Advertisement

ಪುಸ್ತಕ ನೋಡಿ ಪರೀಕ್ಷೆ ಬರೆಯಬಹುದು…

06:00 AM Aug 20, 2018 | Team Udayavani |

ಬೆಂಗಳೂರು: ಪ್ರಾಥಮಿಕ ಶಾಲಾ ಮಕ್ಕಳಿಗೆ “ತೆರೆದ ಪುಸ್ತಕ ಪರೀಕ್ಷೆ’ ನಡೆಸಬೇಕೆಂಬ ಪ್ರಾಥಮಿಕ  ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರ ಬಯಕೆಗೆ ತಕ್ಕಂತೆ ಶಿಕ್ಷಣ ಇಲಾಖೆಯೂ ಪೂರಕವಾಗಿ ಸ್ಪಂದಿಸಿದೆ. ಇಲಾಖೆಯ ಸಂಶೋಧನೆ ಮತ್ತು ತರಬೇತಿ ವಿಭಾಗ (ಡಿಎಸ್‌ಇಆರ್‌ಟಿ) ಇಲಾಖಾ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯು ಸಚಿವರ ಬಯಕೆಗೆ ಸಕಾರಾತ್ಮಕವಾಗಿದೆ.

Advertisement

ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಠ್ಯ ಪುಸ್ತಕ ಇರಬೇಕು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು, ಯಾವ ತರಗತಿಯ ಮಕ್ಕಳಿಗೆ ತೆರೆದ ಪುಸ್ತಕ  ಪರೀಕ್ಷೆ ನಡೆಸಬೇಕು ಎನ್ನುವ ಕುರಿತಂತೆ ಬಿಇಓಗಳ ಅಭಿಪ್ರಾಯ ಸಂಗ್ರಹಿಸಿರುವ ಡಿಎಸ್‌ಇಆರ್‌ಟಿ ಸರ್ಕಾರಕ್ಕೆ ಸಲ್ಲಿಸಿರುವ ವರದಿ ತೆರೆದ ಪುಸ್ತಕ ಪರೀಕ್ಷೆ ನಡೆಸುವ ವಿಚಾರದಲ್ಲಿ ಸಚಿವರ ನಿರೀಕ್ಷೆಗೆ ತಕ್ಕಂತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ತೆರೆದ ಪುಸ್ತಕ ಪರೀಕ್ಷೆ ಕುರಿತಂತೆ ಶಿಕ್ಷಕರ ಅಭಿಪ್ರಾಯವನ್ನೂ ಪಡೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸಚಿವರ ಮಹಾತ್ವಾಕಾಂಕ್ಷಿ ಯೋಚನೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸುವಂತಹದ್ದಾಗಿರುವುದರಿಂದ ಈ ವ್ಯವಸ್ಥೆಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿಕ್ಷಕರ ಅಭಿಪ್ರಾಯವೂ ಅಗತ್ಯವಿದೆ ಎಂಬ ಅಭಿಪ್ರಾಯಕ್ಕೆ ಬಂದಿರುವ ಡಿಎಸ್‌ಇಆರ್‌ಟಿ, ಪ್ರತಿಯೊಂದು ವಿಷಯದ ಬಗ್ಗೆ  ಸಂಬಂಧಪಟ್ಟ  ವಿಷಯದ ಶಿಕ್ಷಕರಿಂದಲೂ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಶೈಕ್ಷಣಿಕ ಬೆಳವಣಿಗೆ ಕುರಿತಂತೆ ಶಿಕ್ಷಕರಿಗೆ ತರಬೇತಿ ಆರಂಭವಾಗುತ್ತಿದ್ದು, ತರಬೇತಿ ವೇಳೆ ತೆರೆದ ಪುಸ್ತಕ ಪರೀಕ್ಷೆ ಕುರಿತು ಚರ್ಚಿಸಲು ಪ್ರತ್ಯೇಕ ಸಮಯ ನಿಗದಿಪಡಿಸಿ ಪ್ರತಿಯೊಬ್ಬ ಶಿಕ್ಷಕರೂ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಲು ಇಲಾಖೆ ತೀರ್ಮಾನಿಸಿದೆ.

ತೆರೆದ ಪುಸ್ತಕ ಪರೀಕ್ಷೆಯನ್ನು ಯಾವ ವರ್ಗದ ಮಕ್ಕಳಿಗೆ ನಡೆಸಬೇಕು? ಅದಕ್ಕಾಗಿ ಈಗಿರುವ ಪಠ್ಯ ಕ್ರಮದಲ್ಲಿ ಬದಲಾವಣೆ ಮಾಡಬೇಕೇ ಅಥವಾ ಈಗಿರುವ ಪಠ್ಯಕ್ರಮದಲ್ಲೇ ತೆರೆದ ಪುಸ್ತಕ ಪರೀಕ್ಷೆ ನಡೆಸಲು ಸಾಧ್ಯವೇ ಎಂಬ ಬಗ್ಗೆ ಶಿಕ್ಷಕರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಒಂದೊಮ್ಮೆ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಬೇಕೆಂದರೆ ಅದಕ್ಕೆ ಶಿಕ್ಷಣ ತಜ್ಞರ ಪ್ರತ್ಯೇಕ ಸಮಿತಿ ರಚಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿಯೂ ಸರ್ಕಾರ ಆಲೋಚನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಜ್ಞರ ಆಕ್ಷೇಪ:
ಆದರೆ, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸುವ ಸರ್ಕಾರದ ಕ್ರಮಕ್ಕೆ ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರ್‌ಟಿಇ ಕಾಯ್ದೆಯಲ್ಲಿ ಪರೀಕ್ಷೆ ಯಾವ ರೀತಿ ನಡೆಸಬೇಕು ಎನ್ನುವ ಕುರಿತು ವಿವರವಾಗಿ ತಿಳಿಸಲಾಗಿದೆ. ಈಗಿರುವ ಕಾಯ್ದೆಯಲ್ಲಿ ಪರೀಕ್ಷೆಯ ಭಯ ಹೋಗಲಾಡಿಸಲು ಮಕ್ಕಳಿಗೆ ನಿರಂತರ ಮೌಲ್ಯಮಾಪನ ಮಾಡುವ ವ್ಯವಸ್ಥೆ  ಇದೆ. ರಾಷ್ಟ್ರೀಯ ಪಠ್ಯ ಕ್ರಮದಲ್ಲೂ ಪರೀಕ್ಷೆಯ ಭಯ ಹೋಗಲಾಡಿಸಲು ನಿರಂತರ ಮೌಲ್ಯಮಾಪನ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಎನ್‌ಸಿಆರ್‌ಟಿ ಹೇಳಿದೆ. ಹೀಗಿರುವಾಗ ಅದು ತೆರೆದ ಪುಸ್ತಕ ಪರೀಕ್ಷೇಯೇ ಆಗಿರಲಿ,  ಪರೀಕ್ಷೆ ವ್ಯವಸ್ಥೆ ಜಾರಿಗೆ ತಂದರೆ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಶಿಕ್ಷಣ ತಜ್ಞರಿಂದ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ದೇಶಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಒತ್ತಾಯ ಸಾರ್ವತ್ರಿಕವಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸಚಿವರು ಹೊಸದಾಗಿ ಬಂದಾಗ ಪ್ರಾಥಮಿಕ ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳನ್ನು ಪ್ರಯೋಗಕ್ಕೆ ವೇದಿಕೆ ಮಾಡಿಕೊಳ್ಳುವುದು ಸರಿಯಲ್ಲ. ಇರುವ ವ್ಯವಸ್ಥೆ ಬಗ್ಗೆ ಸಚಿವರಿಗೆ ಸಮಾಧಾನ ಇಲ್ಲದಿದ್ದರೆ ಅಥವಾ ಅದರಲ್ಲಿ ಸಮಸ್ಯೆ ಇದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಅವರು ಹೇಳುತ್ತಾರೆ.

ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳು ಸಚಿವರ ಅಭಿಪ್ರಾಯಕ್ಕೆ ವಿರುದ್ಧವಾಗಿ ವರದಿ ನೀಡಲು ಸಾಧ್ಯವಿಲ್ಲ. ಅದರಂತೆ ತೆರೆದ ಪುಸ್ತಕ ಪರೀಕ್ಷೆ ಕುರಿತಂತೆ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ. ಇದನ್ನು ಜಾರಿಗೊಳಿಸುವ ಮುನ್ನ ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ಇಲಾಖಾ ಹಂತದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಂಗ್ರಹಿಸಿದ ಅಭಿಪ್ರಾಯದ ಅನುಸಾರ ಒಂದು ಹಂತದ ವರದಿಯನ್ನು ಸರ್ಕಾರಕ್ಕೆ ನೀಡಿದ್ದೇವೆ. ಈ ವರದಿ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕಿದೆ.
– ಗೋಪಾಲಕೃಷ್ಣ, ನಿರ್ದೇಶಕರು, ಡಿಎಸ್‌ಇಆರ್‌ಟಿ

ಹೊಸದಾಗಿ ಬಂದ ಸಚಿವರೆಲ್ಲರೂ ತಮಗೆ ಅನಿಸಿದ್ದನ್ನು ಪ್ರಯೋಗ ಮಾಡಲು ಹೋಗುವುದು ಎಷ್ಟು ಸರಿ? ಸರ್ಕಾರಿ ಶಾಲೆಗಳನ್ನು ಪ್ರಯೋಗ ಕೇಂದ್ರಗಳನ್ನಾಗಿ ಮಾಡುವುದು ಸರಿಯಲ್ಲ. ಸಚಿವರ ಆಲೋಚನೆ ಆರ್‌ಟಿಇ ಕಾಯ್ದೆಯ ವಿರುದ್ಧವಾಗಿದೆ. ಇಲಾಖೆ ಅಧಿಕಾರಿಗಳು ಸರ್ಕಾರದ ವಿರುದ್ಧ ವರದಿ ಕೊಡಲು ಸಾಧ್ಯವಿಲ್ಲ.
– ಡಾ.ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

1ರಿಂದ 5 ನೇ ತರಗತಿ ಮಕ್ಕಳಿಗೆ ಪರೀಕ್ಷೆ  ನಡೆಸುವುದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ಆಗುವುದು ಉತ್ತಮ. ಸರ್ಕಾರ ಶಿಕ್ಷಕರ ಅಭಿಪ್ರಾಯವನ್ನೂ  ಪಡೆಯಲಿ. ಮಕ್ಕಳಿಗೆ ಪರೀಕ್ಷೆ ಎಂಬ ಭಯ ಬರುವುದು ಬೇಡ.
– ಬಸವರಾಜ್‌ ಗುರಿಕಾರ, ಉಪಾಧ್ಯಕ್ಷರು, ಅಖೀಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್‌

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next