Advertisement

ಮನೆಯಲ್ಲಿ ಮಳೆ ನೋಡಾ…

11:00 AM Oct 09, 2019 | sudhir |

ಜೋರು ಮಳೆ ಬಂದರೆ ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಅನಿವಾರ್ಯವಾದರೂ, ಅದು ನಿಂತಮೇಲೆ ತೆರೆದಿಡುವುದು ಒಳ್ಳೆಯದು. ಆಗ ಕಡಿಮೆ ತೇವಾಂಶ ಹೊಂದಿರುವ ಹೊರಗಿನ ತಾಜಾ ಗಾಳಿ ಮನೆಯನ್ನು ಸೇರುವುದರ ಜೊತೆಗೆ, ಹೆಚ್ಚುವರಿ ತೇವಾಂಶ ಹೊಂದಿರುವ ಒಳಾಂಗಣ ಗಾಳಿ ಹೊರಹೋಗಲು ಅನುವು ಮಾಡಿದಂತೆಯೂ ಆಗುತ್ತದೆ.

Advertisement

ಹೊರಗೆ ಮಳೆ ಜೋರಾಗಿ ಸುರಿಯುತ್ತಿದ್ದರೆ, ದಿನಗಟ್ಟಲೆ ಸುರಿದಿದ್ದರೆ, ಮನೆಯೊಳಗೂ ಅದರ ಪರಿಣಾಮ ಆಗುತ್ತದೆ. ಇದು ಒಂದು ರೀತಿಯಲ್ಲಿ, ಮನೆಯೊಳಗೇ ಮಳೆ ಬಿದ್ದಿತೇನೋ ಎಂಬ ರೀತಿಯಲ್ಲಿ ಅದರ ಪರಿಣಾಮವಿರುತ್ತದೆ. ಕಾರು- ಬಸ್ಸಿನ ಗಾಜು ಮಳೆಗೆ ಮಂಜುಗಟ್ಟುವುದು ಅದರ ಒಳಗಿದ್ದ ತೇವಾಂಶ ಹನಿಯಾಗುವುದರಿಂದ. ಇದೇ ರೀತಿಯಲ್ಲಿ ಮನೆಯೊಳಗೂ ಒಂದಷ್ಟು ತೇವಾಂಶ ಹನಿಯಾಗಿ ಸಾಕಷ್ಟು ಕಿರಿಕಿರಿ ಮಾಡಬಹುದು. ಸಾಮಾನ್ಯವಾಗಿ ಒಳಗಿನ ತಾಪಮಾನ ಹೊರಗಿನದಕ್ಕಿಂತ ಕಡಿಮೆ ಇದ್ದು, ತೇವಾಂಶವೂ ಹೆಚ್ಚಿದ್ದಾಗ, ಗಾಳಿಯಲ್ಲಿ ಕಾಣದಂತೆ ಇರುವ ನೀರಿನ ಅಂಶ ಹನಿಯಾಗಿ ಅಲ್ಲಲ್ಲಿ ಶೇಖರಗೊಳ್ಳುತ್ತದೆ. ಮನೆಗಳ ಗೋಡೆ, ಸೂರಿಗೆ ಹೋಲಿಸಿದರೆ ನೆಲವೇ ಹೆಚ್ಚು ತಂಪಾಗಿರುವುದು, ಆದುದರಿಂದ, ತೇವಾಂಶ ಹನಿಯಾಗಿ ನೆಲದ ಮೇಲೆ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಮಳೆಗಾಲದಲ್ಲಿ ನೆಲ, ಅದರಲ್ಲೂ ನುಣುಪಾದ ನೆಲಹಾಸು ಹಾಕಿರುವ ಕಡೆ ಜಾರುವುದರ ಬಗ್ಗೆ ಎಚ್ಚರದಿಂದ ಇರಬೇಕು. ಕಿಟಕಿಯ ಗಾಜಿನ ಮೇಲೆ ಅಂಟಿಕೊಳ್ಳುವ ನೀರ ಹನಿಗಳು ಅಷ್ಟೇನೂ ತೊಂದರೆ ಕೊಡದಿದ್ದರೂ, ಆಗಾಗ ಮಂಜುಗಟ್ಟಿದ ಗಾಜುಗಳನ್ನು ಒರೆಸುವುದು ಉತ್ತಮ. ಇಲ್ಲದಿದ್ದರೆ, ಮಳೆಯ ನಂತರ ಬಿಸಿಲು ಬಂದರೆ, ಕಿಟಕಿಯ ಮೇಲಿನ ತೇವಾಂಶ ಆವಿಯಾಗಿ, ಮನೆಯೊಳಗೆ ಸೇರಿ, ಅನಗತ್ಯವಾಗಿ ಕಿರಿಕಿರಿ ಉಂಟುಮಾಡಬಹುದು.

ತೇವಾಂಶ ಮನೆಯೊಳಗೆ ಶೇಖರವಾಗದಂತೆ ತಡೆಯುವುದು ಹೇಗೆ?
ವಾತಾವರಣದಲ್ಲಿನ ತೇವಾಂಶ ಸ್ವಾಭಾವಿಕವಾಗೇ ಮನೆಯೊಳಗೆ ಬಂದು ಸೇರುತ್ತಿರುತ್ತದೆ. ಅದಕ್ಕೆ ಹೊರಗೆ ಹೋಗಲು ಅನುವು ಮಾಡಿಕೊಡದಿದ್ದಾಗ ಮಾತ್ರ ಅದರ ಉಪಟಳ ಹೆಚ್ಚಾಗುತ್ತದೆ. ನಮ್ಮಲ್ಲಿ ಮಳೆ ಬಂದರೆ ಸಾಕು ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿ ಕೂರುತ್ತಾರೆ. ಸಾಮಾನ್ಯವಾಗಿ ಮಳೆ ಬರುವ ಮೊದಲು ಹಾಗೂ ಶುರುವಿನಲ್ಲಿ ಇರುವಷ್ಟು ತೇವಾಂಶ, ಮಳೆ ಸಂಪೂರ್ಣವಾಗಿ ಬಿದ್ದ ನಂತರ ಇರುವುದಿಲ್ಲ. ನಾವು ಹೆಚ್ಚು ತೇವಾಂಶ ಇರುವ ಗಾಳಿಯನ್ನು ಮನೆಯೊಳಗೆ ಬಿಟ್ಟುಕೊಂಡು ನಂತರ ಕಿಟಕಿ ಬಾಗಿಲುಗಳನ್ನು ಮುಚ್ಚುವುದರಿಂದ, ಅಧಿಕ ನೀರಿನ ಅಂಶ ಒಳಾಂಗಣದಲ್ಲಿ ಶೇಖರಗೊಳ್ಳುತ್ತದೆ. ಈ ಹೆಚ್ಚುವರಿ ತೇವಾಂಶವೇ ನಮಗೆ ತೊಂದರೆ ಕೊಡುವುದು. ಜೋರು ಮಳೆ ಬಂದರೆ ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಅನಿವಾರ್ಯವಾದರೂ, ಅದು ನಿಂತಮೇಲೆ ತೆರೆದಿಡುವುದು ಒಳ್ಳೆಯದು. ಆಗ ಕಡಿಮೆ ತೇವಾಂಶ ಹೊಂದಿರುವ ಹೊರಗಿನ ತಾಜಾ ಗಾಳಿ ಮನೆಯನ್ನು ಸೇರುವುದರ ಜೊತೆಗೆ, ಹೆಚ್ಚುವರಿ ತೇವಾಂಶ ಹೊಂದಿರುವ ಒಳಾಂಗಣ ಗಾಳಿ ಹೊರಹೋಗಲು ಅನುವು ಮಾಡಿದಂತೆಯೂ ಆಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಸೂಕ್ತ ಸಜ್ಜಾ ಹಾಗೂ ಫಿನ್‌ಗಳನ್ನು ಅಳವಡಿಸಿ
ಮಳೆಗಾಲದಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಲು ಮುಖ್ಯ ಕಾರಣ- ಅವುಗಳ ಮೂಲಕ ಮನೆಯೊಳಗೆ ಇರುಚಲು ನೀರು ಬರುತ್ತದೆ ಎಂದು. ಈ ಇರುಚಲಿಗೆ ಸೂಕ್ತ ನಿರೋಧಕಗಳನ್ನು ಒಡ್ಡಿದರೆ, ನೀರಿನ ಹಾವಳಿ ಇರುವುದಿಲ್ಲ ಹಾಗೂ ನಾವು ನಿರಾಯಾಸವಾಗಿ ಕಿಟಕಿ ಬಾಗಿಲುಗಳನ್ನು ಸ್ವಲ್ಪವಾದರೂ ತೆರೆದಿಡಬಹುದು. ಚಳಿಗಾಲಕ್ಕೆ ಹೋಲಿಸಿದರೆ, ನಮಗೆ ಮಳೆಗಾಲದಲ್ಲಿ ಗಾಳಿಯ ಹರಿವು ಒಳಾಂಗಣದಲ್ಲಿ ಹೆಚ್ಚಾಗಿರಬೇಕು. ಏಕೆಂದರೆ, ನಮ್ಮ ನಿಶ್ವಾಸದ ಗಾಳಿ, ಅಡುಗೆ ಮಾಡುವಾಗ ಉಂಟಾಗುವ ತೇವಾಂಶ ಹಾಗೂ ಮತ್ತೂಂದರ ಮೂಲಕ ನಿರಂತರವಾಗಿ ನೀರಿನ ಅಂಶ ಒಳಾಂಗಣದಲ್ಲಿ ಸೇರುತ್ತಲೇ ಇರುತ್ತದೆ. ಈ ಹೆಚ್ಚುವರಿ ತೇವಾಂಶ ಆರೋಗ್ಯಕ್ಕೂ ಒಳ್ಳೆಯದಲ್ಲ.

Advertisement

ಹಾಗಾಗಿ, ಹೊರಗಿನ ಗಾಳಿ ಸ್ವಲ್ಪವಾದರೂ ಒಳಗೆ ನಿರಂತರವಾಗಿ ಬರುವಂತೆ ಮಾಡಬೇಕು. ಕಿಟಕಿಗಳಿಗೆ ಸೂಕ್ತ ಸಜ್ಜಾಗಳನ್ನು ಅವುಗಳ ಮೇಲೆ ಅಡ್ಡಡ್ಡಲಾಗಿ ಅಳವಡಿಸಬೇಕು. ಜೊತೆಗೆ, ಗಾಳಿ ಅಕ್ಕಪಕ್ಕದಿಂದ ಬೀಸುವುದರಿಂದ ಕಿಟಕಿಗಳ ಮೂಲಕ ಇರುಚಲು ನೀರು ಒಳಗೆ ಬರುತ್ತಿದ್ದರೆ, ಅಕ್ಕಪಕ್ಕದಲ್ಲಿ ಸುಮಾರು ಒಂದು ಅಡಿ ಅಗಲದ, ಕಿಟಕಿಯ ಎತ್ತರಕ್ಕೂ ಫಿನ್‌ಗಳನ್ನು ನೀಡಬೇಕು. ಇವು ಸಾಮಾನ್ಯವಾಗಿ ಕಾಂಕ್ರೀಟಿನ ತೆಳು ಹಲಗೆಗಳಾಗಿರುತ್ತವೆ. ಇವನ್ನು ಹೆಚ್ಚಾಗಿ ಅಲಂಕಾರಿಕವಾಗಿ ಬಳಸಲಾಗುತ್ತದೆ. ಈ ಫಿನ್‌ಗಳನ್ನು ಬಳಸಿ ನಾವು ಕಿಟಕಿಗಳ ಮೂಲಕ ಒಳಗೆ ನುಸುಳುವ ಇರುಚಲನ್ನೂ ನಿರಾಯಾಸವಾಗಿ ನಿಯಂತ್ರಿಸಬಹುದು.

ಕ್ಯಾಬಿನೆಟ್‌ಗಳಲ್ಲಿ ಗಾಳಿಯ ಹರಿವು
ಮಳೆಗಾಲದಲ್ಲಿ ಬಟ್ಟೆಗಳು ಒಣಗುವುದೇ ಕಷ್ಟ, ಏನೋ ಒಣಗಿದ ಹಾಗಿದೆ ಎಂದು ಕಪಾಟುಗಳಲ್ಲಿ ಮಡಚಿಟ್ಟರೆ, ಮಾರನೆಯ ದಿನದ ಹೊತ್ತಿಗೆ ಹಳಸು-ಕಮಟು ವಾಸನೆ ಬರಲು ತೊಡಗುತ್ತದೆ. ಹೀಗಾಗಲು ಮುಖ್ಯ ಕಾರಣ- ಕಪಾಟುಗಳಲ್ಲಿಯೂ ಶೇಖರವಾಗುವ ಹೆಚ್ಚುವರಿ ನೀರಿನಾಂಶ. ಇದು ಹೊರಹೋಗಬೇಕಾದರೆ ಕಪಾಟುಗಳಿಗೂ ಗಾಳಿ ಆಡಲು ಅನುವು ಮಾಡಿಕೊಡಬೇಕು. ಕೆಳಮಟ್ಟದಲ್ಲಿ ಅಂದರೆ, ಕಪಾಟಿನ ಬಾಗಿಲಿನಲ್ಲಿ ಅಡ್ಡಕ್ಕೆ ಸುಮಾರು ಅರ್ಧ ಇಂಚು ಅಗಲ ಹಾಗೂ ಆರು ಇಂಚು ಉದ್ದದ ಸಂದಿಯನ್ನು ಬಿಟ್ಟರೆ, ಗಾಳಿ ಹರಿದಾಡಲು ಸುಲಭವಾಗುತ್ತದೆ. ಈ ಸಂದಿಯ ಮೂಲಕ ಜಿರಳೆ ಮತ್ತಿತರ ಹುಳ ಹುಪ್ಪಟೆಗಳು ಒಳನುಸುಳುವುದನ್ನು ತಡೆಯಲು, ಒಳಗಿನಿಂದ ಈ ಸ್ಥಳಕ್ಕೆ ಸೊಳ್ಳೆ ಮೆಶ್‌ ಹಾಕಬಹುದು. ಇದೇ ರೀತಿಯಲ್ಲಿ ಅಡುಗೆ ಮನೆಯಲ್ಲೂ ಪಾತ್ರೆಗಳನ್ನು ತೊಳೆದ ನಂತರ ಜೋಡಿಸಿಟ್ಟು ಕಪಾಟನ್ನು ಮುಚ್ಚಿಟ್ಟರೆ, ಅವು ಒಣಗದೆ ಹಾಗೆಯೇ ಉಳಿಯಬಹುದು. ಜೊತೆಗೆ, ಅವನ್ನು ಮಾರನೆಯ ದಿನ ಮುಟ್ಟಿನೋಡಿದರೆ ಒದ್ದೊದ್ದೆಯಾಗಿ ಇರುತ್ತದೆ. ಹಾಗಾಗಿ ಈ ಸ್ಥಳದಲ್ಲೂ ಗಾಳಿ ಸರಾಗವಾಗಿ ಹರಿದಾಡುವಂತೆ ಸೂಕ್ತ ಸಂದುಗಳನ್ನು ಬಿಡಬೇಕು. ಕಪಾಟುಗಳನ್ನು ವಿನ್ಯಾಸ ಮಾಡುವಾಗಲೇ ಈ ಸಂದಿಗಳತ್ತ ಗಮನ ಹರಿಸಿ, ಅವುಗಳನ್ನು ಕಲಾತ್ಮಕವಾಗಿ ಇರಿಸಿದರೆ, ನೋಡಲೂ ಸಹ ಸುಂದರವಾಗಿ ಕಂಡು, ಒಳಾಂಗಣದ ಮೆರುಗನ್ನು ಹೆಚ್ಚಿಸುತ್ತದೆ.

ವೆಂಟಿಲೇಟರ್‌- ಗವಾಕ್ಷಿ ಮಹಾತೆ¾
ಸಾಮಾನ್ಯವಾಗಿ ಬಿಸಿಗಾಳಿ ಸೂರಿನ ಬಳಿ ಶೇಖರವಾಗುತ್ತದೆ. ಇದು ಕಿಟಕಿಯ ಮೇಲು ಮಟ್ಟಕ್ಕಿಂತ ಹೆಚ್ಚಿರುವುದರಿಂದ, ಮನೆಯೊಳಗೆ ಶೇಖರವಾಗುವ ಹೆಚ್ಚುವರಿ ತೇವಾಂಶ ಹೊರಹೋಗಲು ಆಗುವುದಿಲ್ಲ. ಮಳೆಯ ನಂತರ ಸೂರು ತಣ್ಣಗಾದರೆ, ಹೆಚ್ಚುವರಿ ನೀರಿನ ಅಂಶ ಅಲ್ಲಿಯೇ ಹನಿಯಾಗಿ, ಕೆಲವೊಮ್ಮೆ ಮಳೆಯಂತೆ ಕೆಳಗೆ ಬೀಳುವುದೂ ಉಂಟು. ಈ ಪ್ರಕ್ರಿಯೆಯನ್ನು ನಾವು ಸಾಮಾನ್ಯವಾಗಿ ಸ್ನಾನದ ಕೋಣೆಗಳಲ್ಲಿ ಗಮನಿಸಿರಬಹುದು. ಬಿಸಿನೀರಿನ ಸ್ನಾನ ಆದ ನಂತರ, ಸೂರಿನ ಕೆಳಗೆ ಸಾಕಷ್ಟು ಹನಿಗಳು ಮೂಡಿರುವುದನ್ನು ಕಾಣಬಹುದು. ಮೇಲೇರಿದ ಬಿಸಿಗಾಳಿಗೆ, ಅದರಲ್ಲೂ ತೇವಾಂಶ ಹೆಚ್ಚಿರುವ ಒಳಾಂಗಣದ ವಾತಾವರಣ ತಾಜಾ ಆಗಲು ಕೆಲವೊಂದು ಕಡೆಯಾದರೂ ಸೂರು ಮಟ್ಟದ ತೆರೆದ ಸ್ಥಳ- ಸಣ್ಣ ಗವಾಕ್ಷಿಗಳನ್ನು ನೀಡುವುದು ಒಳ್ಳೆಯದು.

ಈ ವೆಂಟಿಲೇಟರ್‌ಗಳು ತೀರಾ ದೊಡ್ಡದಾಗಿ ಇರಬೇಕು ಎಂದೇನೂ ಇಲ್ಲ, ಎರಡು ಅಡಿ ಅಗಲ, ಒಂದು ಅಡಿ ಉದ್ದವಿದ್ದರೂ ಸಾಕು. ಸೂರಿನ ಕೆಳಗೆ ಇವನ್ನು ಅಳವಡಿಸಿದರೆ ಹೆಚ್ಚು ಉಪಯುಕ್ತ.

ಹೆಚ್ಚಿನ ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next