ಚಿತ್ತಾಪುರ: ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿನ ಪ್ರಭಾರಿ ಅಧಿಕಾರಿಗಳನ್ನು ತೆಗೆದು ಕಾಯಂ ಅಧಿಕಾರಿಗಳ ನಿಯೋಜನೆ ಮಾಡಬೇಕು ಮತ್ತು ಐದರಿಂದ ಹತ್ತು ವರ್ಷಗಳಿಂದ ಸೇವೆಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ಮಾತನಾಡಿ, ತಾಲೂಕು ಆಡಳಿತ ಪ್ರಭಾರಿ ಅಧಿಕಾರಿಗಳಿಂದ ಹದಗೆಟ್ಟಿದೆ. ಸಾರ್ವಜನಿಕರ ಕೆಲಸ-ಕಾರ್ಯ ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ದೂರದ ಗ್ರಾಮಗಳಿಂದ ಬರುವ ಗ್ರಾಮಸ್ಥರಿಗೆ ಅಧಿಕಾರಿಗಳು, ಸಿಬ್ಬಂದಿ ಸಿಗುತ್ತಿಲ್ಲ. ಆದ್ದರಿಂದ ಈಗಿರುವ ಪ್ರಭಾರಿ ಅಧಿಕಾರಿಗಳನ್ನು ತೆಗೆದು ಕಾಯಂ ಅಧಿಕಾರಿಗಳನ್ನು ನಿಯೋಜಿಸಿ ಎಂದು ಆಗ್ರಹಿಸಿದರು.
ತಾಲೂಕು ಮಟ್ಟದ ಪ್ರಮುಖ ಕಚೇರಿಗಳಾದ ತಾಪಂ ಕಾರ್ಯಾಲಯದಲ್ಲಿ ಪ್ರಮುಖ ಹುದ್ದೆ ಕಾರ್ಯನಿರ್ವಾಹಕ ಅಧಿಕಾರಿಗಳದ್ದು. ಈ ಹುದ್ದೆಯೂ ಪ್ರಭಾರಿಯಾಗಿದ್ದು, ಅಧಿಕಾರಿಗಳು ಕಚೇರಿಗೆ ಯಾವಾಗ ಬರುತ್ತಾರೆ, ಹೋಗುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಲ್ಲದೇ ಒಟ್ಟು 16 ಸಿಬ್ಬಂದಿ ಕೊರತೆ ಇದೆ. ಹೀಗಾಗಿ ತಾಪಂ ಕಚೇರಿ ಇದ್ದು ಇಲ್ಲದಂತಾಗಿದೆ. ಸಮಾಜ ಕಲ್ಯಾಣಾಧಿಕಾರಿ ಪ್ರಭಾರಿ ಇರುವುದರಿಂದ ಕಚೇರಿಗೆ ವಾರದಲ್ಲಿ ಒಂದು ಬಾರಿ ಬಂದು ಹೋಗುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಇವರನ್ನು ಭೇಟಿ ಮಾಡಲಿಕ್ಕೆ ಕಲಬುರಗಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ, ಅಲ್ಪಸಂಖ್ಯಾತ ಇಲಾಖೆ, ಕೈಗಾರಿಕೆ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳಲ್ಲಿ ಪ್ರಭಾರಿಗಳ ದರ್ಬಾರ್ ನಡೆದಿದೆ. ಇನ್ನೊಂದೆಡೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಐದರಿಂದ 10 ವರ್ಷ ಕಾಲ ಸೇವೆಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಮೇಲೆ ಮತ್ತು ಸ್ಥಳೀಯ ರಾಜಕಾರಣಿಗಳ ಮೇಲೆ ಹಿಡಿತ ಸಾಧಿಸಿ ಮೆರೆಯುತ್ತಿದ್ದಾರೆ. ಆದ್ದರಿಂದ ಇವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಡಿವೈಎಸ್ಪಿ ಕೆ.ಬಸವರಾಜ ಕರವೇ ಪದಾಧಿಕಾರಿಗಳಾದ ಬಸವರಾಜ ಮಡಿವಾಳ, ಸಂತೋಷಕುಮಾರ ಸನ್ನತಿ, ಜಗದೇವಪ್ಪ ಮುಕ್ತೇದಾರ, ತಿಮ್ಮಪ್ಪ ಜಂಗಳಿ, ಕಜಾಪ ಅಧ್ಯಕ್ಷ ಚೆನ್ನವೀರ ಕಣಗಿ ಹಾಗೂ ಮತ್ತಿತರರು ಇದ್ದರು.