ವಾಡಿ: ಸ್ಥಳೀಯ ಎಸಿಸಿ ಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಶನಿವಾರ ಅರೆಬೆತ್ತಲೆ ಹೋರಾಟ ನಡೆಸಿದರು. ಬಸವೇಶ್ವರ ವೃತ್ತದಿಂದ ಎಸಿಸಿ ಕಾರ್ಖಾನೆ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಸಿಸಿ
ಸಿಮೆಂಟ್ ಕಂಪನಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿ ಮುಖ್ಯ ದ್ವಾರದ ಎದುರು ಉರುಳು ಸೇವೆ ಮಾಡುವ ಮೂಲಕ ಎಚ್ಚರಿಕೆ ರವಾನಿಸಿದ ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ಅವರು, ಡಾ| ಎಸ್.ಬಿ. ಸಿಂಗ್ ಎನ್ನುವ ಎಸಿಸಿ ಕ್ಲಸ್ಟರ್ ಮುಖ್ಯಸ್ಥ ಸ್ಥಳಿಯರ ಉದ್ಯೋಗದ ಹಕ್ಕು ಕಸಿಯುತ್ತಿದ್ದಾರೆ. ಇವರು ವಾಡಿಗೆ ಬಂದು ಹತ್ತಾರು ವರ್ಷಗಳಾದವು. ಗುತ್ತಿಗೆ ಆಧಾರದ ಮೇಲೆ ಹೊರ ರಾಜ್ಯದ ಕಾರ್ಮಿಕರನ್ನು ಕರೆತರುವ ಮೂಲಕ ಸ್ಥಳೀಯ ನಿರುದ್ಯೋಗಿ
ಯುವಕರನ್ನು ಉದ್ಯೋಗ ನೀಡದೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ| ಸರೋಜಿನಿ ಮಹಿಷಿ ವರದಿ ಪ್ರಕಾರ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಗುತ್ತಿಗೆ ಕಾರ್ಮಿಕರ ಕಾರ್ಯ ಕೌಶಲ್ಯ ಪರಿಗಣಿಸಿ ವೇತನ ಹೆಚ್ಚಿಸಬೇಕು. ಕೂಲಿ ಕಾರ್ಮಿಕರಿಗೆ ವಿದ್ಯಾರ್ಹತೆ ಕೇಳಬಾರದು. ಹೊರ ಗುತ್ತಿಗೆ ಪದ್ಧತಿ ಕೈಬಿಡಬೇಕು. ಸಿಮೆಂಟ್ ಧೂಳಿನಿಂದ ಆರೋಗ್ಯ ಹಾಳಾಗುತ್ತಿದ್ದು, ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕಾರ್ಮಿಕರಿಗೆ ಕಂಪನಿಯಿಂದಲೇ ಬೆಲ್ಲ ಮತ್ತು ಎಣ್ಣೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಕರವೇ ವಲಯ ಅಧ್ಯಕ್ಷ ಶ್ರೀನಿವಾಸ ವಗ್ಗರ, ನಗರ ಘಟಕದ ಅಧ್ಯಕ್ಷ ಸಿದ್ಧು ಪೂಜಾರಿ, ಲಕ್ಷ್ಮೀಕಾಂತ ತರನಳ್ಳಿ, ಜಗನ್ನಾಥ ಜಾಧವ್, ಹಣಮಂತ ಶಿವುಪುರ, ಅವಿನಾಶ ಗುತ್ತೇದಾರ, ತುಳಸಿರಾಮ ಸಿಂಧೆ, ಬಾಬು ಅರಿಕೇರಿ, ಮಹಾಲಿಂಗ ಶೆಳ್ಳಗಿ, ಶರಣು ಒಡೆಯರಾಜ, ವಿಕ್ರಮ ನಾಟೀಕಾರ, ಕರುಣೇಶ ನಾಟೀಕಾರ, ಲಾಲ್ ಅಹ್ಮದ್, ಸ್ಟಾನಲಿ ನಮಲ್, ಭೀಮು ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು. ನಾಲವಾರ ಉಪ ತಹಶೀಲ್ದಾರ ವೆಂಕನಗೌಡ ಬಿ.ಪಾಟೀಲ ಮನವಿ ಸ್ವೀಕರಿಸಿದರು.