟು ಜನ ಸೇರಿಯಾಗಿತ್ತು. ಆದರೆ ಒಬ್ಬ ರೈತ ಮುಖಂಡನೂ ಅಲ್ಲಿರಲಿಲ್ಲ. ಪ್ರತಿಭಟನಾರ್ಥವಾಗಿ ನಾವು ಧ್ವಜ ಹಾರಿಸಿದೆವು. ಅಲ್ಲಿನ ಬೇರಾವ ವಸ್ತುವಿಗೂ ಹಾನಿ ಮಾಡಿಲ್ಲ ಎಂದೂ ದೀಪ್‌ ಸಿಘು ಸ್ಪಷ್ಟನೆ ನೀಡಿದ್ದಾರೆ.

ಇಂದು ಸಂಜೆವರೆಗೂ ಇಂಟರ್ನೆಟ್‌ ಇಲ್ಲ
ಇಂಟರ್ನೆಟ್‌ ಸಂಪರ್ಕ ಕಡಿತವನ್ನು ಶುಕ್ರವಾರ ಸಂಜೆ 5ರ ವರೆಗೂ ವಿಸ್ತರಿಸಿ ಗುರುವಾರ ಹರಿಯಾಣ ಸರಕಾರ ಆದೇಶ ಹೊರಡಿಸಿದೆ. ಮಂಗಳವಾರದ ಹಿಂಸಾಚಾರದ ಬಳಿಕ ಸೋನಿಪತ್‌, ಝಾಜ್ಜರ್‌ ಮತ್ತು ಪಲ್ವಾಲ್‌ ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿರುವ ಕಾರಣ ಅದನ್ನು ವಿಸ್ತರಿಸಿದ್ದೇವೆ ಎಂದು ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next