Advertisement

ಕೈಬೀಸಿ ಕರೆಯುತ್ತಿದೆ ಕಿಷ್ಕಿಂದಾ ಗುಡ್ಡ

03:40 PM Dec 09, 2019 | Team Udayavani |

ಗಂಗಾವತಿ: ತಾಲೂಕಿನ ಕಿಷ್ಕಿಂದಾ ಗುಡ್ಡಗಾಡು ಪ್ರದೇಶ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಸಣ್ಣ ಗಾತ್ರದಿಂದ ಹಿಡಿದು ಬೃಹತ್‌ ಗಾತ್ರದ ಬಂಡೆಗಳನ್ನು ಸಾಲಾಗಿ ಜೋಡಿಸಿ ಗೋಡೆ ನಿರ್ಮಿಸಿದಂತೆ ಗುಡ್ಡಪ್ರದೇಶ ರಚನೆಗೊಂಡಿದ್ದು, ಹಂಪಿ ಪ್ರದೇಶಕ್ಕೆ ಆಗಮಿಸಿದ ಪ್ರವಾಸಿಗರು ಕಿಷ್ಕಿಂದಾ ಏಳುಗುಡ್ಡದ ಪ್ರದೇಶವನ್ನು ವೀಕ್ಷಣೆ ಮಾಡದೇ ವಾಪಸ್‌ ಹೋಗುವುದೇ ಇಲ್ಲ. ಭೂಮಿಯ ಅರ್ಧದಷ್ಟು ಆಯಸ್ಸು ಹೊಂದಿರುವ ಇಲ್ಲಿಯ ಗುಡ್ಡಬೆಟ್ಟಗಳು ಸಿನಿಮಾವೊಂದರ ಚಿತ್ರೀಕರಣಕ್ಕೆ ಸೆಟ್‌ ಹಾಕಿದಂತೆ ಕಾಣುತ್ತವೆ.

Advertisement

ಅಂಜನಾದ್ರಿ ಬೆಟ್ಟ ಹತ್ತಿದ ಪ್ರತಿಯೊಬ್ಬ ಪ್ರವಾಸಿಗ ಸುತ್ತಲಿರುವ ಏಳು ಗುಡ್ಡ ಪ್ರದೇಶದ ಕಡೆ ನೋಡಿ ಆಶ್ಚರ್ಯ ವ್ಯಕ್ತಪಡಿಸದೇ ಇರಲಾರ. ಅಂಜನಾದ್ರಿ ಬೆಟ್ಟ, ಸಾಣಾಪೂರ ಬಾಲಾಂಜನೇಯ ಗುಡ್ಡ, ಕರಿಯಮ್ಮನಗಡ್ಡಿ ಗುಡ್ಡ, ಋಷಿಮುಖ ಪರ್ವತದ ಗುಡ್ಡ, ತಿಮ್ಮಪ್ಪನಗುಡ್ಡದಿಂದ ಪ್ರತಿ ದಿನ ಸೂರ್ಯೋದಯ, ಸೂರ್ಯಾಸ್ತ ನೋಡಲು ನೂರಾರು ಪ್ರವಾಸಿಗರು ಕ್ಯಾಮರಾದೊಂದಿಗೆ ಇಲ್ಲಿರುತ್ತಾರೆ. ಹವ್ಯಾಸಿ ಛಾಯಾಗ್ರಾಹಕರಿಗೆ ಕಿಷ್ಕಿಂದಾ ಗುಡ್ಡ ಪ್ರದೇಶ ಸ್ವರ್ಗಕ್ಕೆ ಸಮ. ಪಂಪಾಸರೋವರದ ಮುಂದಿರುವ ಬೆಟ್ಟ ಕಲ್ಲುಗಳನ್ನು ಗುಡ್ಡೆ ಹಾಕಿದಂತೆ ಬಾಸವಾಗುತ್ತದೆ. ತುಂಗಭದ್ರಾ ತಟದಲ್ಲಿರುವ ಗುಡ್ಡ ಪ್ರದೇಶದ ಕಲ್ಲುಗಳಂತು ಸಾವಿರಾರು ವರ್ಷಗಳಿಂದ ನದಿಯ ನೀರಿನ ರಭಸಕ್ಕೆ ಪಾಲಿಶ್‌ ಮಾಡಿದಂತೆ ಕಾಣುತ್ತವೆ. ಸಾಣಾಪೂರ ಕೆರೆ ಪ್ರದೇಶ ವಾಣಿಭದ್ರೇಶ್ವರ ಬೆಟ್ಟದಲ್ಲಿರುವ ದೃಶ್ಯವನ್ನು ದೇವರು ನಿಂತುನಿರ್ಮಿಸಿದಂತಿದೆ.

ಶಿಲಾರೋಹಿಗಳ ಸ್ವರ್ಗ: ಹಂಪಿ ವಿರೂಪಾಪೂರಗಡ್ಡಿ ಕಿಷ್ಕಿಂದಾ ಅಂಜನಾದ್ರಿಗೆ ಭೇಟಿ ನೀಡುವ ಬಹುತೇಕ ವಿದೇಶಿ ಪ್ರವಾಸಿಗರು ವಿರೂಪಾಪೂರಗಡ್ಡಿ ರೆಸಾರ್ಟ್‌ ಗಳಲ್ಲಿ ವಾಸವಿದ್ದು ಇಲ್ಲಿರುವ ಬೆಟ್ಟಗುಡ್ಡ ಪ್ರದೇಶಗಳಲ್ಲಿರುವ ಶಿಲಾರೋಹಣ ಮಾಡುವ ಮೂಲಕ ಸಾಹಸ ಮೆರೆಯುತ್ತಾರೆ. ಶಿಲಾರೋಹಣ ಕಲಿಸಲು ಇಲ್ಲಿ ತರಬೇತುದಾರರಿದ್ದಾರೆ. ಇಲ್ಲಿಯ ಶಿಲಾರೋಹಣ ಮತ್ತು ಬೆಟ್ಟ ಬಂಡೆಗಳ ಕುರಿತು ವಿದೇಶಿಗರು ಗೊಲ್ಡನ್‌ ಬೋಲ್ಡರ್ಮ ತ್ತು ಕ್ಲೈಬಿಂಗ್‌ ಗೈಡ್‌ ಬುಕ್‌ ಸೇರಿ ವಿವಿಧ ಪುಸ್ತಕಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಿಷ್ಕಿಂದಾ ಪ್ರದೇಶದ ಬೆಟ್ಟಗುಡ್ಡ ಬೃಹತ್‌ ಶಿಲೆಗಳು ಮತ್ತು ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆ ಸ್ಥಳಗಳ ಕುರಿತು ಈ ಪುಸ್ತಕಗಳಲ್ಲಿ ವಿವರಿಸಲಾಗಿದೆ. ಪ್ರಕೃತಿಯೇ ಸೃಷ್ಟಿಸಿರುವ ಕಿಷ್ಕಿಂದಾ ಪ್ರದೇಶದ ಬೆಟ್ಟ ಗುಡ್ಡಗಳ ಸಂರಕ್ಷಣೆ ಜತೆಗೆ ಇಲ್ಲಿರುವ ವನ್ಯಜೀವಿಗಳ ಸುರಕ್ಷತೆ ಪ್ರತಿಯೊಬ್ಬರ ಹೊಣೆಯಾಗಿದೆ.

 

-ಕೆ. ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next