ಸ್ವಾರ್ಥ ಎಂಬ ಪದ ಕೇಳಿದ್ದೆನಾದರೂ ಸ್ಪಷ್ಟ ಅರ್ಥ ನನಗೆ ಈಗ ಸಿಗುತ್ತಿದೆ. ಅದಕ್ಕೆ ಕಾರಣ ಪ್ರೀತಿ. ಅದನ್ನು ಕೊಟ್ಟವಳು ನೀನು. ಅದಕ್ಕಾಗಿ ಅಭಿಮಾನ ಪಡಲೋ, ಆ ಪ್ರೀತಿಯಲ್ಲಿಯೇ ನನ್ನ ಮನಸು ಗಿರಿಕಿ ಹೊಡೆಯುತ್ತಿದೆಯಲ್ಲ ಎಂದು ಬೇಜಾರು ಪಟ್ಟುಕೊಳ್ಳಲೋ ಎಂಬಂತಹ ಸಂದಿಗ್ಧತೆ. ನನ್ನಷ್ಟಕ್ಕೆ ನಾನಿದ್ದೆ. ಆಗಲೇ ನೀನು ನನ್ನ ಬಾಳಲ್ಲಿ ಪ್ರವೇಶಿಸಿದೆ. ಬರಡಾಗಿದ್ದ ಈ ಹೃದಯದಲ್ಲಿ ಪ್ರೀತಿಯ ಸಸಿ ಮೊಳಕೆಯೊಡೆಯುವಂತೆ ಮಾಡಿದೆ. ಹೊಸದಾದ ಲೋಕವೊಂದನ್ನು ತೆರೆದಿಟ್ಟೆ. ಕುಂತರೂ ನಿಂತರೂ ನಿಂದೇ ಧ್ಯಾನ. ಸದಾ ನನ್ನೆದುರಿನಲ್ಲಿಯೇ ಇರಬೇಕು. ನನ್ನೊಂದಿಗೆ ನಮ್ಮ ಮುಂದಿನ ಜೀವನದ ಬಗ್ಗೆ ಮಾತನಾಡುತ್ತಿರಬೇಕು ಎಂದೆಲ್ಲಾ ಮನಸು ಬಯಸುತ್ತಿತ್ತು. ಅದೇನು ಮೋಡಿಯೋ ಏನೋ, ನೀ ಕಂಡರೆ ಗೆಲುವಾಗುತಿದ್ದೆ. ಆಗಲೇ ಪ್ರಾರಂಭವಾದ್ದು ನೀನು ಸದಾ ನನ್ನೊಂದಿಗಿರಬೇಕೆಂಬ ಸ್ವಾರ್ಥ. ಮನಸಿನ ನಾಗಾಲೋಟ ಬರೀ ಇಲ್ಲಿಗೇ ನಿಲ್ಲುತ್ತಿಲ್ಲ. ನಿನ್ನ ಮನಸು ಕೂಡಾ ಸದಾ ನನ್ನನ್ನೇ ಬಯಸುತ್ತಿರಬೇಕು ಎಂದು ನಿರೀಕ್ಷಿಸಿದವ ನಾನು. ನಿನ್ನೆ ದಿನ ನಿನ್ನ ತುಂಬಾ ನೆನಪು ಮಾಡಿಕೊಂಡೆ ಎಂದಾಗ, ಮಂಗನಂತೆ ಮನಸು ಹುಚ್ಚೆದ್ದು ಕುಣಿಯುತ್ತದೆ. ಐ ಮಿಸ್ ಯೂ ಕಣೋ ಎಂದಾಗ ಕೆಟ್ಟ ಖುಷಿಯಾಗುತ್ತದೆ. ನನ್ನೆದುರಿನಲ್ಲಿ ಬೇರೊಬ್ಬ ಹುಡುಗನ ಬಗ್ಗೆ ಹೆಮ್ಮೆ ಪಡಬಾರದು. ಕೊನೆಗೆ ಅವನ ಹೆಸರು ಕೂಡಾ ಹೇಳಬಾರದು ಎನ್ನುವಂತಹ ಸ್ಯಾಡಿಸ್ಟ್ ಮನೋಭಾವ ಬೆಳೆಯುವದಕ್ಕೆ ಕಾರಣ ಈ ಪ್ರೀತಿನಾ? ತಿಳಿಯುತ್ತಿಲ್ಲ. ನಾನು ಮಾಡ್ತಿರೋ, ವಿಚಾರಿಸೋ ರೀತಿ ಇದೆಯಲ್ಲ, ಅದು ತಪ್ಪು ಅಂತ ಮನಸು ಹೇಳುತಿದ್ದರೂ ನಾನು ಬದಲಾಗ್ತಿàನಾ? ನೋ ಛಾನ್ಸ್! ಸ್ವಾರ್ಥದ ಹಿಂದಿರೋ ಆ ಪ್ರೀತಿಯ ಶಕ್ತಿನೇ ಅಂತಹದ್ದೇನೋ.
ನಾಲ್ಕು ಜನ ಹುಡುಗಿಯರ ಜೊತೆ ಹರಟುತ್ತ, ನಗುತ್ತ ಹೊರಟಿರುವದನ್ನು ನೋಡುತಿದ್ದರೆ ನನ್ನ ಹೊಟ್ಟೆಯಲ್ಲಿ ಖಾರ ಕಲಸಿದಷ್ಟು ಹೊಟ್ಟೆಕಿಚ್ಚು. ನಿನ್ನ ಕಣ್ಣು ನನ್ನನ್ನು ಹುಡುಕುವುದ ಬಿಟ್ಟು ನಿನಗೆ ನಗು ಬಂದದ್ದಾದರೂ ಹೇಗೆ ಅಂತ. ನಾನೇಕೆ ಹೀಗಾದೆ? ನನ್ನ ಮನೋಭಾವವೇಕೆ
ಬದಲಾಯಿತು? ಅದಕ್ಕೆ ಕಾರಣ ನೀನು ಹಾಗೂ ನಿನ್ನ ಪ್ರೀತಿ. ಕೊನೆಯದಾಗಿ ಹೇಳ್ತಿದ್ದೀನಿ. ಸಂತೆಯಲ್ಲಿದ್ದರೂ ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ. ಲವ್ ಯೂ ಎ ಲಾಟ್.
ಭೋಜರಾಜ ಸೊಪ್ಪಿಮಠ