Advertisement

ಚಿತ್ತಾಪುರದಲ್ಲಿ ಎಲ್ಲಿ ನೋಡಿದ್ರೂ ಗುಂಡಿಗಳದ್ದೇ ದರ್ಶನ

07:17 AM Jan 05, 2019 | Team Udayavani |

ಚಿತ್ತಾಪುರ: ಪಟ್ಟಣದಲ್ಲೀಗ ಎಲ್ಲೆಲ್ಲೂ ರಸ್ತೆಗಳ ಮೇಲೆ ಗುಂಡಿಗಳ ದರ್ಶನವಾಗುತ್ತಿದೆ. 23 ವಾರ್ಡ್‌ಗಳಲ್ಲಿ ವಿವಿಧ ಕಾರಣಗಳಿಗಾಗಿ ರಸ್ತೆಗಳನ್ನು ಯದ್ವಾತದ್ವಾ ಅಗೆಯಲಾಗುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತೆ  ಆಗಿದೆ.

Advertisement

ಅನಿಯಮಿತವಾಗಿ ನಡೆಯುತ್ತಿರುವ ರಸ್ತೆ ಅಗೆತ ಹೊಸ ಸವಾಲು ಸೃಷ್ಟಿಸಿದೆ. ಎಲ್ಲೆಡೆ ಅವ್ಯವಸ್ಥೆ ಕಂಡರೂ ಪುರಸಭೆ ಆಡಳಿತ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಹೊಸ ಸದಸ್ಯರು ಚುನಾಯಿತರಾಗಿ ಮೂರು ತಿಂಗಳು ಗತಿಸಿದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಆಡಳಿತ ರಚನೆ ನನೆಗುದಿಗೆ ಬಿದ್ದಿದೆ. ಕಾಮಗಾರಿಗಳ ಬಗ್ಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಇದೇ ಸಮಸ್ಯೆ ಮೂಲವಾಗಿದೆ. 

ಪಟ್ಟಣ ವ್ಯಾಪ್ತಿಯಲ್ಲಿ ಏನೇ ಸಾರ್ವಜನಿಕ ಕಾಮಗಾರಿ ನಡೆದರೂ ಅದು ಸ್ಥಳೀಯ ಸಂಸ್ಥೆಯ ಗಮನಕ್ಕೆ ಬರಬೇಕು ಎನ್ನುವುದು ನಿಯಮ. ಆದರೆ ಯಾವುದೇ ಅನುಮತಿ ಇಲ್ಲದೇ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ.

ಪ್ರತಿ ಕಾಮಗಾರಿ ಸಮಗ್ರ ಮಾಹಿತಿ ಪುರಸಭೆಯಲ್ಲಿ ಇರಬೇಕು. ಸಂಬಂಧಿಸಿದವರು ಮಾಹಿತಿ ಕೊಡದಿದ್ದರೆ ಅದನ್ನು ಪಡೆಯುವ ಹಾಗೂ ಲೋಪ ಕಂಡು ಬಂದರೆ ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವ ಅಧಿಕಾರ ಪುರಸಭೆ ಆಡಳಿತಕ್ಕಿದೆ. ಆದರೆ ಇದ್ಯಾವುದೂ ತನಗೆ ಸಂಬಂಧವಿಲ್ಲವೆಂಬಂತೆ ಪುರಸಭೆ ಆಡಳಿತ ನಡೆದುಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕುಡಿಯುವ ನೀರಿನ ಪೈಪ್‌ ಸರಿಪಡಿಸುವುದು, ಮೊಬೈಲ್‌ ಕೇಬಲ್‌ ಜೋಡಣೆ, ಚರಂಡಿ ನಿರ್ಮಾಣ, ಯುಜಿಡಿ
ಕೆಲಸ, ಶೌಚಾಲಯಕ್ಕೆ ಪೈಪ್‌ ಅಳವಡಿಸುವುದು ಸೇರಿದಂತೆ ಹಲವು ಕಾರಣಗಳಿಂದ ಅಚ್ಚುಕಟ್ಟಾದ ರಸ್ತೆಯನ್ನು ಮೇಲಿಂದ
ಮೇಲೆ ಅಗೆಯುವುದು ಸಾಮಾನ್ಯವಾಗಿದೆ.  ರಸ್ತೆ ಅಗೆಯುವಾಗ ತೋರುವ ಆಸಕ್ತಿ, ಕೆಲಸ ಮುಗಿದ ಬಳಿಕ ಸರಿಪಡಿಸುವಲ್ಲಿ ಕಾಣುತ್ತಿಲ್ಲ. ಅಗೆದ ಭಾಗವನ್ನು ಮಣ್ಣಿನಿಂದ ಸಮರ್ಪಕವಾಗಿ ಮುಚ್ಚದ ಕಾರಣ ಮಳೆ ನೀರು ನಿಂತು ಎಲ್ಲೆಂದರಲ್ಲಿ ಗುಂಡಿಗಳು ನಿರ್ಮಾಣವಾಗುತ್ತಿವೆ. ಇದರಿಂದ ಪಟ್ಟಣ ವ್ಯಾಪ್ತಿಯ ರಸ್ತೆಗಳು ಹದಗೆಡುತ್ತಿವೆ.

Advertisement

ವಿಶೇಷವಾಗಿ ದ್ವಿಚಕ್ರ ಹಾಗೂ ಲಘುವಾಹನ ಚಾಲಕರು ಇಂತಹ ರಸ್ತೆ ಮೇಲೆ ಸಂಚರಿಸಲು ಸರ್ಕಸ್‌ ಮಾಡದೇ ವಿಧಿಯಿಲ್ಲ ಎನ್ನುವಂತಾಗಿದೆ. ರಸ್ತೆ ಅಡಿತದಿಂದ ಕುಡಿಯುವ ನೀರಿನ ಪೈಪ್‌ಗ್ಳು ಹಾಳಾಗುತ್ತಿವೆ. ಕೆಲವೆಡೆ ಪೈಪ್‌ಗ್ಳು ಒಡೆದು ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.

ಇದರ ಜತೆಗೆ ಬೀದಿ ದೀಪಗಳ ವ್ಯವಸ್ಥೆಗೂ ಆಗಾಗ ಧಕ್ಕೆ ಉಂಟಾಗುತ್ತಿದೆ. ಚರಂಡಿಗಳಿಲ್ಲದ ಕಾರಣ ಮೋರಿ ನೀರನ್ನು ರಸ್ತೆ ಮೇಲೆ ಬಿಡುತ್ತಿರುವುದರಿಂದ ರಸ್ತೆ ಸಂಪೂರ್ಣ ಗಲೀಜಾಗಿ ಪರಿಣಮಿಸುತ್ತಿದೆ.

ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆಗಳನ್ನು ಅಗೆಯುತ್ತಿದ್ದಾರೆ. ಕೆಲಸವಾದ ಕೂಡಲೇ ಅದನ್ನು ಮುಚ್ಚಬೇಕು ಎನ್ನುವ ಪರಿಕಲ್ಪನೆಯೂ ಇವರಿಗಿಲ್ಲ. ಹೀಗಾಗಿ ರಸ್ತೆಗಳಲ್ಲಿ ಓಡಾಡಲು ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ. ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.
 ರಾಕೇಶ ಕರದಾಳ, ಸ್ಥಳೀಯ ನಿವಾಸಿ

ಪಟ್ಟಣದಲ್ಲಿ ತಮ್ಮ ಮನಸ್ಸಿಗೆ ಹೇಗೆ ಬರುತ್ತದೋ ಹಾಗೆ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿರುವುದರಿಂದ ತಗ್ಗುಗಳು ಬಿದ್ದಿವೆ. ಪುರಸಭೆ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮೂರ್‍ನಾಲ್ಕು ತಿಂಗಳಾದ್ರೂ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೇ ಪುರಸಭೆ ಸಂಪೂರ್ಣ ಬಣಬಣ ಕಾಣುತ್ತಿದೆ. 
 ಸುರೇಶ ಬೆನಕನಳ್ಳಿ, ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕರು

ನಾನು ಪುರಸಭೆಗೆ ಬಂದು ಮೂರ್‍ನಾಲ್ಕು ದಿನ ಮಾತ್ರ ಆಯಿತು. ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಸಂಬಂಧಪಟ್ಟ ಇಂಜಿನಿಯರ್‌ಗೆ ಕರೆ ಮಾಡಿ ತಿಳಿಸಿದ್ದೇನೆ. ಅವರು ಬಂದ ಕೂಡಲೇ ಮನೆಮನೆಗೆ ಹೋಗಿ ಪರಿಶೀಲಿಸಲಾಗುವುದು. 
 ಮನೋಜಕುಮಾರ, ಪುರಸಭೆ ಮುಖ್ಯಾಧಿಕಾರಿ

ಪಟ್ಟಣದಲ್ಲಿ ಮೊದಲು ಯುಜಿಡಿ ಕೆಲಸಕ್ಕೆಂದು ರಸ್ತೆಗಳನ್ನು ಅಗೆದರು. ಕೆಲಸವಾದ ನಂತರ ಅದನ್ನು ಮುಚ್ಚಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದರು. ಇದೀಗ ಶೌಚಾಲಯಕ್ಕೆ ಪೈಪ್‌ಗ್ಳನ್ನು ಹಾಕಬೇಕು ಎಂದು ರಸ್ತೆ ಹಾಳು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.
 ನರಹರಿ ಕುಲಕರ್ಣಿ, ಕರವೇ ತಾಲೂಕು ಅಧ್ಯಕ್ಷ

„ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next